ಕನ್ನಡಪ್ರಭ ವಾರ್ತೆ ಕಾಗವಾಡ
ನಾನು ಸಹಕಾರ ರಂಗದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದೇನೆ, ನಾನು ಯಾವ ಬಣಕ್ಕೂ ಅಂಟಿಕೊಂಡಿಲ್ಲ, ಬೆಳಗಾವಿ ಮಧ್ಯವರ್ತಿ ಬ್ಯಾಂಕಿಗೆ ನಾಮಪತ್ರಸಲ್ಲಿಸಿ ಅವರೋಧವಾಗಿ ಆಯ್ಕೆಗೊಂಡಿರುವುದಾಗಿ ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಮಂಗಳವಾರ ಕಾಗವಾಡ ತಾಲೂಕು ಮುಸ್ಲಿಂ ಸಮಾಜದ ಮುಖಂಡರು ಹಾಗೂ ಪಾರ್ಥನಳ್ಳಿ ಪಿಕೆಪಿಎಸ್ ಅಧ್ಯಕ್ಷ ರಫೀಕ್ ಪಟೇಲ ಹಾಗೂ ಸದಸ್ಯರಿಂದ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹಿರಿತನದ ಆಧಾರದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದ ಮಾಜಿ ಸಚಿವ ಶ್ರೀಮಂತ ಪಾಟೀಲ ಪುತ್ರ ಶ್ರೀನಿವಾಸ ಪಾಟೀಲ ಅವರ ಮನವೊಲಿಸಿ ನಾಮಪತ್ರ ಹಿಂಪಡಿಸಿ ನನ್ನನ್ನ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಅವರ ಸಹಾಯ ಸಹಕಾರದಿಂದ ನಾನು ಡಿಸಿಸಿ ಬ್ಯಾಂಕ್ ಸದಸ್ಯನಾಗಿ ಆಯ್ಕೆಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕಾಗವಾಡ ತಾಲೂಕಿನೆಲ್ಲ ಸೊಸೈಟಿ ಅಧ್ಯಕ್ಷರು, ಸದಸ್ಯರಿಗೂ ಹಾಗೂ ಕಾಗವಾಡ ಮತಕ್ಷೇತ್ರದ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ನಮ್ಮಲ್ಲಿ ಯಾವ ಬಣ ಇಲ್ಲ. ನಾನು ಎತ್ತಿಕೊಂಡವರ ಕೂಸು. ಜನತೆಯ ಒತ್ತಾಯದ ಮೇರೆಗೆ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದೆ. ನನ್ನನ್ನು ಅವಿರೋಧವಾಗಿ ಆಯ್ಕೆಗೊಳಿಸಿರುವುದು ಸಂತಸ ತಂದಿದೆ ಎಂದರು.ಲಿಂಗಾಯತರನ್ನೇ ಅಧ್ಯಕ್ಷರನ್ನಾಗಿ ಮಾಡುವವರಿದ್ದಾರೆ. ನೀವೂ ಕೂಡ ಇಚ್ಚುಕರಾ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಡಿಸಿಸಿ ಬ್ಯಾಂಕಿನ ಅಧ್ಯಕ್ಷನಾಗುವ ಆಸೆಯೂ ಇಲ್ಲ, ಆಕಾಂಕ್ಷಿಯೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಲಕ್ಷ್ಮಣ ಸವದಿ, ಸತೀಶ್ ಜಾರಕಿಹೊಳಿ ಮತ್ತು ನಮಲ್ಲಿ ಕೆಲವು ರಾಜಕೀಯ ಗೊಂದಲಗಳಾಗಿವೆ ಹೊರತು ನಾವೆಲ್ಲರೂ ಎಲ್ಲರೂ ಒಂದೇ ಇದ್ದೇವೆ. ಚುನಾವಣೆ ಮುಗಿದ ನಂತರ ಎಲ್ಲರೂ ಕೂಡಿಕೊಂಡು ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ನ್ನು ಪ್ರಗತಿಯತ್ತ ಸಾಗಿಸುತ್ತ ರೈತರ ಹಿತಕಾಪಾಡುತ್ತೇವೆ. ಬ್ಯಾಂಕಿನ ಏಳಿಗೆಗಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.ಈ ವೇಳೆ ಕಾಗವಾಡ ತಾಲೂಕು ಮುಸ್ಲಿಂ ಸಮಾಜದ ಮುಖಂಡರು ಹಾಗೂ ಪಾರ್ಥನಳ್ಳಿ ಸಾಹಾರಾ ಪಿಕೆಪಿಎಸ್ ಅಧ್ಯಕ್ಷ ರಫೀಕ್ ಪಟೇಲ, ಗ್ರಾಮ ಪಂಚಾಯತಿ ಅಧ್ಯಕ್ಷ ಶರೀಫ ಮುಲ್ಲಾ, ಮುಖಂಡರಾದ ಶಂಕರ ವಾಘಮೊಡೆ, ಸೌರವ ಪಾಟೀಲ, ಜ್ಯೋತಿಕುಮಾರ ಪಾಟೀಲ, ಬಸನಗೌಡ ಪಾಟೀಲ, ಕಾಮಗೌಡ ಪಾಟೀಲ, ಇಬ್ರಾಹಿಂ ಮೋಳೆ, ಕಾಡಪ್ಪ ಸಿಂಗಾಡೆ, ಸದಾಶಿವ ಬಿರಾದಾರ, ಇಸ್ಮಾಯಿಲ್ ಪಟೇಲ, ಅಮೀರ ಪಟೇಲ, ಬಂಡು ನಾಯಿಕ, ರಮೇಶ ಕಾಂಬಳೆ, ರಫೀಕ್ ಪಟೇಲ, ಸಿದ್ದು ಅವಳೇಕರ ಮತ್ತಿತರರು ಇದ್ದರು.