ಶಿವಾನಂದ ಗೊಂಬಿ
"ಮಸೀದಿ ಕೆಡವಿದ ಮ್ಯಾಲೆ ಒಳಗಿದ್ದ ರಾಮಲಲ್ಲಾನ ಮೂರ್ತಿ ಎತ್ತಿ ಸುರಕ್ಷಿತವಾಗಿಟ್ಟಿದ್ದು ನಾನೇ, 120 ಕೆ.ಜಿ. ತೂಕದ ಘಂಟೆಯನ್ನು ಐದಾರು ಜನ ಸೇರಿ ಸುರಕ್ಷಿತವಾಗಿಟ್ಟಿದ್ದೆವು. ಮರಳಿ ಬರುವಾಗ ನಮ್ಮ ಮೇಲೆ ಕಲ್ಲೆಸೆತವಾಗುತ್ತಿತ್ತು!
ಇದು 1992ರಲ್ಲಿ ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡು ಕರಸೇವಕರಾಗಿ ತೆರಳಿದ್ದ ಹುಬ್ಬಳ್ಳಿಯ ನಂದಗೋಪಾಲ ಸಫಾರಿ ಅವರು ಹೇಳುವ ಮಾತು. ಅಯೋಧ್ಯೆಯಲ್ಲಿ ರಾಮಮಂದಿರದ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ದೊಂದಿಗೆ ಕರಸೇವೆಯ ನೆನಪುಗಳನ್ನು ಮೆಲುಕು ಹಾಕಿದರು.1992ರಲ್ಲಿ ಕರಸೇವೆಗೆ ಕರೆ ಬಂದಾಗ ಹುಬ್ಬಳ್ಳಿಯಿಂದ ಎರಡು ತಂಡಗಳಲ್ಲಿ ಕರಸೇವಕರು ತೆರಳಿದ್ದರು. ಆ ಎರಡು ತಂಡಗಳ ಪೈಕಿ ಒಂದರ ನೇತೃತ್ವ ವಹಿಸಿದ್ದವರು ನಂದಗೋಪಾಲ ಸಫಾರಿ. ಇವರ ತಂಡದಲ್ಲಿ 15 ಮಂದಿ ಇದ್ದರು. 8 ದಿನ ಮುಂಚಿತವಾಗಿಯೇ ಅಯೋಧ್ಯೆಗೆ ತೆರಳಿದ್ದ ಈ ತಂಡ ಮಸೀದಿ ನೆಲಸಮವಾದ ಮರುದಿನ ಅಲ್ಲಿಂದ ಮರಳಿದ್ದರು.
1992ರ ಡಿ.6ರಂದು ಬೆಳಗ್ಗೆ 9ರ ಸುಮಾರಿಗೆ ಮಸೀದಿ ಬಳಿ ತೆರಳಿದ್ದೆವು. ಅಲ್ಲೇ ಪಕ್ಕದ ಗೋಡೆ ಮೇಲೆ ನಿಂತು ಉಮಾಭಾರತಿ ಜೋರಾಗಿ ಹನುಮಾನ್ ಚಾಲೀಸ ಪಠಿಸುತ್ತಿದ್ದರೆ, ಎಲ್.ಕೆ. ಅಡ್ವಾಣಿ, ಯಡಿಯೂರಪ್ಪ ಸೇರಿ ಹಲವು ಹಿರಿಯ ನಾಯಕರು ಭಾಷಣದ ಮೂಲಕ ಹೋರಾಟಗಾರರನ್ನು ಹುರಿದುಂಬಿಸುತ್ತಿದ್ದರು ಎಂದು ಸ್ಮರಿಸಿದರು.
ಸಮೀಪದಲ್ಲೇ 120 ಕೆಜಿ ತೂಕದ ಗಂಟೆಯೊಂದಿತ್ತು. ಅದನ್ನು ಬರೋಬ್ಬರಿ ಐದಾರು ಜನ ಕರಸೇವಕರು ಸೇರಿಕೊಂಡು ಎತ್ತಿ ಪಕ್ಕದಲ್ಲಿ ಸುರಕ್ಷಿತ ಜಾಗೆ ನೋಡಿಕೊಂಡು ಇಟ್ಟಿದ್ದೆವು ಎಂದು ಕರಸೇವೆಯ ಆ ದಿನಗಳನ್ನು ಮೆಲಕು ಹಾಕಿದರು.
ಕರಸೇವೆಯಲ್ಲಿ ತೊಡಗಿದ್ದ ವೇಳೆ ನನ್ನ ಐಡಿ (ಗುರುತಿನ ಚೀಟಿ) ಕಳೆದಿತ್ತು. ಅದನ್ನು ಬೇರೆ ರಾಜ್ಯದ ಕರಸೇವಕರು ತಂದು ಕರ್ನಾಟಕದ ಟೆಂಟ್‌ಗೆ ಕೊಟ್ಟಿದ್ದರು. ಅದನ್ನು ನೋಡಿ ಹಿರಿಯರೆಲ್ಲರೂ ಬಹುಶಃ ನಾನು ಅಲ್ಲೇ ಗದ್ದಲದಲ್ಲಿ ಬಿದ್ದು ಸತ್ತಿರಬೇಕು. ಅದಕ್ಕೆ ಯಾರೋ ಐಡಿ ತಂದು ಇಲ್ಲಿಗೆ ಮುಟ್ಟಿಸಿದ್ದಾರೆ ಎಂದು ಭಾವಿಸಿದ್ದರು. ಬಳಿಕ ಕೆಲಹೊತ್ತು ಆದ ಮೇಲೆ ನಾನು ನಮ್ಮ ಟೆಂಟ್‌ಗೆ ಹಿಂತಿರುಗಿದಾಗಲೇ ನಾನು ಜೀವಂತ ಇರುವುದು ನಮ್ಮೊಂದಿಗೆ ಬಂದಿದ್ದ ಕರಸೇವಕರಿಗೆ ಗೊತ್ತಾಯಿತು ಎಂದು ಸಫಾರಿ ನೆನಪಿಸಿಕೊಂಡರು.