ಕ್ಷಯರೋಗ ಮುಕ್ತ ಭಾರತವಾಗಲು ಜಾಗೃತಿ ಅಗತ್ಯ; ಟಿಎಚ್‌ ಒ ಡಾ.ಅಲೀಂ ಪಾಷ

KannadaprabhaNewsNetwork |  
Published : Mar 25, 2026, 01:45 AM IST
ʼಕ್ಷಯರೋಗ ಮುಕ್ತ ಭಾರತವಾಗಬೇಕು | Kannada Prabha

ಸಾರಾಂಶ

೧೮೮೨ರ ಮಾರ್ಚ್ 24ರಂದು ಜರ್ಮನಿಯ ಡಾ. ರಾಬರ್ಟ್ ಕೋಚ್‌ ಅವರು ಮೈಕ್ರೋ ಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್ ಬ್ಯಾಕ್ಟೀರಿಯ ಕಂಡು ಹಿಡಿದರು. ಅವರ ಸ್ಮರಣಾರ್ಥ ಪ್ರತಿವರ್ಷ ಮಾ.೨೪ರಂದು ವಿಶ್ವ ಕ್ಷಯರೋಗ ದಿನ ಆಚರಿಸಲಾಗುತ್ತಿದೆ. ಕ್ಷಯರೋಗ ಕುರಿತು ಈ ದಿನ ಜಾಗೃತಿ ಮೂಡಿಸಲಾಗುತ್ತಿದೆ .

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವುದು, ಕಳಂಕ ಕಡಿಮೆ ಮಾಡುವ ಜೊತೆಗೆ ೨೦೩೦ರೊಳಗೆ ಕ್ಷಯರೋಗ ಮುಕ್ತ ಭಾರತವಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಆರ್.ಅಲೀಂ ಪಾಷ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಕ್ಷಯರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಲು ಕರೆ ನೀಡಿದರು.

೧೮೮೨ರ ಮಾರ್ಚ್ 24ರಂದು ಜರ್ಮನಿಯ ಡಾ. ರಾಬರ್ಟ್ ಕೋಚ್‌ ಅವರು ಮೈಕ್ರೋ ಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್ ಬ್ಯಾಕ್ಟೀರಿಯ ಕಂಡು ಹಿಡಿದರು. ಅವರ ಸ್ಮರಣಾರ್ಥ ಪ್ರತಿವರ್ಷ ಮಾ.೨೪ರಂದು ವಿಶ್ವ ಕ್ಷಯರೋಗ ದಿನ ಆಚರಿಸಲಾಗುತ್ತಿದೆ. ಕ್ಷಯರೋಗ ಕುರಿತು ಈ ದಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ದೇಶದಾದ್ಯಂತ ಕ್ಷಯರೋಗ ತಪಾಸಣಾ ಶಿಬಿರಗಳು ಮತ್ತು ಉಚಿತ ಚಿಕಿತ್ಸಾ ಅಭಿಯಾನಗಳು ನಡೆಯುತ್ತಿವೆ. ೨ ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ರಾತ್ರಿ ಬೆವರುವುದು, ತೂಕ ಕಡಿಮೆ ಆಗುವುದು ಮತ್ತು ಹಸಿವು ಆಗದೇ ಇರುವುದು, ಕಫದಲ್ಲಿ ರಕ್ತ ಬೀಳುವುದು ಇವುಗಳೆಲ್ಲ ಕ್ಷಯರೋಗದ ಲಕ್ಷಣಗಳಾಗಿವೆ, ಇಂಥ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ವಹಿಸದೇ ತಕ್ಷಣ ಹತ್ತಿರದ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.

ತಾಲೂಕಿನಲ್ಲಿ ೨೦೨೫ ನೇ ಸಾಲಿನಲ್ಲಿ ೯,೨೫೭ ಮಂದಿ ಕ್ಷಯ ರೋಗದ ತಪಾಸಣೆಗೆ ಒಳಪಟ್ಟಿದ್ದಾರೆ. ೧೦೭ ಜನರಲ್ಲಿ ಕ್ಷಯ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗಿದೆ. ಕ್ಷಯ ರೋಗ ತಾಲೂಕಿನಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದರು.

೨೦೨೩ರಲ್ಲಿ ೧೩೫, ೨೦೨೪ ರಲ್ಲಿ ೧೨೫ ಹಾಗೂ ೨೦೨೫ ರಲ್ಲಿ ೧೦೭ ಜನರಲ್ಲಿ ಕ್ಷಯ ರೋಗ ಪತ್ತೆ ಹಚ್ಚಲಾಗಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕಿನ ೧೮೬ ಗ್ರಾಮಗಳ ಪೈಕಿ ೬೦ ಗ್ರಾಮಗಳಲ್ಲಿ ಕಳೆದ ಮೂರು ವರ್ಷಗಳಿಂದ ಯಾವುದೇ ಕ್ಷಯರೋಗ ಪ್ರಕರಣ ಪತ್ತೆ ಆಗಿಲ್ಲ. ಈ ಗ್ರಾಮಗಳು ಸಂಪೂರ್ಣ ಕ್ಷಯರೋಗ ಮುಕ್ತ ಗ್ರಾಮಗಳಾಗಿವೆ ಎಂದರು.

ತಾಲೂಕಿನ ೨೪ ಗ್ರಾಪಂಗಳಲ್ಲಿ ೨೦೨೩ನೇ ಸಾಲಿನಲ್ಲಿ ೧೦ ಗ್ರಾಪಂ ಕ್ಷಯರೋಗ ಮುಕ್ತವಾಗಿವೆ. ೨೦೨೪ನೇ ಸಾಲಿನಲ್ಲಿ ೧೯ ಗ್ರಾಪಂಗಳು ಕ್ಷಯರೋಗ ಮುಕ್ತ ಎಂದು ಆಯ್ಕೆಯಾಗಿವೆ. ೨೦೨೫ ನೇ ಸಾಲಿನಲ್ಲಿ ತಾಲೂಕಿನ ೧೯ ಗ್ರಾಪಂಗಳಲ್ಲಿ ನೇನೇಕಟ್ಟೆ, ಪಡಗೂರು, ಶಿಂಡನಪುರ, ಬೇರಂಬಾಡಿ ಚಿನ್ನದ ಪದಕ, ಅಗತಗೌಡನಹಳ್ಳಿ, ಬಲಚವಾಡಿ, ಹಂಗಳ, ಕನ್ನೇಗಾಲ, ಮಂಗಲ, ಶಿವಪುರ, ತೆರಕಣಾಂಬಿ ಬೆಳ್ಳಿ ಪದಕ, ಬೇಗೂರು, ಕೋಟೆಕೆರೆ, ಬೊಮ್ಮನಹಳ್ಳಿ, ಬೊಮ್ಮಲಾಪುರ, ಹುಂಡೀಪುರ, ಕೆಲಸೂರು, ವಡ್ಡಗೆರೆ ಗ್ರಾಪಂ ಕಂಚಿನ ಪದಕ ಪಡೆದುಕೊಂಡಿವೆ ಎಂದರು.

ಅಭಿಯಾನದಲ್ಲಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಂಜುನಾಥ್, ವೈದ್ಯ ಡಾ.ಅರುಣ್, ಆರೋಗ್ಯ ಇಲಾಖೆಯ ನವೀನ್, ದೀಪಶ್ರೀ, ತುಳಸಿಮಣಿ, ರಾಘವೇಂದ್ರ, ಭವ್ಯ, ಪುಟ್ಟಸ್ವಾಮಿ, ಪದ್ಮ ಹಾಗೂ ತಾಲೂಕಿನ ಸಮುದಾಯ ಅರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು, ಹಿರಿಯ ಮತ್ತು ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇವರ ಅಪಹಾಸ್ಯಕ್ಕೆ ಕ್ಷಮೆ ಕೇಳುವೆ: ರಣವೀರ್‌
ಎಲ್ಲ ಗ್ರಾಮ ಪಂಚಾಯಿತಿಗಳನ್ನು ಕ್ಷಯರೋಗ ಮುಕ್ತಗೊಳಿಸಲು ಶ್ರಮಿಸಿ: ಜಿಪಂ ಸಿಇಒ ಮೋನಾ ರೋತ್