ಕನ್ನಡಪ್ರಭ ವಾರ್ತೆ ಮಂಡ್ಯ
ನಾನು ಪಲಾಯನವಾದಿಯಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರ ಒತ್ತಡಕ್ಕೆ ಮಣಿದು, ಜನರ ಅಪೇಕ್ಷೆಗೆ ತಲೆಬಾಗಿ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸಲು ಬಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.ನಗರದಲ್ಲಿ ಗುರುವಾರ ನಡೆದ ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಎರಡು ಪಕ್ಷದ ಕಾರ್ಯಕರ್ತರು, ನಾಯಕರು ನಿಮ್ಮ ಅವಶ್ಯಕತೆ ಇದೆ ಬರಬೇಕೆಂದು ಆದೇಶ ಮತ್ತು ಸಲಹೆ ಕೊಟ್ಟಿದ್ದರು. ಸ್ಪರ್ಧಿಸುವ ಆದೇಶ ಕಾರ್ಯಕರ್ತರಿಂದ ಬಂದಿದೆ. ನಮ್ಮ ಹಳೆಯ ಸ್ನೇಹಿತರು ಪುಟ್ಟರಾಜು ಹೆಸರು ಹೇಳಿದ್ದಾರೆ. ಆರಂಭದಲ್ಲಿ ಡಿ.ಸಿ.ತಮ್ಮಣ್ಣ ಹಾಗೂ ಪುಟ್ಟರಾಜು ಸ್ಪರ್ಧೆ ಬಗ್ಗೆ ಚರ್ಚೆ ನಡೆದಿದ್ದು ನಿಜ. ಆನಂತರದಲ್ಲಿ ನನ್ನ ಸ್ಪರ್ಧೆ ಬಗ್ಗೆ ಕಾರ್ಯಕರ್ತರಲ್ಲಿ ಅಪೇಕ್ಷೆ ಇದೆ ಎಂಬುದು ಗೊತ್ತಾಯಿತು. ಹಾಗಾಗಿ ಜನರ ನಿರೀಕ್ಷೆಯನ್ನು ಹುಸಿಗೊಳಿಸದೇ, ಅವರ ಭಾವನೆಗಳಿಗೆ ಧಕ್ಕೆ ತರದೆ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
ಸಂಸದೆ ಸುಮಲತಾ ಅವರು ನನಗೆ ಶಾಶ್ವತ ಶತ್ರುವೇನಲ್ಲ. ನಾನು ಅಂಬರೀಶ್ ಹಲವು ವರ್ಷದ ಸ್ನೇಹಿತರು. ಸುಮಲತಾ ಅವರೂ ಕೂಡ ನನಗೆ ಊಟ ಬಡಿಸಿದ್ದಾರೆ. ನಾವು ಶಾಶ್ವತ ಶತ್ರುಗಳಲ್ಲ. ಅವರೂ ಸಹ ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ. ಸುಮಲತಾ ಅವರೂ ಬೆಂಬಲಿಗರ ಸಭೆ ನಡೆಸಿ ನಿರ್ಧಾರ ಮಾಡಿ ಘೋಷಣೆ ಮಾಡುತ್ತಾರೆ ಎಂದು ವಿಶ್ವಾಸದಿಂದ ನುಡಿದರು.ಮಂಡ್ಯ ಮೇಲೆ ಕೆಟ್ಟ ದೃಷ್ಟಿ ಬೇಡ ಎಂದು ಹಳೇ ಸ್ನೇಹಿತ (ಚಲುವರಾಯಸ್ವಾಮಿ) ಹೇಳಿದ್ದಾನೆ. ನಮ್ಮ ದೃಷ್ಟಿ ಇದ್ದಾಗ ಮಳೆ - ಬೆಳೆ ಚೆನ್ನಾಗಿ ಆಗಿತ್ತು. ನಿಮ್ಮ ದೃಷ್ಟಿ ಬಿದ್ದ ಮೇಲೆ ಬರಗಾಲ ಎದುರಾಗಿದೆ. ಜಿಲ್ಲೆಯೊಳಗೆ ಭತ್ತ ನಾಟಿ ಮಾಡಬೇಡಿ ಎಂದು ಹೇಳಿದ ಏಕೈಕ ಸಚಿವ ನನ್ನ ಹಳೇ ಸ್ನೇಹಿತ ಎಂದು ಹೆಸರೇಳದೆ ಚಲುವರಾಯಸ್ವಾಮಿ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.
ಕಾಂಗ್ರೆಸ್ ಅಭ್ಯರ್ಥಿಗೆ ದುಡ್ಡಿಗೆ ಸಮಸ್ಯೆ ಇಲ್ಲ. ಈಗಾಗಲೇ ಅವರು ದುಡ್ಡು ಹಂಚಿರಬಹುದು. ಮಂಡ್ಯ ಜನ ದುಡ್ಡಿಗೆ ಬೆಲೆ ಕೊಡುವವರಲ್ಲ. ಮಂಡ್ಯದ ಈ ಚುನಾವಣೆ ಧರ್ಮಯುದ್ಧ ಎಂದು ವಿಶ್ಲೇಷಿಸಿದರು.