ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಕೆ.ಎಂ.ಉದಯ್

KannadaprabhaNewsNetwork |  
Published : May 31, 2026, 02:00 AM IST
30ಕೆಎಂಎನ್ ಡಿ22 | Kannada Prabha

ಸಾರಾಂಶ

ವಿಪಕ್ಷ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಪ್ರತಿದಿನ ಯಾವುದಾದರೂ ಒಂದು ಆರೋಪ ಮಾಡುತ್ತಿದ್ದರು. ಆದರೆ, ಅವರು ರಾಜೀನಾಮೆ ನೀಡಿದ ಮೇಲೆ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ವಿಚಾರದಲ್ಲಿ ಅವರಿಗೆ ನಾಚಿಕೆ, ಮಾನ, ಮರ್ಯಾದೆ ಏನಾದರೂ ಇದೆಯಾ ಎಂದು ವಾಗ್ದಾಳಿ ನಡೆಸಿದರು.

ಆ ರೇಸ್ನಲ್ಲೂ ನಾನಿಲ್ಲ । ನನ್ನ ಗಮನವೇನಿದ್ದರೂ ನನ್ನ ಕ್ಷೇತ್ರದ ಅಭಿವೃದ್ಧಿಯೆಡೆಗೆ

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕಾಂಗ್ರೆಸ್ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆ ರೇಸ್ ನಲ್ಲಿ ನಾನಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಸ್ಪಷ್ಟಪಡಿಸಿದರು.

ಸಮೀಪದ ಚಂದೂಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಅಂದಾಜು ₹6 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ನನಗೆ ಪ್ರೀತಿ ಕೊಟ್ಟು ಹರಸಿ ಆಶೀರ್ವದಿಸಿ, ನನ್ನ ಕ್ಷೇತ್ರದ ಜನ ಶಾಸಕನನ್ನಾಗಿ ಮಾಡಿ ವಿಧಾನಸೌಧಕ್ಕೆ ಕಳುಹಿಸಿದ್ದಾರೆ. ಶಾಸಕನಾಗಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದನ್ನು ಮೊದಲು ಬಗೆಹರಿಸುವ ಕೆಲಸ ಮಾಡಬೇಕು. ಪಕ್ಷಕ್ಕಾಗಿ ದುಡಿದ ಸಾಕಷ್ಟು ಹಿರಿಯರಿದ್ದು ಮೊದಲು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.

ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಹೀಗಾಗಿ ನಾನು ಯಾವುದೇ ಸ್ಥಾನಮಾನಗಳನ್ನು ನೀಡಿ ಎಂದು ಪಕ್ಷದ ವರಿಷ್ಠರ ಬಳಿ ಬೇಡಿಕೆ ಇಟ್ಟಿಲ್ಲ. 100ಕ್ಕೂ ಹೆಚ್ಚು ಮಂದಿ ಹಿರಿಯ ಶಾಸಕರಿದ್ದಾರೆ. ಜೊತೆಗೆ ಬೇರೆ ಪಕ್ಷಗಳಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರಿಗೂ ಸಹ ಯಾವುದಾದರೂ ಸ್ಥಾನಮಾನ ನೀಡಬೇಕಿದೆ ಎಂದರು.

ನೂತನ ಸರ್ಕಾರದಲ್ಲಿ ಜಿಲ್ಲೆಗೆ ಒಂದು ಮಂತ್ರಿ ಸ್ಥಾನ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಮತ್ತೊಂದು ಸಚಿವ ಸ್ಥಾನ ಸಿಕ್ಕರೆ ಅವರ ಅದೃಷ್ಟ. ಇನ್ನುಳಿದ ಎರಡು ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದ್ದು, ನೀರಾವರಿ ಸಮಸ್ಯೆಯಿಂದ ರೈತರನ್ನು ಪಾರು ಮಾಡಬೇಕಿದೆ ಎಂದು ಹೇಳಿದರು.

ಕೆರೆಗಳು ಮತ್ತು ನಾಲೆಗಳು ಸಾಕಷ್ಟು ಅಧ್ವಾನಗೊಂಡಿತ್ತು. ಅವುಗಳನ್ನು ಅಂದಾಜು ₹800 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಚರಂಡಿ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವುದು ನನ್ನ ಪ್ರಥಮ ಆದ್ಯತೆಯಾಗಿದೆ ಎಂದರು.

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೇರುತ್ತಿರುವುದರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರೀಕ್ಷೆಗೂ ಮೀರಿ ಅನುದಾನ ಬಿಡುಗಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಪಕ್ಷ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಪ್ರತಿದಿನ ಯಾವುದಾದರೂ ಒಂದು ಆರೋಪ ಮಾಡುತ್ತಿದ್ದರು. ಆದರೆ, ಅವರು ರಾಜೀನಾಮೆ ನೀಡಿದ ಮೇಲೆ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ವಿಚಾರದಲ್ಲಿ ಅವರಿಗೆ ನಾಚಿಕೆ, ಮಾನ, ಮರ್ಯಾದೆ ಏನಾದರೂ ಇದೆಯಾ ಎಂದು ವಾಗ್ದಾಳಿ ನಡೆಸಿದರು.

ಶುಕ್ರವಾರ ತಡರಾತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಕಾಂಗ್ರೆಸ್ ಶಾಸಕರ ಸಭೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಸಭೆಯೂ ನಡೆದಿಲ್ಲ. ದೆಹಲಿಯಿಂದ ರಾತ್ರಿ ಬರುವುದು ತಡವಾಯಿತು. ಹೀಗಾಗಿ ಅವರಿಗೆ ಶಾಸಕರೆಲ್ಲಾ ಶುಭಾಶಯ ಕೋರಿದ್ದೇವೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ರಾಜೀವ್, ಗ್ರಾಪಂ ಮಾಜಿ ಅಧ್ಯಕ್ಷ ಹೊಸೂರು ಮಹೇಶ್, ಎಸ್.ಐ.ಹೊನ್ನಲಗೆರೆ ಕೆಂಪೇಗೌಡ, ಹಾಗಲಹಳ್ಳಿ ವಿಶ್ವನಾಥ್, ಶೇಖರ್, ಮಡೇನಹಳ್ಳಿ ಪ್ರಸಾದ್, ಕಾವೇರಿ ನೀರಾವರಿ ನಿಗಮದ ಇಇ ನಾಗರಾಜ್, ಎಇಇ ಪ್ರಶಾಂತ್, ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಬಾಗಿಲಿಗೆ ಮಾವಿನ ಹಣ್ಣು ಯೋಜನೆಗೆ ಚಾಲನೆ
ಸಿಎಲ್ಪಿ ನಾಯಕನಾಗಿ ಡಿಕೆ ಒನ್‌ಲೈನ್‌ ನಿರ್ಣಯ