ಕನ್ನಡಪ್ರಭ ವಾರ್ತೆ ಹಲಗೂರು
ಸರ್ಕಾರದಿಂದ ರೈತರಿಗೆ ಸಿಗುವ ಸವಲತ್ತುಗಳನ್ನು ಸಕಾಲಕ್ಕೆ ಕೊಡಿಸಿ ಅವರ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆಯಲು ಶ್ರಮಿಸಿರುವ ತೃಪ್ತಿ ನನಗಿದೆ ಎಂದು ತಾಂತ್ರಿಕ ಸೇವಾ ಕೇಂದ್ರದ ಎಸ್ಇಒ ಜೆ.ವಿ.ಶ್ರೀನಿವಾಸಗೌಡ ತಿಳಿಸಿದರು.ಇಲ್ಲಿನ ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ವಿಸ್ತರಣಾಧಿಕಾರಿ ಎಸ್‌ಸಿಒ ಆಗಿ ಒಂದು ವರ್ಷ 6 ತಿಂಗಳು ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇಲ್ಲಿನ ರೈತರ ಒಡನಾಟ ಗ್ರಾಮದ ಜನತೆಯ ಪ್ರೀತಿ ಸಹೋದ್ಯೋಗಿಗಳ ಸಹಕಾರದಿಂದ ರೈತರಿಗೆ ಸರ್ಕಾರದಿಂದ ಸಿಗುವ 97 ಲಕ್ಷ ರು. ಅನುದಾನ ಒದಗಿಸಿದ್ದೇನೆ. ರೇಷ್ಮೆ ಕೃಷಿಗೆ ಬೇಕಾದ ಔಷಧಿಗಳು, ಮೊಟ್ಟೆಗಳು ಮುಂತಾದ ಸವಲತ್ತುಗಳನ್ನು ಸಕಾಲಕ್ಕೆ ಒದಗಿಸಿ ಕೊಟ್ಟು ಕೃಷಿಯಲ್ಲಿ ಬದಲಾವಣೆ ತರಲು ಸಲಹೆ ಸೂಚನೆ ನೀಡಿ ರೈತರ ಪ್ರೀತಿ ವಿಶ್ವಾಸ ಪಡೆಯುವುದರಲ್ಲಿ ಸಫಲನಾಗಿದ್ದೇನೆ ಎಂದು ಭಾವಿಸುತ್ತೇನೆ ಎಂದು ಹೇಳಿದರು.ರೇಷ್ಮೆ ಅಧಿಕಾರಿ ಮಹದೇವಯ್ಯ ಮಾತನಾಡಿ, ಇದುವರೆಗೂ ಉತ್ತಮ ಸೇವೆ ಸಲ್ಲಿಸಿದ ಶ್ರೀನಿವಾಸಗೌಡರು ವರ್ಗಾವಣೆಗೊಂಡಿರುವ ಸ್ಥಳದಲ್ಲೂ ಸಹ ಇದೇ ತರ ರೈತರ ವಿಶ್ವಾಸ ಪಡೆದು ಕರ್ತವ್ಯ ನಿರ್ವಹಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.
ನೂತನವಾಗಿ ರೇಷ್ಮೆ ವಿಸ್ತರಣ ಅಧಿಕಾರಿ ಎಸ್ಇಒ ಆಗಿ ಅಧಿಕಾರ ವಹಿಸಿಕೊಂಡ ಎಸ್.ವಿ.ನರಸಿಂಹಮೂರ್ತಿ ಮಾತನಾಡಿ, ಡಿ.ಹಲಸಹಳ್ಳಿ ತಾಂತ್ರಿಕ ಸೇವಾ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇಂದು ಹಲಗೂರಿಗೆ ವರ್ಗಾವಣೆಗೊಂಡು ಬಂದಿದ್ದೇನೆ. ರೈತರಿಗೆ ಸಿಗುವ ಸವಲತ್ತುಗಳನ್ನು ಕೊಡಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆ ಅಧಿಕಾರಿ ಮಹದೇವಯ್ಯ, ರೇಷ್ಮೆ ನಿರೀಕ್ಷಕ ಎಂ.ಸಿ.ನವೀನ್ ಕುಮಾರ್, ಮೇಲ್ವಿಚಾರಕಿ ಎಚ್.ಬಿ. ನಳಿನಾಕ್ಷಮ್ಮ , ಡಿ. ದರ್ಜೆ ನೌಕರ ಕುಮಾರ, ಡಾಟಾ ಎಂಟ್ರಿ ಆಪರೇಟರ್ ಕಾವ್ಯ, ಪ್ರಸನ್ನ, ನಾಗವೇಣಿ ಇಲಾಖೆ ಸಿಬ್ಬಂದಿ ಹಾಗೂ ಕೊನ್ನಾಪುರದ ಶ್ರೀನಿವಾಸ್ ಗೌಡ ಸೇರಿದಂತೆ ಇತರರು ಇದ್ದರು.