ಲಿಂಗಬೇಧವಿಲ್ಲದೇ ಮಕ್ಕಳಿಗ ಶಿಕ್ಷಣ, ಸಂಸ್ಕಾರ ನೀಡಿ

KannadaprabhaNewsNetwork |  
Published : Oct 19, 2024, 12:31 AM IST
18ಕೆಡಿವಿಜಿ9-ದಾವಣಗೆರೆಯಲ್ಲಿ ಶುಕ್ರವಾರ ಸಾರ್ವಜನಿಕ ವಾಲ್ಮೀಕಿ ಜಯಂತೋತ್ಸವ ಸಮಿತಿ ಹಾಗೂ ಶ್ರೀ ವಾಲ್ಮೀಕಿ ಪ್ರತಿಷ್ಟಾನದಿಂದ 3ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ, ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿದ ಪದ್ಮಶ್ರೀ ಮಂಜಮ್ಮ ಜೋಗತಿ. ...............18ಕೆಡಿವಿಜಿ10, 11-ದಾವಣಗೆರೆಯಲ್ಲಿ ಶುಕ್ರವಾರ ಸಾರ್ವಜನಿಕ ವಾಲ್ಮೀಕಿ ಜಯಂತೋತ್ಸವ ಸಮಿತಿ ಹಾಗೂ ಶ್ರೀ ವಾಲ್ಮೀಕಿ ಪ್ರತಿಷ್ಟಾನದಿಂದ 3ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವಾಲ್ಮೀಕಿ ಭಾವಚಿತ್ರ ಮೆರವಣಿಗೆ, ಕಲಾ ಮೇಳ. | Kannada Prabha

ಸಾರಾಂಶ

ಪಾಲಕರು ತಮ್ಮ ಮಕ್ಕಳಿಗೆ ಲಿಂಗಭೇದ ಮಾಡದೇ, ಉತ್ತಮ ಶಿಕ್ಷಣ ಕೊಡಿಸಬೇಕು. ಗಂಡು, ಹೆಣ್ಣು ಅಥವಾ ತೃತೀಯ ಲಿಂಗಿ ಹೀಗೆ ಯಾರೇ ಆಗಿದ್ದರೂ ಬೇಧಭಾವ ಮಾಡಬಾದರು ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಪದ್ಮಶ್ರೀ ಮಂಜಮ್ಮ ಜೋಗತಿ ಸಲಹೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ ಪಾಲಕರು ತಮ್ಮ ಮಕ್ಕಳಿಗೆ ಲಿಂಗಭೇದ ಮಾಡದೇ, ಉತ್ತಮ ಶಿಕ್ಷಣ ಕೊಡಿಸಬೇಕು. ಗಂಡು, ಹೆಣ್ಣು ಅಥವಾ ತೃತೀಯ ಲಿಂಗಿ ಹೀಗೆ ಯಾರೇ ಆಗಿದ್ದರೂ ಬೇಧಭಾವ ಮಾಡಬಾದರು ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಹೇಳಿದರು.

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಹಾಗೂ ಶ್ರೀ ವಾಲ್ಮೀಕಿ ಪ್ರತಿಷ್ಠಾನದಿಂದ ಶುಕ್ರವಾರದಿಂದ ಆರಂಭವಾದ 3ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತೃತೀಯಲಿಂಗಿ ಎಂಬ ಕಾರಣಕ್ಕೆ ಕೌಟುಂಬಿಕ ಅಥವಾ ಸಾಮಾಜಿಕ ಬಹಿಷ್ಕಾರ ಹಾಕದೇ ಲಿಂಗ ಸಮಾನತೆ ಎತ್ತಿಹಿಡಿಯಬೇಕು. ದೇಶದ ಸಂವಿಧಾನ ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿದೆ. ವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳುವ ಹಕ್ಕು ನೀಡಿಲ್ಲ. ಮಹಿಳೆಯರು ಯಾವುದಕ್ಕೂ ಅಂಜದೇ ಧೈರ್ಯದಿಂದ ಮುನ್ನುಗ್ಗಿದಾಗ ಸಮಾಜ ಗುರುತಿಸುತ್ತದೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಸಂಸ್ಕಾರವಂತರಾಗುತ್ತಾರೆ. ಸಂಸ್ಕಾರ ಕಲಿತವರು ಮಾತ್ರವೇ ನಮ್ಮ ಸಂಸ್ಕೃತಿಯನ್ನು ಉಳಿಸಲು ಸಾಧ್ಯ ಎಂದು ತಿಳಿಸಿದರು.

ಜೀವನದ ಸಮಸ್ಯೆಗಳಿಗೆ ಬೆನ್ನು ತೋರಿಸದೇ ಧೈರ್ಯದಿಂದ ಎದುರಿಸಬೇಕು. ಆಗ ಮಾತ್ರ ಭವಿಷ್ಯದ ಬದುಕು ಉಜ್ವಲವಾಗಿರುತ್ತದೆ. ತೃತೀಯ ಲಿಂಗಿಯಾಗಿ ಕುಟುಂಬದಿಂದ ಬಹಿಷ್ಕಾರಕ್ಕೆ ಒಳಗಾದ ನಾನು 2 ಸಲ ಆತ್ಮಹತ್ಯೆಗೆ ಯತ್ನಿಸಿದ್ದೆ. ಆದರೆ, ಸಾವೇ ಎಲ್ಲ ಸಮಸ್ಯೆಗಳಿಗೆ ಉತ್ತರವಲ್ಲ ಎಂಬುದನ್ನು ಅರಿತು, ಅನೇಕರ ಸಹಾಯದಿಂದ ಉತ್ತಮ ಬದುಕು ರೂಪಿಸಿಕೊಂಡೆ. ಈ ದೃಢನಿರ್ಧಾರ ನನ್ನನ್ನು ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿವರೆಗೂ ಕೊಂಡೊಯ್ದಿತು ಎಂದು ಅವರು ಸ್ಮರಿಸಿದರು.

ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಈ ವರ್ಷ ಮಹಿಳೆಯರಿಂದಲೇ ವಾಲ್ಮೀಕಿ ಜಯಂತಿ ಆಚರಿಸಲು ನಿರ್ಧರಿಸಲಾಯಿತು. 45 ದಿನಗಳಿಂದ ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳಲಾಗಿದೆ. ಬಹಳಷ್ಟು ಜನ ವಾಲ್ಮೀಕಿ ಜಯಂತಿಯನ್ನು ರಾಜಕೀಯ ಲಾಭಕ್ಕಾಗಿ ಪರಿವರ್ತನೆ ಮಾಡಲು ನೋಡುತ್ತಾರೆ. ಆದರೆ, ನಾವು ಸಮುದಾಯದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವ ಮತ್ತು ಮಹಿಳೆಯರನ್ನು ಮುಂಚೂಣಿಗೆ ತರಲು ಚಿಂತನೆ ಮಾಡಿದ್ದೇವೆ. ನ್ಯಾಷನಲ್ ಲವ್‌ಲಿ ಹುಡ್ ಯೋಜನೆಯಡಿ ಪಶುಸಖಿ, ಕೃಷಿಸಖಿಯಾಗಿ ಕೆಲಸ ಮಾಡುತ್ತಿರುವ ಮಹಿಳೆಯರು ಕೇವಲ ₹2ರಿಂದ ₹3 ಸಾವಿರವರೆಗೆ ಕೆಲಸ ಮಾಡುತ್ತಿದ್ದಾರೆ. ಇದನ್ನು ಕನಿಷ್ಠ 12 ಸಾವಿರಕ್ಕೆ ಹೆಚ್ಚಿಸಬೇಕು. ಈ ಕುರಿತು ಶೀಘ್ರವೇ ಸಂಸದರನ್ನು ಭೇಟಿ ಮಾಡಿ, ಬರುವ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಮನವಿ ಸಲ್ಲಿಸೋಣ ಎಂದು ಹೇಳಿದರು.

ಮಹಿರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಕೂಡ್ಲಿಗೆ ಪದ್ಮಾವತಿ ಮಾತನಾಡಿ, ಸಮುದಾಯದ ಮಹಿಳೆಯರು ಜಾಗೃತರಾದರೆ ಮಾತ್ರ ಸೌಲಭ್ಯ ಪಡೆಯಲು ಸಾಧ್ಯ. ಯಾವುದೇ ಕೆಲಸಗಳಿಗೂ ಹಿಂದೆ ಬೀಳದೆ ನಮ್ಮತನ ತೋರಿಸಿದಾಗ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತ ಪುರಸ್ಕೃತೆ ವೀರಾಪುರ ಅಂಜಿನಮ್ಮ, ಸಮಿತಿಯ ನಳಿನ ಕಿತ್ತೂರು, ಶೃತಿ, ದೇವರಮನೆ ಮಹೇಶ, ತಾಪಂ ಮಾಜಿ ಸದಸ್ಯ ಗುಮ್ಮನೂರು ಶಂಭಣ್ಣ, ಉದ್ಯಮಿ ಜ್ಞಾನೇಶ್ವರ್, ರೈತ ಸಂಘದ ಯರವನಾಗತಿಹಳ್ಳಿ ಪರಮೇಶ್ವರಪ್ಪ, ಪಾಮೇನಹಳ್ಳಿ ಗೌಡರ ಶೇಖರಪ್ಪ, ಚಿಕ್ಕಮಲ್ಲನಹೊಳೆ ಚಿರಂಜೀವಿ, ಎಪಿಎಂಸಿ ಮಾಜಿ ಅಧ್ಯಕ್ಷ ಹೂವಿನಮಡು ಹಾಲಪ್ಪ, ಎನ್‌ಎನ್‌ಟಿ ತಿಪ್ಪೇಸ್ವಾಮಿ. ಗುಮ್ಮನೂರು ರವಿ, ಕೋಗಲೂರು ಕುಮಾರ, ಕುರ್ಕಿ ಹನುಮಂತ. ಆಲೂರು ಪರಶುರಾಮ, ರಾಜನಹಟ್ಟಿ ರಾಜು ಸೇರಿದಂತೆ ಅನೇಕರು ಇದ್ದರು. ಜಾನಪದ ಕಲಾವಿದ ಸಿ.ಎಚ್.ಉಮೇಶಗೆ 2024-25 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಜಯ ಚಾಮರಾಜ ಪೇಟೆ ವೃತ್ತದಿಂದ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆಗೆ ಪದ್ಮಾವತಿ ಅವರು ಚಾಲನೆ ನೀಡಿದರು. ಡೊಳ್ಳು, ಸಮಾಳ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರಗು ನೀಡಿದ್ದವು.

- - -

ಬಾಕ್ಸ್‌ * “ವಾಲ್ಮೀಕಿ ಪ್ರೊಟೆಕ್ಷನ್ ಆಕ್ಟ್” ಜಾರಿಯಾಗಲಿ ಸಮುದಾಯದ ಹೆಣ್ಣುಮಕ್ಕಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕು. ವಾಲ್ಮೀಕಿಯವರನ್ನು ದರೋಡೆಕೋರನೆಂದು ಸಂಬೋಧಿಸಿದರೆ ಪಂಜಾಬ್ ಮಾದರಿಯಲ್ಲಿ ಮೊಕದ್ದಮೆ ದಾಖಲು ಮಾಡಬೇಕು. ರಾಜ್ಯದ ಯಾವುದೇ ಭಾಗದಲ್ಲಿ ಪ್ರತಿಷ್ಠಾಪನೆಯಾಗುವ ಮಹರ್ಷಿ ವಾಲ್ಮೀಕಿ ಮೂರ್ತಿ ತೆರವು ಮಾಡಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಪಂಜಾಬ್ ಮಾದರಿಯ “ವಾಲ್ಮೀಕಿ ಪ್ರೊಟೆಕ್ಷನ್ ಆಕ್ಟ್” ಜಾರಿಗೆ ತರುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ವೇದಿಕೆ ಮೂಲಕ ಒತ್ತಾಯಿಸಲಾಗುವುದು ಎಂದು ಹುಚ್ಚವ್ವನಹಳ್ಳಿ ಮಂಜುನಾಥ ಹೇಳಿದರು.

- - - ಕ್ಯಾಪ್ಷನ್

18ಕೆಡಿವಿಜಿ9-ದಾವಣಗೆರೆಯಲ್ಲಿ ಶುಕ್ರವಾರ ಸಾರ್ವಜನಿಕ ವಾಲ್ಮೀಕಿ ಜಯಂತೋತ್ಸವ ಸಮಿತಿ ಹಾಗೂ ಶ್ರೀ ವಾಲ್ಮೀಕಿ ಪ್ರತಿಷ್ಟಾನದಿಂದ 3ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ, ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿದ ಪದ್ಮಶ್ರೀ ಮಂಜಮ್ಮ ಜೋಗತಿ. ...............18ಕೆಡಿವಿಜಿ10, 11-ದಾವಣಗೆರೆಯಲ್ಲಿ ಶುಕ್ರವಾರ ಸಾರ್ವಜನಿಕ ವಾಲ್ಮೀಕಿ ಜಯಂತೋತ್ಸವ ಸಮಿತಿ ಹಾಗೂ ಶ್ರೀ ವಾಲ್ಮೀಕಿ ಪ್ರತಿಷ್ಟಾನದಿಂದ 3ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವಾಲ್ಮೀಕಿ ಭಾವಚಿತ್ರ ಮೆರವಣಿಗೆ, ಕಲಾ ಮೇಳ.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ