ಕಾಂಗ್ರೆಸ್‌ನಲ್ಲಿ ನಾನು ಸಮಾಧಾನವಾಗಿರುವೆ: ಜಗದೀಶ್‌ ಶೆಟ್ಟರ್‌

KannadaprabhaNewsNetwork |  
Published : Jan 20, 2024, 02:03 AM IST
ಫೋಟೋ- 19ಜಿಬಿ6ಕಲಬುರಗಿಗೆ ಶುಕ್ರವಾರ ಆಗಮಿಸಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್‌ಗೆ ವಿಮಾನ ನಿಲ್ದಾಣದಲ್ಲಿ ಶಾಸಕ ಅಲ್ಲಂಪ್ರಭು ಪಾಟೀಲ್‌, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್‌ ಸ್ವಾಗತಿಸಿದರು. | Kannada Prabha

ಸಾರಾಂಶ

ನಾನೂ ಯಾವುದೇ ಷರತ್ತು, ಸ್ಥಾನಮಾನ ಬಯಸಿ ಪಕ್ಷಕ್ಕೆ ಬಂದವನಲ್ಲ. ಧಾರವಾಡ ಲೋಕ ಸಮರದ ಆಕಾಂಕ್ಷಿ ನಾನಲ್ಲ ಎಂದು ಕಲಬುರಗಿಯಲ್ಲಿ ಮಾಜಿ ಸಚಿವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ತಮಗೆ ಕಾಂಗ್ರೆಸ್‌ನಲ್ಲಿ ಅಲಕ್ಷಿಸಲಾಗುತ್ತಿದೆ ಎಂಬ ಭಾವನೆ ಕಾಡುತ್ತಿಲ್ಲ. ಅದ್ಯಾಕೆ ಕಾಡಬೇಕು ಹೇಳಿ? ನಾನು ಸಮಾಧಾನದಲ್ಲೇ ಇದ್ದೇನೆ, ಅಷ್ಟಕ್ಕೂ ಮಿಗಿಲಾಗಿ ನಾನು ಯಾವುದೇ ಸ್ಥಾನಮಾನ ಬಯಸಿ ಕಾಂಗ್ರೆಸ್‌ಗೆ ಬಂದವನಲ್ಲ ಎಂದು ಮಾಜಿ ಸಿಎಂ, ಕಾಂಗ್ರೆಸ್‌ ಮುಖಂಡ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

ಶೆಟ್ಟರ್‌ ಗೂಡಿಗೆ ಮರಳುತ್ತಾರೆಂಬ ಮಾತುಗಳಿವೆಯಲ್ಲ ಎಂದು ಸುದ್ದಿಗಾರರು ಗಮನ ಸೆಳೆದಾಗ, ಅಂತಹ ಯಾವುದೇ ಬೆಳವಣಿಗೆ ಇಲ್ಲ, ತಮಗೆ ಯಾರೂ ಸಂಪರ್ಕ ಮಾಡಿಲ್ಲ. ಕಾಂಗ್ರೆಸ್‌ನಲ್ಲಿ ಸಮಾಧಾನದಿಂದಲೇ ಇರುವಾಗ ಇಂತಹ ಪ್ರಶ್ನೆಗಳೆ ಉದ್ಭವಿಸೋದಿಲ್ಲವೆಂದು ಹೇಳಿದ್ದಾರೆ.

ಕಸಾಪ ಆಯೋಜಿಸಿದ್ದ ವಚನ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡುತ್ತ, ನಾನೂ ಯಾವುದೇ ಷರತ್ತು ಹಾಕಿ ಬಂದವನಲ್ಲ. ಕಾಂಗ್ರೆಸ್‌ನಲ್ಲಿ ಸಮಾಧಾನದಿಂದಲೇ ಇದ್ದೇನಲ್ಲ ಎಂದು ಹೇಳಿದರು.

ಧಾರವಾಡ ಲೋಕ ಸಮರದ ಆಕಾಂಕ್ಷಿ ನಾನಲ್ಲವೆಂದು ಸ್ಪಷ್ಟಪಡಿಸಿದ ಶೆಟ್ಟರ್‌, ಬಸವಣ್ಣನವರನ್ನು ರಾಜ್ಯ ಸರ್ಕಾರ ಸಾಂಸ್ಕತಿಕ ನಾಯಕನೆಂದು ಘೋಷಿಸಿರೋದು ಚುನಾವಣೆ ಗಿಮಿಕ್‌ ಅಲ್ಲ. ತುಂಬ ದಿನದ ಬೇಡಿಕೆಗೆ ಸರ್ಕಾರ ಸೂಕ್ತ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.

ರಾಮ ಮಂದಿರ ನಿರ್ಮಾಣಕ್ಕೆ ತಾವೇ ವಿಎಚ್ಪಿ ಕರೆಗೆ ಓಗೊಟ್ಟು 2 ಕೋಟಿಯಷ್ಟು ಹಣ ಸಂಗ್ರಹಿಸಿಕೊಟ್ಟಿದ್ದ ಸಂದರ್ಭ ಸ್ಮರಿಸಿದರು. ಮಂದಿರದ ಸಂಗತಿಗಳನ್ನು ಇಟ್ಟುಕೊಂಡು ಯಾರೂ ರಾಜಕೀಯ ಮಾಡಬಾರದು, ಅದು ಸರಿಯಲ್ಲ. ಭಾವನಾತ್ಮಕ ವಿಷಯಗಳಿಗೆ ರಾಜಕೀಯ ಬಣ್ಣ ಬಳಿಯೋದು ಸರಿಯಲ್ಲವೆಂದರು.

ಅಯೋಧ್ಯೆಗೆ ಆಹ್ವಾನ ನೀಡಿ ಕರೆಯುತ್ತಿದ್ದಾರೆ ತಮಗಂತೂ ಆಹ್ವಾನ ಬಂದಿಲ್ಲ. ಹೀಗಾಗಿ ಈ ಸಮಯದಲ್ಲಿ ಸದ್ಯ ಅಯೋಧ್ಯೆಗೆ ಹೋಗೋದಿಲ್ಲ ಎಂದು ಹೇಳಿದ ಶೆಟ್ಟರ್‌ ಬರುವ ದಿನಗಳಲ್ಲಿ ರಾಮ ಮಂದಿರಕ್ಕೆ ಹೋಗಿ ಸಂದರ್ಶಿಸೋದು, ಅಲ್ಲಿನ ಕಲಾತ್ಮಕತೆ ಆಸ್ವಾದಿಸೋದು ಅಯೋಧ್ಯೆ ಭೇಟಿ ನೀಡೋದು ನಿಶ್ಚಿತ ಎಂದರು.

ರಾಮ ಮಂದಿರ ಉದ್ಘಾಟನೆಗೆ ಹೋಗದೆ ಕಾಂಗ್ರೆಸ್‌ ಹಿಂದು ವಿರೋಧಿತನ ತೋರುತ್ತಿದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಹಿಂದು ವಿರೋಧಿಯಾಗಿದ್ದರೆ ಅಸೆಂಬ್ಲಿಯಲ್ಲಿ ಬಹುಮತ ಹೇಗೆ ಬರುತ್ತಿತ್ತು? ಕಾಂಗ್ರೆಸ್‌ಗೆ ಹಿಂದುಗಳು ಮತ ಹಾಕಿಲ್ಲವೆ? ಇಂತಹ ಚರ್ಚೆಗಳಲ್ಲಿ ತಮಗೆ ಆಸಕ್ತಿ ಇಲ್ಲ ಎಂದರು.

ರಾಜಕೀಯದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಬೇಡ. ಆದರೆ ಲೋಕಸಭೆ ಚುನಾವಣೆ ಮುಂದಿರೋದರಿಂದ ರಾಮ ಮಂದಿರ ಉದ್ಘಾಟನೆಯ ಈ ಬೆಳವಣಿಗೆ ರಾಜಕೀಕರಣವಾಗುತ್ತಿದೆ ಎಂದರಲ್ಲದೆ, ಈ ವಿಚಾರ ರಾಜಕೀಯಕ್ಕೆ ಎಳೆದು ತಂದವರೆ ಬಿಜೆಪಿ ಮುಖಂಡರು ಎಂದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ