ಡೇರಿಗಳ ಅಭಿವೃದ್ಧಿಗೆ ಅನುದಾನ ನೀಡಿದ ಮೊದಲ ಶಾಸಕ ನಾನೇ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು

KannadaprabhaNewsNetwork |  
Published : Jan 22, 2025, 12:33 AM IST
21ಕೆಎಂಎನ್ ಡಿ22 | Kannada Prabha

ಸಾರಾಂಶ

ಶಾಸಕನಾಗಿದ್ದಾಗ ಹೈನುಗಾರಿಕೆಗೆ ಉತ್ತೇಜನೆ ನೀಡುವ ಕೆಲಸ ಮಾಡಿದ್ದೇವೆ. ಶಾಸಕರ ಅನುದಾನವನ್ನು ಡೇರಿಗಳ ಅಭಿವೃದ್ಧಿಗೆ ನೀಡಲು ಸಾಧ್ಯವಿರಲಿಲ್ಲ. ನಾನು ಶಾಸಕನಾಗಿದ್ದಾಗ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಡೇರಿಗಳಿಗೆ 5 ಲಕ್ಷದ ವರೆಗೆ ಶಾಸಕರ ಅನುದಾನ ನೀಡುವಂತೆ ಕ್ರಮವಹಿಸಿ ಡೇರಿಗಳ ಅಭಿವೃದ್ಧಿಗೆ ಕ್ರಮವಹಿಸಿದ್ದೇನೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಶಾಸಕನಾಗಿದ್ದಾಗ ರೈತ ಪರ ಕೆಲಸ ಮಾಡಿದ್ದೇನೆ. ಸರ್ಕಾರದಿಂದ ಅನುಮೋದನೆ ಪಡೆದು ಡೇರಿಗಳ ಅಭಿವೃದ್ಧಿಗೆ ಅನುದಾನ ನೀಡಿದ ಮೊದಲ ಶಾಸಕ ನಾನೇ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಪಟ್ಟಣದ ಹೊರವಲಯದಲ್ಲಿ ಮನ್ಮುಲ್ ನಿರ್ದೇಶಕರ ಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಸಿ.ಶಿವಕುಮಾರ್ ಪರ ನಡೆದ ಸಭೆಯಲ್ಲಿ ಮಾತನಾಡಿ, ಶಾಸಕನಾಗಿದ್ದಾಗ ಹೈನುಗಾರಿಕೆಗೆ ಉತ್ತೇಜನೆ ನೀಡುವ ಕೆಲಸ ಮಾಡಿದ್ದೇವೆ. ಶಾಸಕರ ಅನುದಾನವನ್ನು ಡೇರಿಗಳ ಅಭಿವೃದ್ಧಿಗೆ ನೀಡಲು ಸಾಧ್ಯವಿರಲಿಲ್ಲ. ನಾನು ಶಾಸಕನಾಗಿದ್ದಾಗ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಡೇರಿಗಳಿಗೆ 5 ಲಕ್ಷದ ವರೆಗೆ ಶಾಸಕರ ಅನುದಾನ ನೀಡುವಂತೆ ಕ್ರಮವಹಿಸಿ ಡೇರಿಗಳ ಅಭಿವೃದ್ಧಿಗೆ ಕ್ರಮವಹಿಸಿದ್ದೇನೆ ಎಂದರು.

ಎಚ್.ಡಿ.ಕುಮಾರಸ್ವಾಮಿ- ಯಡಿಯೂರಪ್ಪನವರ ಸರ್ಕಾರದ ಅವಧಿಯಲ್ಲಿ ಹೈನೋದ್ಯಮವನ್ನು ಉತ್ತೇಜನೆ ನೀಡುವ ಉದ್ದೇಶದಿಂದ ಹಾಲಿಗೆ ಪ್ರೋತ್ಸಾಹ ಧನ ನೀಡಲು ಆರಂಭಿಸಿದರು. ನಮ್ಮ ಸರ್ಕಾರದಲ್ಲಿ ಪ್ರತಿ ತಿಂಗಳು ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡುತ್ತಿದ್ದರು ಎಂದರು.

ಈಗಿನ ಸರ್ಕಾರ ಹಾಲಿನ ಪ್ರೋತ್ಸಾಹ ಧನ ನೀಡಲು ಹಿಂದೇಟು ಹಾಕುತ್ತಿದೆ. 6 ತಿಂಗಳು ಕಳೆದರು ಬಿಡುಗಡೆ ಮಾಡಿಲ್ಲ. ಈ ಸರ್ಕಾರ ಇನ್ನಷ್ಟು ರೈತರ ಬೊಕ್ಕಸಕ್ಕೆ ಕನ್ನ ಹಾಕಲಿದೆಯೋ ಎಂದು ಹರಿಹಾಯ್ದರು.

ಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿ ಹಿಂದಿನ ಚುನಾವಣೆಯಲ್ಲಿ ನಮ್ಮ ಪಕ್ಷದ ಎಲ್ಲಾ ಮುಖಂಡರು, ಕಾರ್‍ಯಕರ್ತರನ್ನು ಎದುರು ಹಾಕಿಕೊಂಡು ಮನ್ಮುಲ್ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ ನಿರ್ದೇಶಕನನ್ನಾಗಿ ಮಾಡಿದೆ. ಗೆದ್ದು ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದಾರೆ. ಇದೀಗ ಧರ್ಮ ಯುದ್ಧದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಜಿಪಂ ಮಾಜಿ ಸದಸ್ಯ ಎಚ್.ತ್ಯಾಗರಾಜು ಮಾತನಾಡಿ, ಚುನಾವಣೆ ಎಂದರೆ ಪರಸ್ಪರ ನಂಬಿಕೆ ಇರಬೇಕು. ಆಗಮಾತ್ರ ಪಕ್ಷ ಬೆಳೆಯಲು ಸಾಧ್ಯವಾಗುತ್ತದೆ. ಸಿ.ಎಸ್.ಪುಟ್ಟರಾಜು ಅವರ ಕುಟುಂಬ ಪಕ್ಷ ಸಂಘಟನೆಗೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ಶಿವಕುಮಾರ್ ಅವರು ಕೆಲಸ ಮಾಡುವ ಉತ್ಸಾಹಕರಾಗಿದ್ದು ಇಂತಹ ವ್ಯಕ್ತಿಗಳಿಗೆ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಎದುರಾಳಿ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಆಣೆಪ್ರಮಾಣ ಮಾಡುವ ಮೂಲಕ ಸುಳ್ಳು ಭರವಸೆ ನೀಡುತ್ತಾರೆ. ಅಂತಹ ವ್ಯಕ್ತಿಗಳಿಗೆ ಮಣೆ ಹಾಕಬೇಡಿ. ಸಿ.ಎಸ್.ಪುಟ್ಟರಾಜು ಅವರು ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಜನತೆಯ ಕಷ್ಟಸುಖಗಳಿಗೆ ಭಾಗವಹಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಡಿತ ಸಾಧಿಸಿದರೆ ಮುಂದಿನ ದೊಡ್ಡ ಚುನಾವಣೆಗಳನ್ನು ಎದುರಿಸಲು ಸಹಕಾರಿಯಾಗುತ್ತವೆ. ಎನ್‌ಡಿಎ ಮೈತ್ರಿ ಅಭ್ಯರ್ಥಿ ಸಿ.ಶಿವಕುಮಾರ್ ಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ, ಶ್ರೀರಂಗಪಟ್ಟಣ ಬಿಜೆಪಿ ಮುಖಂಡ ಸಚ್ಚಿದಾನಂದ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುಸ್ವಾಮಿ, ನಂಜೇಗೌಡ, ರಾಧಕೃಷ್ಣ, ಆನಂದ್, ಸುಶೀಲಮ್ಮ, ಗವಿಗೌಡ, ಎಂ.ಸಿ.ಯಶ್ವಂತ್‌ ಕುಮಾರ್, ಮನ್ಮುಲ್ ಮಾಜಿ ನಿರ್ದೇಶಕ ಜಿ.ಇ.ರವಿಕುಮಾರ್, ಗಿರೀಗೌಡ, ಸ್ವಾಮೀಗೌಡ ಸೇರಿದಂತೆ ಅನೇಕ ಮುಖಂಡರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ