ಬಡವರು, ಶ್ರಮಿಕರು, ರೈತರ ಪರ ಇರುತ್ತೇನೆ: ಬಿ. ಶ್ರೀರಾಮುಲು

KannadaprabhaNewsNetwork |  
Published : Feb 04, 2025, 12:30 AM IST
ಶ್ರೀರಾಮುಲು | Kannada Prabha

ಸಾರಾಂಶ

ಶ್ರೀರಾಮುಲು ಅವರು ಯಾವತ್ತೂ ಪಕ್ಷ ಬಿಟ್ಟು ಹೋಗಲ್ಲ, ಇದು ರಾಜ್ಯದ ಜನರಿಗೆ ಗೊತ್ತಿದೆ. ಹೋಗಬೇಕು ಅನ್ನೋದು ನನ್ನ ಮನಸ್ಥಿತಿ ಅಲ್ಲ, ನಾನು ಹೋಗಬೇಕೆಂದ್ರೆ ನನ್ನನ್ನು ತಡೆಯೋಕೆ ಆಗುತ್ತಾ ಎಂದು ಶ್ರೀರಾಮುಲು ಪ್ರಶ್ನಿಸಿದ್ದಾರೆ.

ಗದಗ: ನಾನು ಪಕ್ಷ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ, ಪಕ್ಷ ಬಿಡುವ ಸಂದರ್ಭ ಬಂದಲ್ಲಿ ಹೇಳಿಯೇ ಹೋಗುತ್ತೇನೆ. ಆದರೆ ಬಡವರು, ಶ್ರಮಿಕರು, ರೈತರ ಪರ ಇರುವ ಕಾರ್ಯಕರ್ತರ ಜತೆ ಇರುತ್ತೇನೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಅವರು ಯಾವತ್ತೂ ಪಕ್ಷ ಬಿಟ್ಟು ಹೋಗಲ್ಲ, ಇದು ರಾಜ್ಯದ ಜನರಿಗೆ ಗೊತ್ತಿದೆ. ಹೋಗಬೇಕು ಅನ್ನೋದು ನನ್ನ ಮನಸ್ಥಿತಿ ಅಲ್ಲ, ನಾನು ಹೋಗಬೇಕೆಂದ್ರೆ ನನ್ನನ್ನು ತಡೆಯೋಕೆ ಆಗುತ್ತಾ? ಜೈಲಿನಲ್ಲಿ ಇಡೋಕ್ಕೆ ಆಗುತ್ತಾ? ಈಗಿನ ಕಾಲದಲ್ಲಿ ಯಾರು ಯಾರ ಮಾತು ಕೇಳೋಲ್ಲ ಎಂದರು.

ಕೆಲವು ಮಂದಿ ಮಾತಾಡಿ ದೊಡ್ಡವರಾಗಿರುತ್ತಾರೆ. ಎಲ್ಲಿ ಹೊರಗಡೆ ಹೋಗದೆ ಹಾಗೇ ದೊಡ್ಡ ನಾಯಕರಾಗಿ ಬಿಂಬಿಸಿಕೊಂಡಿರುತ್ತಾರೆ. ಅಂಥವರ ಬಗ್ಗೆ ಕಿವಿಕೊಡುವ ಅಗತ್ಯವಿಲ್ಲ. ಅಂಥವರ ಬಗ್ಗೆ ಕೇಳುವ ಅಗತ್ಯವಿಲ್ಲ. ಯಾರು ಕ್ಷೇತ್ರದಲ್ಲಿ ಶ್ರಮಪಟ್ಟು ಕೆಲಸ ಮಾಡ್ತಾರೆ ಅಂಥವರನ್ನು ಗುರುತಿಸಬೇಕು. ರಾಜಕಾರಣದಲ್ಲಿ ಏಳೆಂಟು ಪರ್ಸೆಂಟ್‌ ಜನರ ಮತ ಸೆಳೆಯುವುದು ದೊಡ್ಡದೇನಲ್ಲ, ಅಂತಹ ವ್ಯಕ್ತಿಗಳನ್ನು ಗುರುತಿಸುವ ಕೆಲಸ ಆಗಬೇಕು. ಅಂದಾಗ ಮಾತ್ರ 2028ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.

ಇದನ್ನೆಲ್ಲ ರಾಷ್ಟ್ರೀಯ ನಾಯಕರೇ ಸರಿಪಡಿಸಬೇಕು. ರಾಷ್ಟ್ರೀಯ ನಾಯಕರು ಯಾರು ದುಡಿತಾರೋ ಅಂಥವರನ್ನು ಗುರುತಿಸಿ, ಗೌರವಿಸಬೇಕು. ಅಂದಾಗ ಮಾತ್ರ ಸ್ವಾಭಿಮಾನ ಬಂದು ಪಕ್ಷಕ್ಕಾಗಿ ದುಡಿಯುತ್ತಾನೆ, ಅತಿ ಹೆಚ್ಚು ಮತಗಳನ್ನು ತರುತ್ತಾನೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನ ಭಾಗದಲ್ಲಿ ಹೋದರೆ ಅಶ್ವತ ನಾರಾಯಣ ರಾಜ್ಯಾಧ್ಯಕ್ಷ ಆಗಬೇಕು ಎಂಬುದು ಅವರ ಮನಸ್ಸಿನಲ್ಲಿರಬಹುದು. ಬಾಗಲಕೋಟೆ ಕಡೆಗೆ ಬಂದರೆ ಯತ್ನಾಳ ಅವರು ರಾಜ್ಯಾಧ್ಯಕ್ಷ ಆಗಬೇಕು ಅಂತಾರೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಹೋದರೆ ಶ್ರೀರಾಮುಲು ರಾಜ್ಯಾಧ್ಯಕ್ಷ ಆಗಬೇಕು ಅಂತಾರೆ, ಬೆಳಗಾವಿ ಕಡೆಗೆ ಹೋದರೆ ರಮೇಶ ಜಾರಕಿಹೊಳಿ ರಾಜ್ಯಾಧ್ಯಕ್ಷ ಆಗಬೇಕು ಅಂತಾರೆ, ಕರಾವಳಿ ಭಾಗದಲ್ಲಿ ಅನಂತ ಕುಮಾರ ಹೆಗಡೆ ಆಗಬೇಕು ಅಂತಾರೆ, ಹೀಗಾಗಿ ಎಲ್ಲರ ಆಸೆ ಇರಬಹುದು. ಒಂದು ಸಾರಿ ಪಕ್ಷ ತೀರ್ಮಾನ ಮಾಡಿದ ಮೇಲೆ ಸರಿಪಡಿಸುವ ಕೆಲಸ ಮಾಡಬೇಕಿದೆ ಎಂದರು.

ರಾಜಕೀಯ ವ್ಯವಸ್ಥೆಯಲ್ಲಿ ತಪ್ಪು ನಡೆಯುತ್ತಿರುತ್ತವೆ. ಹಾಗೆಯೇ ತಪ್ಪು ನಡೆದಾಗ ರಾಷ್ಟ್ರೀಯ ನಾಯಕರು ಸರಿ ಪಡಿಸಬೇಕು. ರಾಷ್ಟ್ರೀಯ ನಾಯಕರು ಬಿಗಿಯಾಗಿ ಹಿಡಿದುಕೊಂಡು ತಪ್ಪು ಸರಿ ಬಗ್ಗೆ ತಿಳಿ ಹೇಳಬೇಕು, ಅಂದಾಗ ಮಾತ್ರ ಪಕ್ಷದಲ್ಲಿ ಒಂದಾಗುವ ಸಾಧ್ಯತೆ ಇರುತ್ತದೆ ಎಂದರು.

ದೆಹಲಿಗೆ ಅಪಾಯಿಂಟ್‌ಮೆಂಟ್‌ ಮೇಲೆ ಹೋಗಬೇಕು ಅಂತಾ ಏನೂ ಇಲ್ಲ, ಅವಕಾಶ ಸಿಕ್ಕಾಗಲೆಲ್ಲ ಹೋಗುತ್ತಿರುತ್ತೇನೆ. ಮತ್ತೆ ಮುಂದೆಯೂ ಹೋಗುತ್ತೇನೆ. ಎಲ್ಲ ವಿಚಾರವನ್ನು ಹೇಳಿ ಬರುತ್ತೇನೆ. ರಾಮುಲು ಸುಮ್ಮನೆ ಇದ್ದಾರೆ... ಇದ್ದಾರೆ... ಎಂದು ಹೇಳುತ್ತಿದ್ದಾರೆ, ಇನ್ನು ಮುಂದೆ ಸುಮ್ಮನೆ ಇರೋದಿಲ್ಲ. ಇನ್ನು ಮುಂದೆ ನಾನು ಮಾತಾಡುತ್ತೇನೆ. ಯಾರ ಮುಲಾಜು ಇಲ್ದೆ ಮಾತಾಡುತ್ತೇನೆ. ಮಾತಾಡಿದರೆ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಎಂದು ಸುಮ್ಮನೆ ಇದ್ದೆ, ಈ ಬಾರಿ ನಮ್ಮಂತಹವರನ್ನು ಅಪಮಾನ ಮಾಡಿದರೆ ಬೀದಿಗೆ ಇಳಿದು ಮಾತನಾಡುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ