ನನಗೆ ಓದಲು, ಬರೆಯಲು ಬರುತ್ತೆ ಸಾರ್‌

KannadaprabhaNewsNetwork |  
Published : Feb 14, 2025, 12:33 AM IST
5454 | Kannada Prabha

ಸಾರಾಂಶ

ಕಳೆದ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಧಾರವಾಡ 22ನೇ ಸ್ಥಾನಕ್ಕೆ ಕುಸಿದಿತ್ತು. ಇದನ್ನು ಹೇಗಾದರೂ ಮಾಡಿ ಮೇಲೆತ್ತುವ ಹಟ ತೊಟ್ಟಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು "ಮಿಷನ್‌ ವಿದ್ಯಾಕಾಶಿ " ಯೋಜನೆ ರೂಪಿಸಿ ಹಿಂದುಳಿದಿರುವ ಮಕ್ಕಳಲ್ಲಿ ಬದಲಾವಣೆ ತರುವ ಕಾರ್ಯ ನಡೆಸಿದ್ದಾರೆ.

ಹುಬ್ಬಳ್ಳಿ:

"ನನಗೆ ಕನ್ನಡ ಓದಲು, ಬರೆಯಲು ಬರುತ್ತೆ ಸಾರ್‌. ಇಪ್ಪತ್ತರ ವರೆಗೆ ಮಗ್ಗಿ, ದಶಕ ಸಹಿತ ಸಂಕಲನ-ವ್ಯವಕಲನ, ಗುಣಾಕಾರ, ಭಾಗಾಕಾರವೂ ಬರುತ್ತೆ.... "

ತಾಲೂಕಿನ ರಾಯನಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಡಿಪಿಇಪಿ)ಯ 3ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಚಿನ್ಮಯಿ ರಾಜು ಬಡಿಗೇರ ಧಾರವಾಡ ಜಿಲ್ಲಾ ಸಾರ್ವಜನಿಕ ಇಲಾಖೆಯ ಉಪನಿರ್ದೇಶಕ ಎಸ್‌.ಎಸ್. ಕೆಳದಿಮಠ ಅವರಿಗೆ ಬರೆದಿರುವ ಪತ್ರದ ಒಕ್ಕಣಿಕೆ ಇದು.

"ನನಗೆ ಜಯಮ್ಮ ಟೀಚರ್‌, ಶಬಾನಾ ಟೀಚರ್‌ ಕಲಿಸುತ್ತಾರೆ. ತುಂಬಾ ಪ್ರೀತಿಯಿಂದ ಪಾಠ ಹೇಳುತ್ತಾರೆ. ಎಲ್ಲ ವಿಷಯಗಳಲ್ಲಿ ಮುಂದಿದ್ದೇನೆ. ಪ್ರತಿಭಾ ಕಾರಂಜಿಯಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿರುವೆ. ಮುಂದಿನ ಬಾರಿ ಮೊದಲ ಸ್ಥಾನ ಪಡೆಯುವೆ. ಈ ಟೀಚರ್‌ ಬಗ್ಗೆ ನಮ್ಮ ಮನೆಯಲ್ಲಿ ತುಂಬಾ ಹೆಮ್ಮೆ ಇದೆ. ಒಮ್ಮೆ ನಮ್ಮ ಶಾಲೆಗೆ ಬನ್ನಿ ಸಾರ್‌.. " ಎಂದು ಪತ್ರದಲ್ಲಿ ಡಿಡಿಪಿಐ ಅವರನ್ನು ತನ್ನ ಶಾಲೆಗೆ ಆಹ್ವಾನಿಸಿದ್ದಾಳೆ ಈ ಬಾಲೆ.

50,907 ಮಕ್ಕಳು ಹಿಂದುಳಿಕೆ:

ಧಾರವಾಡ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರಸಂಪನ್ಮೂಲ ಕೇಂದ್ರ ನೀಡಿದ 2024-25ನೇ ಸಾಲಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಓದುತ್ತಿರುವ ಕಲಿಕೆಯಲ್ಲಿ ನಿಧಾನಗತಿಯ (ಸ್ಲೋ ಲರ್ನಿಂಗ್) ಮಕ್ಕಳ ಮಾಹಿತಿ ಆಧರಿಸಿ ಕನ್ನಡಪ್ರಭ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ "ವಿದ್ಯಾಕಾಶಿಯ 5071 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಓದು, ಬರಹ ಬರಲ್ಲ " ಎನ್ನುವ ವರದಿ ತೀವ್ರ ಸಂಚಲನ ಉಂಟುಮಾಡಿತ್ತು.

ಇದರ ಬೆನ್ನಲ್ಲೇ ಡಿಡಿಪಿಐ ಅವರಿಗೆ ಬಂದಿರುವ ಈ ಬಾಲಕಿಯ ಪತ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರಲ್ಲಿ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಬಿಇಒಗಳು ನೀಡಿದ ವರದಿಯಲ್ಲಿ ಜಿಲ್ಲೆಯಲ್ಲಿನ 15050 ಶಾಲೆಗಳಲ್ಲಿ 2ರಿಂದ 10ನೇ ತರಗತಿ ವರೆಗೆ ಓದುತ್ತಿರುವ ಒಟ್ಟು 299882 ವಿದ್ಯಾರ್ಥಿಗಳಲ್ಲಿ ಎಸ್ಸೆಸ್ಸೆಲ್ಸಿಯ ಈ 5071 ವಿದ್ಯಾರ್ಥಿಗಳೂ ಸೇರಿದಂತೆ 50907 ವಿದ್ಯಾರ್ಥಿಗಳಿಗೆ ಸರಿಯಾಗಿ ಓದಲು, ಬರೆಯಲು ಬರುವುದಿಲ್ಲ ಎನ್ನುವ ಅಂಕಿ, ಸಂಖ್ಯೆಗಳಿವೆ.

ಮಿಷನ್‌ ವಿದ್ಯಾಕಾಶಿ:

ಕಳೆದ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಧಾರವಾಡ 22ನೇ ಸ್ಥಾನಕ್ಕೆ ಕುಸಿದಿತ್ತು. ಇದನ್ನು ಹೇಗಾದರೂ ಮಾಡಿ ಮೇಲೆತ್ತುವ ಹಟ ತೊಟ್ಟಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು "ಮಿಷನ್‌ ವಿದ್ಯಾಕಾಶಿ " ಯೋಜನೆ ರೂಪಿಸಿ ಹಿಂದುಳಿದಿರುವ ಮಕ್ಕಳಲ್ಲಿ ಬದಲಾವಣೆ ತರುವ ಕಾರ್ಯ ನಡೆಸಿದ್ದಾರೆ. ಇದಕ್ಕಾಗಿ ವಿಶೇಷ ತಂಡ ರಚಿಸಿದ್ದಾರೆ. ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳೆಲ್ಲ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದಾರೆ.

ಈ ಮಧ್ಯೆ 3ನೇ ತರಗತಿ ಬಾಲಕಿ ಪತ್ರ ಬರೆದು ತನಗೆ ಓದಲು, ಬರೆಯಲು, ಗಣಿತ ಬಿಡಿಸಲು ಬರುತ್ತದೆ ಎಂದು ಎದೆಯುಬ್ಬಿಸಿ ಹೇಳಿರುವುದು ಜಿಲ್ಲಾಧಿಕಾರಿಯೂ ಸೇರಿದಂತೆ ಎಲ್ಲ ಅಧಿಕಾರಿಗಳಲ್ಲಿ ಬಹುದೊಡ್ಡ ಭರವಸೆ ಮೂಡಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ
ಚಳಿ ಹೆಚ್ಚಿದಂತೆ ಏರುತ್ತಿದೆ ಮೊಟ್ಟೆ ದರ