ಕನ್ನಡಪ್ರಭ ವಾರ್ತೆ ಹಾಸನ
ನನಗೆ ದೇವರ ಮೇಲೆ ಅಪಾರವಾದ ನಂಬಿಕೆ ಇದೆ. ದೇವರು ಅತ್ಯುತ್ತಮವಾದದ್ದನ್ನು ನೀಡುತ್ತಾನೆ. ಹಾಸನಾಂಬ ದೇವಿ ಜಾತ್ರಾ ಮಹೋತ್ಸದಲ್ಲಿ ೨.೮ ಕೋಟಿ ರು. ಇದ್ದ ಆದಾಯವನ್ನು ಸಾಧ್ಯವಾದಷ್ಟು ಪರಿವರ್ತನೆ ತರುವ ಮೂಲಕ ೨೦ ಕೋಟಿ ಆದಾಯಕ್ಕೆ ತರಲಾಗಿದೆ. ದೇಶದ ಭೂಪಟದಲ್ಲಿ ಹಾಸನಾಂಬ ದೇವಿಯ ಹಿರಿಮೆಯನ್ನು ಪ್ರಚುರ ಪಡಿಸಲಾಗಿದೆ. ಈ ಬಾರಿ ಹತ್ತು ದೇಶಗಳಿಂದ ದೇವಿಯ ದರ್ಶನಕ್ಕೆ ಟಿಕೆಟ್ ಕಾಯ್ದಿರಿಸಿದ್ದರು ಎಂದು ತಿಳಿಸಿದರು.ಜಿಲ್ಲೆಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ೨೪೫೫ ದೇವಸ್ಥಾನಗಳ ಆಸ್ತಿ ಸಂರಕ್ಷಣೆ ಮಾಡಲಾಗಿದೆ. ನಗರದ ಚನ್ನಕೇಶವ ದೇವಾಲಯ ಹಾಗೂ ೧೩೦ ಶಾಲೆಗಳ ದುರಸ್ತಿ ಮಾಡಿಸಲಾಗಿದೆ. ೩೦೦ಕ್ಕೂ ಹೆಚ್ಚು ಬೆಂಚ್ ಮತ್ತು ಡೆಸ್ಕ್‌ಗಳನ್ನು ದಾನಿಗಳಿಂದ ಪಡೆದು ಶಾಲೆಗಳಿಗೆ ಒದಗಿಸಲಾಗಿದೆ ಎಂದ ಅವರು, ಪರಿಶ್ರಮದಿಂದ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದ ಅವರು, ನನ್ನಲ್ಲಿರುವ ಉತ್ತಮವಾದುದ್ದನ್ನು ತಾವು ಅಳವಡಿಸಿಕೊಂಡು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬಳಕೆ ಮಾಡುವ ಮೂಲಕ ಇತರರಿಗೂ ಪ್ರೇರಣೆ ನೀಡಿ ಎಂದು ತಿಳಿಸಿದರು.
ವಿಮಾನ ನಿಲ್ದಾಣದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿ ಕಾಂಪೌಂಡ್ ಹಾಕಿಸಲಾಗಿದೆ. ಎತ್ತಿನಹೊಳೆ ಯೋಜನೆಯ ಬಹುತೇಕ ಕೆಲಸ ಪೂರ್ಣಗೊಂಡಿದೆ ಎಂದ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ತಮ್ಮ ಕಚೇರಿಯ ಆಪ್ತ ಸಹಾಯಕರು, ರಕ್ಷಣಾ ಸಿಬ್ಬಂದಿ, ವಾಹನ ಚಾಲಕರು ತಮ್ಮ ಕರ್ತವ್ಯಕ್ಕೆ ನೀಡಿದ ಸಹಕಾರವನ್ನು ಸ್ಮರಿಸಿದರಲ್ಲದೆ, ಡಿಡಿಎಲ್‌ಆರ್ ಅವರ ಸಹಕಾರ ಅವಿಸ್ಮರಣೀಯ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮಾ ಅವರು ಮಾತನಾಡಿ, ಕಂದಾಯ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಉತ್ತಮವಾಗಿ ಕೆಲಸ ಮಾಡಲಾಗಿದೆ. ಹಾಸನ ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳು ಆಡಳಿತದ ಚುಕ್ಕಾಣಿ ಹಿಡಿದು ಬಹಳಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಕಂದಾಯ ಇಲಾಖೆಯ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ತಂಡದ ನಾಯಕ ಬಹುಮುಖ್ಯ. ಈ ನಿಟ್ಟಿನಲ್ಲಿ ಸತ್ಯಭಾಮ ಅವರು ಅಧಿಕಾರಿ ಮತ್ತು ಸಿಬ್ಬಂದಿಗೆ ಸಲಹೆ, ಸೂಚನೆ, ಮಾರ್ಗದರ್ಶನ ನೀಡುವ ಮೂಲಕ ಯಶಸ್ವಿ ಸಾಧಿಸಿದ್ದಾರೆ ಎಂದರಲ್ಲದೆ ಮುಂದಿನ ದಿನಗಳ ಕೆಲಸದಲ್ಲಿಯೂ ಹೀಗೆ ಯಶಸ್ಸು ಸಿಗಲಿ ಎಂದು ಶುಭಹಾರೈಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಅವರು ಮಾತನಾಡಿ, ಜಿಲ್ಲಾಧಿಕಾರಿಯವರು ಪೊಲೀಸ್ ಇಲಾಖೆಗೆ ತುಂಬಾ ಸಹಕಾರ ನೀಡಿದ್ದಾರೆ ಎಂದರು ಕೋಲಾರ ಜಿಲ್ಲೆಯಲ್ಲಿ ತಾವು ಒಟ್ಟಿಗೆ ಕೆಲಸ ಮಾಡಿರುವುದನ್ನು ಸ್ಮರಿಸಿದ ಅವರು, ಸಮಗ್ರ ಶಿಕ್ಷಣ ಯೋಜನಾ ನಿರ್ದೇಶಕರ ಹುದ್ದೆಗೆ ತೆರಳಿದ ನಿರ್ಗಮಿತ ಜಿಲ್ಲಾಧಿಕಾರಿ ಅವರಿಗೆ ಶುಭಹಾರೈಸಿದರು.ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲ, ಉಪ ವಿಭಾಗಾಧಿಕಾರಿಗಳಾದ ಮಾರುತಿ, ಶೃತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಭೂ ದಾಖಲೆಗಳ ಉಪ ನಿರ್ದೇಶಕರಾದ ಸುಜಯ್ ಹಾಗೂ ವಿವಿಧ ಅಧಿಕಾರಿಗಳು ಹಾಜರಿದ್ದರು.