ನಾನೇ ಸಕ್ಕರೆ ಕಾರ್ಖಾನೆ ಆರಂಭಿಸಲು ಆಲೋಚಿಸುತ್ತಿರುವೆ: ಶಾಸಕ ಗವಿಯಪ್ಪ

KannadaprabhaNewsNetwork |  
Published : Oct 19, 2024, 12:31 AM IST
18ಎಚ್‌ ಪಿಟಿ1- ಶಾಸಕ ಎಚ್.ಆರ್‌. ಗವಿಯಪ್ಪ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಸಕ್ಕರೆ ಕಾರ್ಖಾನೆಗೆ ಹಣ ಹೂಡಿಕೆ ಮಾಡಲು ಸಲಹೆ ನೀಡಿದ್ದಾರೆ.

ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಕ್ಕರೆ ಕಾರ್ಖಾನೆಗೆ ಹಣ ಹೂಡಿಕೆ ಮಾಡಲು ಸಲಹೆ ನೀಡಿದ್ದಾರೆ. ಹಾಗಾಗಿ, ನಾನೇ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಆಲೋಚಿಸುತ್ತಿರುವೆ. ನಾಗೇನಹಳ್ಳಿ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದರೆ ರೈತರಿಗೂ ಅನುಕೂಲ ಆಗಲಿದೆ ಎಂದು ಶಾಸಕ ಎಚ್.ಆರ್‌. ಗವಿಯಪ್ಪ ಹೇಳಿದರು.

ನಗರದ ಮಲ್ಲಿಗಿ ಹೋಟೆಲ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಈ ಭಾಗದಲ್ಲಿ ಸಕ್ಕರೆ ಬಹುಮುಖ್ಯವಾಗಿದೆ. ಹಾಗಾಗಿ, ಸ್ಥಳೀಯ ಉದ್ಯಮಿಗಳು, ಕಾರ್ಖಾನೆಗಳ ಮಾಲೀಕರ ಬಳಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಹಣ ಹೂಡಿಕೆ ಮಾಡಲು ಚರ್ಚಿಸಿದೆ. ಆದರೆ, ಅವರ ಯೋಜನೆಗಳು ಬೇರೆ ರೀತಿಯಾಗಿವೆ. ಹಾಗಾಗಿ, ನಾನು ಮುಖ್ಯಮಂತ್ರಿ ಬಳಿ ಈ ವಿಷಯವಾಗಿ ಚರ್ಚಿಸಿದಾಗ ನನಗೆ ಸಕ್ಕರೆ ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡಲು ಸಲಹೆ ನೀಡಿದ್ದಾರೆ. ನಾನೂ ಈ ಬಗ್ಗೆ ಹಿರಿಯರಲ್ಲಿ ಚರ್ಚಿಸುತ್ತಿರುವೆ. ಶೀಘ್ರವೇ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ನಾಗೇನಹಳ್ಳಿ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಾದರೆ, ರೈತರು ಎತ್ತಿನ ಬಂಡಿಗಳಲ್ಲಿ ಕಾರ್ಖಾನೆಗೆ ಕಬ್ಬು ಸಾಗಿಸಲು ಅನುಕೂಲ ಆಗಲಿದೆ. ಇಲ್ಲದಿದ್ದರೆ ಟ್ರ್ಯಾಕ್ಟರ್‌, ಲಾರಿಗಳಲ್ಲಿ ಕಬ್ಬು ಸಾಗಾಟ ಮಾಡಬೇಕಾಗುತ್ತದೆ ಎಂದರು.

ಬಡವರಿಗೆ ಸೈಟ್‌ಗಳನ್ನು ನೀಡಲಾಗುವುದು. ಆದರೆ, ಮನೆಗಳನ್ನು ನಿರ್ಮಾಣ ಮಾಡಿಯೇ ಹಂಚಿಕೆ ಮಾಡುವ ಆಲೋಚನೆ ಹೊಂದಲಾಗಿದೆ. ಅಲ್ಲದೇ 20 ವರ್ಷಗಳ ವರೆಗೆ ಬೇರೆ ಯಾರಿಗೂ ಮನೆಗಳನ್ನು ಮಾರಾಟ ಮಾಡದಂತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಹೊಸಪೇಟೆಯಲ್ಲಿ ಹೃದಯ ಆರೈಕೆ ಕೇಂದ್ರ ಸ್ಥಾಪನೆಗೆ ಕ್ರಮವಹಿಸಲಾಗುತ್ತಿದೆ. ಬೆಂಗಳೂರು ಹೊರತುಪಡಿಸಿದರೆ ಹೊಸಪೇಟೆಯಲ್ಲಿ ಇಂತಹ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಈಗಾಗಲೇ ಸಿಎಸ್‌ಆರ್‌ ನಿಧಿಯಲ್ಲಿ ಮಶಿನ್‌ಗಳನ್ನು ಖರೀದಿಸಲಾಗಿದೆ. ಐದು ವರ್ಷಗಳವರೆಗೆ ವೈದ್ಯರಿಗೂ ವೇತನ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ 20 ಬೆಡ್‌ಗಳಲ್ಲಿ ಈ ಕೇಂದ್ರ ತೆರೆಯಲಾಗುವುದು. ಆದರೆ, ಕೆಲ ಲಾಭಿಯಿಂದಾಗಿ ಈ ಕೇಂದ್ರ ಸ್ಥಾಪನೆಗೆ ಆರೋಗ್ಯ ಇಲಾಖೆಯಿಂದ ಪರವಾನಗಿ ದೊರೆಯುತ್ತಿಲ್ಲ. ಆದರೆ, ಆರೋಗ್ಯ ಸಚಿವರ ಬಳಿ ಚರ್ಚಿಸಿ ಶೀಘ್ರವೇ ಈ ಕೇಂದ್ರ ಸ್ಥಾಪನೆಗೆ ಕ್ರಮವಹಿಸಲಾಗುವುದು ಎಂದರು.

ಜಿಲ್ಲಾಸ್ಪತ್ರೆಯಲ್ಲಿ 250ರಿಂದ 300 ಬೆಡ್‌ಗೆ ಹೆಚ್ಚಿಸಲಾಗಿದೆ. ನಾಗೇನಹಳ್ಳಿ, ಪಾಪಿನಾಯಕನಹಳ್ಳಿ ಮತ್ತು ಕಲ್ಲಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಪರವಾನಗಿ ದೊರೆತಿದೆ. ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಯಾರಿಗೆ ಟಿಕೆಟ್‌ ನೀಡಿದರೂ ಗೆಲ್ಲಿಸುತ್ತೇವೆ:

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಯಾರಿಗೆ ಟಿಕೆಟ್‌ ಕೊಡಿಸಿದರೂ ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಸಂಸದ ತುಕಾರಾಂ ಅವರು ಉತ್ತಮ ವ್ಯಕ್ತಿತ್ವ ಹೊಂದಿದ್ದಾರೆ. ಅವರ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡಿದರೂ ಅಭ್ಯಂತರ ಇಲ್ಲ. ಇನ್ನೂ ಪಕ್ಷದ ಕಾರ್ಯಕರ್ತರಿಗೆ ನೀಡಿದರೂ ಸಮಸ್ಯೆ ಇಲ್ಲ. ಸಂಡೂರಿನಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದರು.

ಹೊಸಪೇಟೆಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುವುದು. ನಗರದ ಸೌಂದರ್ಯೀಕರಣಕ್ಕೆ ಒತ್ತು ನೀಡಲಾಗುವುದು. ಪ್ರವಾಸಿ ತಾಣವಾಗಿರುವ ಹೊಸಪೇಟೆಯಲ್ಲಿ ಸ್ವಚ್ಛತೆಗೆ ಕ್ರಮವಹಿಸಲಾಗುತ್ತಿದ್ದು, ಇದಕ್ಕಾಗಿ 123 ಪೌರಕಾರ್ಮಿಕರನ್ನು ಹೊಸದಾಗಿ ನೇಮಿಸಿಕೊಳ್ಳಲಾಗುತ್ತಿದೆ ಎಂದರು.

ಹೊಸಪೇಟೆ ಭಾಗದಲ್ಲಿ ವಿಮಾನ ನಿಲ್ದಾಣ ಅವಶ್ಯಕತೆ ಇದೆ. ಇದರಿಂದ ಪ್ರವಾಸೋದ್ಯಮ ಬೆಳವಣಿಗೆಯಾಗಲಿದೆ. ಬೆಂಗಳೂರು, ಮುಂಬಯಿ, ದಿಲ್ಲಿಗೆ ನೇರ ವಿಮಾನ ಸೌಲಭ್ಯ ದೊರೆತರೆ ಪ್ರವಾಸಿಗರಿಗೂ ಅನುಕೂಲ ಆಗಲಿದೆ. ಹೋಟೆಲ್‌, ರೆಸಾರ್ಟ್‌ಗಳಿಂದ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಕೂಡ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ