ಮನೆ ಬಾಗಿಲಿಗೆ ತಾಜಾ ಮಾವಿನ ಹಣ್ಣುಗಳನ್ನು ತಲುಪಿಸುವ ಪಾರ್ಸೆಲ್‌ ಸೇವೆಗೆ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಾಪ್‌ಕಾಮ್ಸ್ ಮತ್ತು ಭಾರತೀಯ ಅಂಚೆ ಇಲಾಖೆ ಸಹಯೋಗದಲ್ಲಿ ‘ರೈತರ ಅಂಚೆ’ ಯೋಜನೆಯಡಿ ಗ್ರಾಹಕರ ಮನೆ ಬಾಗಿಲಿಗೆ ತಾಜಾ ಮಾವಿನ ಹಣ್ಣುಗಳನ್ನು ತಲುಪಿಸುವ ಪಾರ್ಸೆಲ್‌ ಸೇವೆಯನ್ನು ಅಂಚೆ ಇಲಾಖೆ ಶನಿವಾರ ಆರಂಭಿಸಿತು.

ನಗರದ ಜಿಪಿಒ ಮುಖ್ಯಅಂಚೆಪಾಲಕರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಸೇವೆಗೆ ಕರ್ನಾಟಕ ಅಂಚೆ ವಲಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಕೆ.ಪ್ರಕಾಶ್‌ ಅವರು, ಮಾವು ಬೆಳೆಗಾರರೊಂದಿಗೆ ‘ಬುಕ್ ನೌ ಪೇ ಲೇಟರ್’ ಒಪ್ಪಂದದಡಿ ಪಾರ್ಸೆಲ್ ಸೇವೆ ಒದಗಿಸಲಾಗುತ್ತಿದೆ. ಇದರಿಂದ ರೈತರಿಗೆ ಉತ್ತಮ ಬೆಲೆ ದೊರೆಯುವ ಜತೆಗೆ ಗ್ರಾಹಕರಿಗೆ ಮಾವಿನ ಹಣ್ಣು ದೊರೆಯಲಿದೆ. ಪ್ಯಾಕ್‌ ಮಾಡಿದ 3 ಕೆ.ಜಿ ಮಾವಿನ ಹಣ್ಣಿನ ಬಾಕ್ಸ್‌ ಅನ್ನು ಅದೇ ದಿನ ಅಥವಾ ಮರು ದಿನದಂದು ಬುಕಿಂಗ್ ಮಾಡಿರುವ ಗ್ರಾಹಕರಿಗೆ ವಿತರಿಸಲಾಗುವುದು. ಬೆಂಗಳೂರು ನಗರ ಸೇರಿ ದೇಶದ ಆಯ್ದ ಸ್ಥಳಗಳಿಗೆ 24 ಗಂಟೆಯಲ್ಲಿ ಸ್ವೀಡ್ ಸೇವೆಯಡಿ ಹಣ್ಣು ವಿತರಿಸುವ ಸೌಲಭ್ಯವಿದೆ ಎಂದರು.

ಕಳೆದ 2019ರ ಮಾರ್ಚ್‌ನಿಂದ 2025ರ ಜೂನ್‌ವರೆಗೆ 3,81,183 ಕೆಜಿ ಮಾವಿನ ಹಣ್ಣು ಅನ್ನು 1.13 ಲಕ್ಷದ ಪಾರ್ಸೆಲ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಿದ್ದೇವೆ ಎಂದರು.

ಹಾಪ್‌ಕಾಮ್ಸ್ ಅಧ್ಯಕ್ಷ ಎ.ಎಸ್.ಚಂದ್ರೇಗೌಡ ಮಾತನಾಡಿ, ಮೊದಲ ಬಾರಿಗೆ ಹಾಪ್‌ಕಾಮ್ಸ್‌ನಿಂದ ಆನ್‌ಲೈನ್ ವ್ಯಾಪಾರ ಸೇವೆ ಪರಿಚಯಿಸಿದ್ದೇವೆ. ಬೆಂಗಳೂರಿನ ಎಲ್ಲ ಬಡಾವಣೆಗಲ್ಲಿ ಹಾಪ್‌ಕಾಮ್ಸ್ ಮಳಿಗೆಗಳಿಲ್ಲ. ಆದ್ದರಿಂದ, ಗ್ರಾಹಕರಿಗೆ ತಾಜಾ ಹಣ್ಣು ದೊರೆಯಲಿದೆ. ಪ್ರತಿ ಭಾನುವಾರ, ಶನಿವಾರ ಅಪಾರ್ಟ್‌ಮೆಂಟ್‌ಗಳ ಬಳಿಯಲ್ಲಿ 1 ಕೋಟಿ ರು.ಗಳಿಗೂ ಹೆಚ್ಚಿನ ಮೌಲ್ಯದ ಮಾವಿನ ಹಣ್ಣು ಮಾರಾಟ ಮಾಡಿದ್ದೇವೆ. ಅಂಚೆ ಇಲಾಖೆಯಿಂದಲೂ ಕನಿಷ್ಠ 50 ಲಕ್ಷ ರು.ವ್ಯಾಪಾರ ಮಾಡುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ನಿರ್ದೇಶಕ ಇಬ್ರಾಹಿಂ ಮೈಗೂರ್, ರೇಷ್ಮೆ ಇಲಾಖೆ ಕಾರ್ಯದರ್ಶಿ ಆರ್.ಗಿರೀಶ್, ಬೆಂಗಳೂರು ಮುಖ್ಯಾಲಯ ಕ್ಷೇತ್ರದ ಅಂಚೆ ಸೇವೆಗಳ ನಿರ್ದೇಶಕಿ ವಿ.ತಾರಾ, ಮುಖ್ಯ ಅಂಚೆ ಪ್ರಬಂಧಕರಾದ ಸೆಲ್ವಿ. ಅಡ್ವಾನ್ಸ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ಅಮಿತಾ ಪಾಂಡೆ, ಹಾಪ್‌ಕಾಮ್ಸ್ ಉಪಾಧ್ಯಕ್ಷ ನಾರಾಯಣಗೌಡ, ವ್ಯವಸ್ಥಾಪಕ ನಿರ್ದೇಶಕ ಉಮೇಶ್‌ ಶಂಕರ್‌ ಮಿರ್ಜಿ ಹಾಜರಿದ್ದರು.

ನಿಮ್ಮ ಮನೆಗೆ ಮಾವಿನ ಹಣ್ಣು ಬೇಕಿದ್ರೆ ಹೀಗೆ ಮಾಡಿ

ಅಧಿಕೃತ ವೆಬ್‌ಸೈಟ್‌ https://hopcomsbengaluru.com ಗೆ ಲಾಗಿನ್ ಆಗಿ ಹೆಸರು ನೋಂದಾಯಿಸಬೇಕು. ಬೇಕಾದ ಹಣ್ಣುಗಳನ್ನು ಆಯ್ಕೆ ಮಾಡಿ ಆನ್‌ಲೈನ್‌ನಲ್ಲಿ ಹಣ ಪಾವತಿಸಿ ಆರ್ಡರ್ ಮಾಡಿದ್ದಲ್ಲಿ 24 ಗಂಟೆಗಳೊಳಗೆ ಅಂಚೆ ಸಿಬ್ಬಂದಿ ಮನೆ ಬಾಗಿಲಿಗೆ ಮಾವಿನ ಹಣ್ಣುಗಳನ್ನು ತಲುಪಿಸಲಿದ್ದಾರೆ.