ದೇವರ ಅಪಹಾಸ್ಯಕ್ಕೆ ಕ್ಷಮೆ ಕೇಳುವೆ : ರಣವೀರ್‌

KannadaprabhaNewsNetwork |  
Published : Mar 25, 2026, 01:45 AM IST
Ranveer singh

ಸಾರಾಂಶ

ಕಾಂತಾರ ಚಿತ್ರದ ಚಾವುಂಡಿ ದೈವಪಾತ್ರದ ಬಗ್ಗೆ ಅಪಹಾಸ್ಯ ಮಾಡಿದ ಆರೋಪ ಸಂಬಂಧ ಕ್ಷಮೆ ಕೋರಿ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅವರು ಚಾಮುಂಡಿ ಬೆಟ್ಟಕ್ಕೂ ಭೇಟಿ ನೀಡಲಿದ್ದಾರೆ, ಕ್ಷಮೆಯಾಚಿಸಿ ನ್ಯಾಯಾಲಯಕ್ಕೆ ಅಫಿಡವಿಟ್‌ ಕೂಡ ಸಲ್ಲಿಸಲಿದ್ದಾರೆ  

 ಬೆಂಗಳೂರು :  ಕಾಂತಾರ ಚಾಪ್ಟರ್‌-1 ಚಿತ್ರದ ಚಾವುಂಡಿ ದೈವಪಾತ್ರದ ಬಗ್ಗೆ ಅಪಹಾಸ್ಯ ಮಾಡಿದ ಆರೋಪ ಸಂಬಂಧ ಕ್ಷಮೆ ಕೋರಿ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅವರು ಚಾಮುಂಡಿ ಬೆಟ್ಟಕ್ಕೂ ಭೇಟಿ ನೀಡಲಿದ್ದಾರೆ, ಕ್ಷಮೆಯಾಚಿಸಿ ನ್ಯಾಯಾಲಯಕ್ಕೆ ಅಫಿಡವಿಟ್‌ ಕೂಡ ಸಲ್ಲಿಸಲಿದ್ದಾರೆ ಎಂದು ರಣವೀರ್‌ ಪರ ಹಿರಿಯ ವಕೀಲ ಸಜನ್‌ ಪೂವಯ್ಯ ಹೈಕೋರ್ಟ್‌ಗೆ ತಿಳಿಸಿದರು.

ಕಾಂತಾರ ಚಾಪ್ಟರ್‌-1 ಚಿತ್ರದ ಚಾವುಂಡಿ ದೈವಕ್ಕೆ ಅಪಮಾನ

ಗೋವಾದಲ್ಲಿ ಇತ್ತೀಚೆಗೆ ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ಕಾಂತಾರ ಚಾಪ್ಟರ್‌-1 ಚಿತ್ರದ ಚಾವುಂಡಿ ದೈವಕ್ಕೆ ಅಪಮಾನ ಮಾಡಿದ ಆರೋಪ ಸಂಬಂಧ ರಣವೀರ್‌ ಸಿಂಗ್‌ ವಿರುದ್ಧ ನಗರದ ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿತ್ತು. ತನಿಖೆಗೆ ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣಾ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಇದರಿಂದ ಖಾಸಗಿ ದೂರು ಹಾಗೂ ಎಫ್‌ಐಆರ್‌ ರದ್ದು ಕೋರಿ ರಣವೀರ್‌ ಸಿಂಗ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಸೋಮವಾರ ನಡೆಸಿತು.

ಈ ವೇಳೆ ದೂರುದಾರ ಪ್ರಶಾಂತ್‌ ಮೆಥೆಲ್‌ ಪರ ವಕೀಲರು, ರಣವೀರ್‌ ಸಿಂಗ್‌ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿ ಕ್ಷಮೆ ಕೇಳಿದ್ದಾರೆ. ಆದರೆ, ಅದರಲ್ಲಿ ಪ್ರಾಮಾಣಿಕತೆ ಕಾಣುವುದಿಲ್ಲ. ಹೃದಯಪೂರ್ವಕವಾಗಿ ಅವರು ಕ್ಷಮೆಯಾಚಿಸಿಲ್ಲ. ಅವರ ಮ್ಯಾನೇಜರ್‌ಗಳು ಟ್ವೀಟ್‌ ಮಾಡಿದ್ದಾರೆ. ಚಾವುಂಡಿ ದೈವವನ್ನು ‘ಹೆಣ್ಣು ದೆವ್ವʼ ಎಂದಿದ್ದಾರೆ. ಮೌಖಿಕವಾಗಿ ದೈವಕ್ಕೆ ಅಪಮಾನ ಮಾಡಿರುವುದರಿಂದ ಅವರು ಮೌಖಿಕವಾಗಿಯೇ ಕ್ಷಮೆ ಕೋರಬೇಕು. ಸಜನ್‌ ಪೂವಯ್ಯ ಅವರ ಜೊತೆ ಹೋಗಿ ರಣವೀರ್‌ ಚಾಮುಂಡಿ ಬೆಟ್ಟಕ್ಕೆ ಅಲ್ಲಿಯೇ ಕ್ಷಮೆ ಕೋರಲಿ ಎಂದರು.

ನ್ಯಾಯಪೀಠ, ಕ್ಷಮೆ ಕೋರಿ ಅಫಿಡವಿಟ್‌

ಆಗ ನ್ಯಾಯಪೀಠ, ಕ್ಷಮೆ ಕೋರಿ ಅಫಿಡವಿಟ್‌ ಸಲ್ಲಿಸುತ್ತೇವೆ ಎಂದು ರಣವೀರ್‌ ಹೇಳುತ್ತಿದ್ದಾರೆ. ಇನ್ನೇನು ಬೇಕು? ರಣವೀರ್‌ ಮಾಡಿರುವುದು ಸರಿಯಲ್ಲ. ಅದನ್ನು ಬೆಂಬಲಿಸುವುದಿಲ್ಲ. ನ್ಯಾಯಾಲಯಕ್ಕೆ ಬಂದು ಕ್ಷಮೆ ಕೋರಬೇಕು ಎಂದು ನೀವು (ದೂರುದಾರರು) ಬಯಸುತ್ತಿದ್ದೀರಾ? ಎಂದು ಕೇಳಿದರು. ರಣವಿರ್‌ ಅವರಿಂದ ಪ್ರಮಾದವಾಗಿದೆ. ನಟರು ಪ್ರಭಾವ ಬೀರುವ ಹೆಚ್ಚು ಶಕ್ತಿ ಹೊಂದಿರುತ್ತಾರೆ. ಪಶ್ಚಾತ್ತಾಪ ವ್ಯಕ್ತಪಡಿಸುವ ಮನಸ್ಸಿರಬೇಕು. ರಣವೀರ್‌ ದೇವಾಲಯಕ್ಕೆ ಭೇಟಿ ನೀಡಬೇಕು ಎಂದರು.

ರಣವೀರ್‌ ಪರ ಹಿರಿಯ ವಕೀಲ ಸಜನ್‌ ಪೂವಯ್ಯ, ಕ್ಷಮೆ ಕೋರಿ ರಣವೀರ್‌ ಅಫಿಡವಿಟ್‌ ಸಲ್ಲಿಸಲಿದ್ದಾರೆ. ಹಾಗೆಯೇ ದೇವಸ್ಥಾನಕ್ಕೂ ಭೇಟಿ ನೀಡುತ್ತಾರೆ. ಅದಕ್ಕೆ ದಿನಾಂಕ ಸಹ ನಿಗದಿಪಡಿಸಲಾಗುವುದು ಎಂದರು. ಈ ಹೇಳಿಕೆ ಪರಿಗಣಿಸಿದ ಪೀಠ ವಿಚಾರಣೆಯನ್ನು ಏ.10ಕ್ಕೆ ಮುಂದೂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನೀಟ್ ರದ್ದಾಗಿದ್ದಕ್ಕೆ ಜೀವ ಕಳಕೊಂಡ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್ !
ಹೆಣ ಹುಡುಕಿಕೊಂಡು ಹೋದ ಖಾಕಿಗೆ ಸಿಕ್ಕಿದ್ದು ಸತ್ತ ಹೆಗ್ಗಣ!