-ಐವತ್ತು ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
----ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಧರ್ಮವನ್ನು ನಾನು ಕಾಪಾಡಿದರೆ ಬೀರಲಿಂಗೇಶ್ವರ ನನ್ನನ್ನು ಕಾಪಾಡುತ್ತಾನೆಂಬ ನಂಬಿಕೆಯಿಟ್ಟುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿವಕಾಗಿ ಶ್ರಮಿಸುತ್ತಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು. ತಾಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ಐವತ್ತು ಲಕ್ಷ ರು. ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.ಎರಡುವರೆ ಕೋಟಿ ರು. ವೆಚ್ಚದಲ್ಲಿ ಆಸ್ಪತ್ರೆ ಕಟ್ಟಿಸಿದ್ದೇನೆ. ನೆನೆಗುದಿಗೆ ಬಿದ್ದಿರುವ ಸಮುದಾಯ ಭವನ ಪೂರ್ಣಗೊಳ್ಳಲು ಒಂದು ಕೋಟಿ ರು. ಮಂಜೂರು ಮಾಡಿದ್ದೇನೆ. ಬೀರಲಿಂಗೇಶ್ವರಸ್ವಾಮಿ ತೋಪು ಜಾತ್ರೆಗೆ ವಿದ್ಯುತ್, ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅಧಿಕಾರ ಇರಲಿ, ಇಲ್ಲದಿರಲಿ ಬೇಧವಿಲ್ಲದೆ ಎಲ್ಲಾ ಜಾತಿ ಜನಾಂಗದವರನ್ನು ಸಮಾನವಾಗಿ ಕಾಣುತ್ತ ನಿರ್ವಂಚನೆಯಿಂದ ಕೆಲಸ ಮಾಡುತ್ತಿದ್ದೇನೆಂದರು.
ಭರಮಸಾಗರದಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿದಾಗ ಎತ್ತಿನಗಾಡಿ ಹೋಗುವುದಕ್ಕೂ ಜಾಗವಿರಲಿಲ್ಲ. ಗೆದ್ದ ಮೇಲೆ 386 ಹಳ್ಳಿಗಳಲ್ಲಿ ರಸ್ತೆ ಮಾಡಿಸಿದ್ದರಿಂದ ಜನ ರಸ್ತೆರಾಜ ಎಂಬ ಬಿರುದು ನೀಡಿ ಎರಡನೆ ಬಾರಿಗೂ ಚುನಾವಣೆಯಲ್ಲಿ ಗೆಲ್ಲಿಸಿದರು. ಅಂದಿನಿಂದ ಇಲ್ಲಿಯತನಕ ಶಾಸಕನಾಗಿ ಎಲ್ಲೆಲ್ಲಿ ಏನು ಅಗತ್ಯತೆಯಿದೆ ಎನ್ನುವುದನ್ನು ಅರಿತು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ಹೇಳಿದರು.ಜಿ.ಪಂ ಮಾಜಿ ಉಪಾಧ್ಯಕ್ಷ ಬಿ.ಗಂಗಾಧರ್ ಮಾತನಾಡಿ, ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಕುಡಿವ ನೀರಿಗೆ ಅಭಾವ ಆಗಬಾರದೆಂದು ಶಾಸಕ ಡಾ.ಎಂ.ಚಂದ್ರಪ್ಪನವರು ಮೂರು ಕೊಳವೆ ಬಾವಿ ಕೊರೆಸಿ ಪೈಪ್‍ಲೈನ್ ಅಳವಡಿಸಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಅದೇ ರೀತಿ ವಿದ್ಯುತ್, ರಸ್ತೆ ನಿರ್ಮಾಣವಾಗಿದೆ. 55 ಅಡಿ ಎತ್ತರದ ಹೈಮಾಸ್ ಲೈಟ್ ಕೂಡ ಹಾಕಲಾಗಿದೆ. ರಾಜಕಾರಣದಲ್ಲಿ ಇನ್ನು ಉತ್ತುಂಗ ಮಟ್ಟಕ್ಕೆ ಏರಲಿ ಎಂದು ಬೀರಲಿಂಗೇಶ್ವರಸ್ವಾಮಿಯಲ್ಲಿ ಪ್ರಾರ್ಥಿಸಿದರು.
ಗ್ರಾ.ಪಂ ಅಧ್ಯಕ್ಷ ಬಸವರಾಜಪ್ಪ, ಗುಡಿಗೌಡ್ರು ಚಿಕ್ಕಪ್ಪ, ಪುಟ್ಟಪ್ಪ, ನಾಗರಾಜಪ್ಪ, ಡಿ.ಚಂದ್ರಪ್ಪ, ಲಕ್ಷ್ಮಣ್, ಚಂದ್ರಮೌಳಿ, ಹಳ್ಳಪ್ಪ, ಗೋವಿಂದಪ್ಪ, ವೇದಮೂರ್ತಿ, ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.----
ಫೋಟೋ ವಿವರಣೆ: ತಾಳಿಕಟ್ಟೆ ಗ್ರಾಮದಲ್ಲಿ ಐವತ್ತು ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪನವರಿಂದ ಭೂಮಿಪೂಜೆ.