ಚಿತ್ರದುರ್ಗ: ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಬಾಗಲಕೋಟೆಯ ಗೋವಿಂದಕಾರಜೋಳ ಅವರಿಗೆ ನೀಡುತ್ತಿದ್ದಂತೆ ಕೋಟೆ ನಾಡಲ್ಲಿ ತೀವ್ರತೆರನಾದ ಅಸಮಧಾನದ ಹೊಗೆ ಎದ್ದಿದೆ. ಟಿಕೆಟ್ ಆಕಾಂಕ್ಷಿ ರಘುಚಂದನ್ ಹಾಗೂ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಗುರುವಾರ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಯಡಿಯೂರಪ್ಪ ವಿರುದ್ದ ಹರಿಹಾಯ್ದರು. ಟಿಕೆಟ್ ತಪ್ಪಲು ಅವರೇ ಕಾರಣವೆಂದು ದೂರಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗುವ ಭರವಸೆ ಬಹಳವಿತ್ತು. ಅದರೆ ಜಿಲ್ಲೆಯ ಸ್ಥಳೀಯ ನಾಯಕರುಗಳೇ ಕಳ್ಳಿನರಪ್ಪನ ಆಟವಾಡಿ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಕಾರಜೋಳರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ಖಂಡನೀಯ. ಪಕ್ಷದ ಕಾರ್ಯಕರ್ತರು ಮತ ಹಾಕಿಸಲು ಮಾತ್ರವೇ ಬೇಕೆ, ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಅರ್ಹತೆ ಇಲ್ಲವೆ? ಕಳೆದ ಬಾರಿ ಅನೇಕಲ್ ಅಭ್ಯರ್ಥಿ ಕರೆ ತಂದು ಹಾಕಿದ್ದರು. ಈ ಬಾರಿ ಮಧೋಳ್‌ನಿಂದ ಅಭ್ಯರ್ಥಿಯನ್ನು ಕರೆ ತಂದಿದ್ದಾರೆ. ಇದು ಚಿತ್ರದುರ್ಗದ ದುರಂತ ಎಂದರು.
ಈ ಬಾರಿ ಟಿಕೆಟ್ ದೊರೆಯದೆಂದು ಅತೀವ ನಿರೀಕ್ಷೆ ಇಟ್ಟುಕೊಂಡಿದ್ದೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ನಾನು ಬಹಳ ನಂಬಿದ್ದೆ .ಆದರೆ ಕೊನೆ ಗಳಿಗೆಯಲ್ಲಿ ಟಿಕೆಟ್ ಕೊಡಿಸುವಲ್ಲಿ ಅನ್ಯಾಯ ಮಾಡಿದ್ದಾರೆ. ಮದಕರಿನಾಯಕನ ಕಾಲದಿಂದಲೂ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ.ಇದನ್ನು ಯಾರೂ ಖಂಡಿಸದಿರುವುದು ನಮ್ಮ ದೌರ್ಭಾಗ್ಯವಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ವಿರುದ್ಧವಾಗಲಿ ಮೋದಿ ವಿರುದ್ಧವಾಗಲಿ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುವುದು. ನನ್ನ ಮುಂದಿನ ನಡೆಯನ್ನು ನಾಳೆ ನಡೆಯುವ ಕಾರ್ಯರ್ತರ, ಅಭಿಮಾನಿಗಳ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.ವಯಸ್ಸು ಮತ್ತು ಅನುಭವದ ಪರಿಗಣನೆ ಮೇಲೆ ನನಗೆ ಟಿಕೆಟ್ ತಪ್ಪಿಸಲಾಗಿದೆ. ನನಗಲ್ಲದಿದ್ದರೂ ಜನಾರ್ಧನ ಸ್ವಾಮಿ ಅವರಿಗೆ ನೀಡಬಹುದಾಗಿತ್ತು.ಆದು ಬಿಟ್ಟು ಎಲ್ಲೋ ಇರುವ ವ್ಯಕ್ತಿಯನ್ನು ಕರೆ ತಂದು ಚುನಾವಣೆಯಲ್ಲಿ ನಿಲ್ಲಿಸುವ ಅವಶ್ಯಕತೆ ಏನಿತ್ತು. ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಏನಾದರೂ ಅನ್ಯಾಯವಾದರೆ ದೂರದ ಐದುನೂರು ಕಿಮೀನಿಂದ ಯಾರೂ ಬರುವುದಿಲ್ಲ. ಸ್ಥಳಿಯರಾದ ನಾವುಗಳೇ ಕಾರ್ಯಕರ್ತರ ನೆರವಿಗೆ ಹೋಗಬೇಕಿದೆ ಇದು ಪಕ್ಷದ ಅರಿವಿಗೆ ಬಂದಿಲ್ಲ.
ತಿಪ್ಪೇಸ್ವಾಮಿ, ರತ್ನಮ್ಮ, ಸಿದ್ದೇಶ, ಶಿವನಕೆರೆ ರಾಜಣ್ಣ, ತಿಪ್ಪೇಸ್ವಾಮಿ, ನಾಗೇಂದ್ರ ಇದ್ದರು.