ಮಂಜಪ್ಪನವರು ನಡೆದು ಬಂದ ದಾರಿ ನಮಗೆಲ್ಲ ಅನುಕರಣೀಯವಾದುದು. ಅಧಿಕಾರ, ಸಂಬಂಧ, ದೊಡ್ಡವರ ಸಂಬಂಧ ಇವೆಲ್ಲವೂ ಕೇವಲ ಸ್ವಂತಕ್ಕಾಗಿ ಅಲ್ಲ, ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು ಎನ್ನುವುದನ್ನು ಮಂಜಪ್ಪನವರಿಂದ ಕಲಿಯಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಮಂಜಪ್ಪನವರು ನಡೆದು ಬಂದ ದಾರಿ ನಮಗೆಲ್ಲ ಅನುಕರಣೀಯವಾದುದು. ಅಧಿಕಾರ, ಸಂಬಂಧ, ದೊಡ್ಡವರ ಸಂಬಂಧ ಇವೆಲ್ಲವೂ ಕೇವಲ ಸ್ವಂತಕ್ಕಾಗಿ ಅಲ್ಲ, ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು ಎನ್ನುವುದನ್ನು ಮಂಜಪ್ಪನವರಿಂದ ಕಲಿಯಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ಹೊಸಬಾಳೆ ಎಚ್.ಎಸ್.ಮಂಜಪ್ಪ ಅಭಿನಂದನಾ ಸಮಿತಿ ಪಟ್ಟಣದ ಎಲ್.ಬಿ.ಕಾಲೇಜಿನ ದೇವರಾಜ ಅರಸು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸಬಾಳೆ ಕುಟುಂಬ, ಸಮಾಜದ ಹಿತಕ್ಕಾಗಿಯೇ ಬದುಕಬೇಕು ಎನ್ನುವ ಏಕೈಕ ಧ್ಯೇಯವನ್ನು ಹಲವು ದಶಕದಿಂದ ಸಮಾಜಕ್ಕೆ ತೋರಿಸಿಕೊಟ್ಟಿದೆ. ಇದಕ್ಕೆ ದತ್ತಾತ್ರೆಯ ಹೊಸಬಾಳೆ ಅವರೇ ಉದಾಹರಣೆ ಎಂದು ಹೇಳಿದರು.

ಮಂಜಪ್ಪನವರದ್ದು ತಪಸ್ಸಿನ ರೀತಿಯ ಜೀವನ. ಪ್ರಾಮಾಣಿಕ ಜೀವನ ಅಳವಡಿಸಿಕೊಳ್ಳಬೇಕು ಎನ್ನುವ ಸಂಘದ ತತ್ವಾದರ್ಶವನ್ನು ರೂಢಿಸಿಕೊಂಡವರು. ಎಲ್ಲರನ್ನೂ ಆತ್ಮೀಯವಾಗಿ ಕಾಣುವ ಮಂಜಪ್ಪನವರು ನಿಸ್ಪೃಹ ಜೀವನ ನಡೆಸಿದ್ದಾರೆ. ಅದನ್ನು ಬೇರೆಯವರಿಗೂ ತೋರಿಸಿಕೊಟ್ಟಿದ್ದಾರೆ. ರಾಜ್ಯದಿಂದ ದೆಹಲಿಗೆ ಬರುವ ಎಲ್ಲರನ್ನೂ ಭೇಟಿ ಮಾಡುತ್ತೇನೆ. ಆದರೆ ಒಮ್ಮೆಯೂ ಮಂಜಪ್ಪನವರು ನಮಗೆ ಏನಾದರೂ ಮಾಡಿಕೊಡಿ ಅಂತ ಕೇಳಿಲ್ಲ. ನಾನು ೨೨ ವರ್ಷ ಸಂಸದನಾಗಿದ್ದಾಗಿನಿಂದಲೂ ಅವರೊಂದಿಗೆ ಒಡನಾಟ ಹೊಂದಿದ್ದು, ಅವರ ಈ ನಡವಳಿಕೆಯನ್ನು ಗಮನಿಸಿದ್ದೇನೆ ಎಂದು ಹೇಳಿದರು.

ಮಂಜಪ್ಪನವರಿಗೂ ಅಡಕೆ ಬೆಳೆಗಾರರಿಗೂ ಇರುವ ಸಂಬಂಧ ಇಂದು ಗೋಚರವಾಗಿದೆ. ಅಡಕೆ ಬೆಳೆಗಾರರಿಗೆ ಸಂಕಷ್ಟ ಬಂದಾಗಲ್ಲೆಲ್ಲ ಮಂಜಪ್ಪನವರು ದೆಹಲಿವರೆಗೆ ಬಂದು ಸಂಕಷ್ಟ ಪರಿಹಾರಕ್ಕೆ ಶ್ರಮಿಸುತ್ತಿದ್ದದನ್ನು ನೋಡಿದ್ದೇನೆ.

ನಮ್ಮ ದೇಶದಲ್ಲಿ ಅಡಕೆ ಕೇವಲ ತಿನ್ನುವುದಕ್ಕೆ ಮಾತ್ರ ಬಳಕೆ ಆಗಿದ್ದಲ್ಲ. ಜನರ ಸುಖ ಹಾಗೂ ದುಃಖದ ವಿಚಾರದಲ್ಲೂ ನಮ್ಮೊಂದಿಗೆ ಇದೆ. ಇತ್ತೀಚಿನ ವರ್ಷದಲ್ಲಿ ಅಡಕೆ ಕ್ಯಾನ್ಸರ್‌ ಕಾರಕ ಎನ್ನುವ ಕೂಗು ಕೇಳಿಬರುತ್ತಿರುವ ವಿಚಾರವಾಗಿ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಹಲವು ಸಭೆ ನಡೆಸಿದ್ದೇವೆ. ನ್ಯಾಯಾಲಯದಲ್ಲಿ ಕೂಡ ಕೇಂದ್ರವು ತಜ್ಞರ ಅಭಿಪ್ರಾಯ ಪಡೆದು ವಾದ ಮಂಡಿಸಲಿದೆ. ಸರ್ಕಾರ ಬೆಳೆಗಾರರಿಗೆ ಸೂಕ್ತ ನ್ಯಾಯ ಕೊಡಿಸುವ ಕೆಲಸ ಮಾಡುತ್ತದೆ. ಕೇಂದ್ರ ಕೃಷಿ ಸಚಿವರ ಮುಂದಾಳತ್ವದಲ್ಲಿ ಸಮರ್ಪಕ ಕೆಲಸ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನವು ಬೇಡ ಎಂದು ಆಶ್ವಾಸನೆ ನೀಡಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮಲೆನಾಡು ಭಾಗದ ಅಡಕೆ ಬೆಳೆಗಾರರ ಹಿತರಕ್ಷಣೆಗಾಗಿ, ಸಹಕಾರಿ ರಂಗದ ಏಳಿಗೆಗಾಗಿ ಹಾಗೂ ಸಾರ್ವಜನಿಕ ಜೀವನದಲ್ಲಿ ದಶಕಗಳ ಕಾಲ ಎಚ್.ಎಸ್. ಮಂಜಪ್ಪನವರು ಸಲ್ಲಿಸಿರುವ ನಿಸ್ವಾರ್ಥ ಸೇವೆ ಶ್ಲಾಘನೀಯ. ಅವರ ಈ ಸುದೀರ್ಘ ಸಾಧನೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭವು ಅತ್ಯಂತ ಅರ್ಥಪೂರ್ಣ ಎಂದರು.

ಅಡಕೆ ಕೇವಲ ಒಂದು ವಾಣಿಜ್ಯ ಬೆಳೆಯಲ್ಲ, ಅದು ನಮ್ಮ ಜೀವನ ಶೈಲಿ ಮತ್ತು ಸಂಸ್ಕೃತಿಯ ಭಾಗ. ಅಡಕೆ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಯಾವತ್ತೂ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ಹೇಳಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ, ಎಚ್.ಹಾಲಪ್ಪ, ಪರಿಷತ್ ಸದಸ್ಯ ಡಿ ಎಸ್ ಅರುಣ್, ಕೇಂದ್ರ ಸಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ, ಎಚ್ ಎಸ್ ಮಂಜಪ್ಪನವರ ಅಭಿನಂದನಾ ಸಮಿತಿ ಅಧ್ಯಕ್ಷ ಕೆ.ಎಂ.ಸೂರ್ಯನಾರಾಯಣ ಖಂಡಿಕಾ, ಪ್ರಾಂತ್ಯದ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವಿ ಎಸ್ ರಾಮಚಂದ್ರ ಭಟ್, ಬಿ.ಎ.ಇಂದೂದರ ಬೇಸೂರು ಸೇರಿದಂತೆ ರೈತ ಮುಖಂಡರು, ರೈತ ಬಾಂಧವರು ಉಪಸ್ಥಿತರಿದ್ದರು.