ಪುಕ್ಕಟ್ಟೆ ಸಂಬಳ ತಿಂದು ಮಜಾ ಮಾಡಿದ್ರೆ ಸಹಿಸಲ್ಲ

KannadaprabhaNewsNetwork |  
Published : Oct 10, 2025, 01:02 AM IST
ಕೆರೂರ | Kannada Prabha

ಸಾರಾಂಶ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪಕ್ಷಾತೀತ ಜಾತ್ಯಾತೀತವಾಗಿ ಪಂಚ ಗ್ಯಾರಂಟಿ ಕೊಡುವುದರ ಜೊತೆಗೆ ಸರ್ವಾಂಗೀಣ ಪ್ರಗತಿಗೆ ಪ್ರಯತ್ನಿಸುತ್ತಿದೆ

ಕನ್ನಡಪ್ರಭ ವಾರ್ತೆ ಕೆರೂರ

ನೀವು ಜನರ ಸೇವೆ ಮಾಡಲು ಬಂದಿದ್ದಿರೋ ಏನು ಪುಕ್ಕಟ್ಟೆ ಸಂಬಳ ತಿಂದು ಮಜಾ ಮಾಡಲು ಬಂದಿದ್ದೀರೋ ಇದನ್ನು ನಾನು ಸಹಿಸುವುದಿಲ್ಲ, ನಿಮ್ಮನ್ನು ಅಮಾನತುಗೊಳಿಸಲು ಶಿಫಾರಸು ಮಾಡುತ್ತೇನೆಂದು ಅಧಿಕಾರಿಗಳ ಮೇಲೆ ಶಾಸಕ ಜೆ.ಟಿ.ಪಾಟೀಲ ರೇಗಿದರು.

ಸಮೀಪದ ಜಲಗೇರಿ ಎಲ್.ಟಿ.1ರಲ್ಲಿ ನಡೆದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಬೇಜವಾಬ್ದಾರಿ ತೋರಿದ ಬಾದಾಮಿ ತಹಸೀಲ್ದಾರ್‌ ಕಾವ್ಯಶ್ರೀ, ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಯನ್ನು ಶಾಸಕರು ಸಾರ್ವಜನಿಕ ವೇದಿಕೆ ಮೇಲೆಯೇ ತರಾಟೆಗೆ ತೆಗೆದುಕೊಂಡರು.

ಕೃಷ್ಣಾಪೂರ ಹಾಗೂ ಚಂದಾಪೂರ ಗ್ರಾಮಗಳ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿದ ನಿವೇಶನ ಹಾಗೂ ವಾಸದ ಮನೆಗಳ ಹಕ್ಕು ಪತ್ರವನ್ನು 327 ಜನ ಪಲಾನುಭವಿಗಳಿಗೆ ವಿತರಿಸಬೇಕಿತ್ತು. ಆದರೆ ಅಧಿಕಾರಿಗಳು 222 ಜನ ಪಲಾನುಭವಿಗಳ ಹಕ್ಕುಪತ್ರ ವಿತರಣೆಗೆ ಮಾತ್ರ ತಯಾರಿ ಮಾಡಿದ್ದನ್ನು ಕಂಡು ಶಾಸಕರು ಸಿಟ್ಟಾದರು.

ಸಾರ್ವಜನಿಕರು ತಮ್ಮ ಬಳಿ ಬಂದಾಗ ಅವರನ್ನು ಗೌರವದಿಂದ ಮಾತನಾಡಿಸಬೇಕು. ನಿಮ್ಮ ಮೇಲೆ ಬಹಳಷ್ಟು ಜನ ಆರೋಪಿಸಿದ್ದು ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ತಹಸೀಲ್ದಾರ್‌ ಕಾವ್ಯಶ್ರೀಗೆ ತಾಕೀತು ಮಾಡಿದರು.

ಈ ವೇಳೆ ಗ್ರಾಮ ಆಡಳಿತಾಧಿಕಾರಿ ಸುರೇಶ ಹವಾಲ್ದಾರ್‌, ಕೆಲ ಕುಟುಂಬದವರು ಮರಣ ಹೊಂದಿದ್ದು ವಾರಸಾ ಆಗಬೇಕು. ಹೀಗಾಗಿ ಕೆಲ ಹಕ್ಕುಪತ್ರ ಬಾಕಿ ಉಳಿದಿವೆಯೆಂದು ಸಮಜಾಯಿಷಲು ಬಂದರು. ಮತ್ತೇ ಸಿಟ್ಟಿಗೆದ್ದ ಶಾಸಕರು, ವಾರಸಾ ಮಾಡುವುದು ಯಾರ ಕೆಲಸ? ನೀವೇನು ಸುಮ್ಮನೆ ಪಗಾರ ತೆಗೆದುಕೊಂಡು ಬಂದಿದ್ದಿಯೇನೆಂದರು. ನನ್ನ ಮತಕ್ಷೇತ್ರದ ಪ್ರತಿ ಗ್ರಾಮ ಪೋಡಿ ಮುಕ್ತವಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಪೋಡಿಮುಕ್ತ ಗ್ರಾಮಗಳು ಎಷ್ಟಾಗಿವೆ ಲೆಕ್ಕ ಕೊಡಿ ಎಂದಾಗ ಗ್ರಾಮ ಆಡಳಿತಾಧಿಕಾರಿ ಸುರೇಶ ತಬ್ಬಿಬ್ಬಾಗಿ ತಡವರಿಸಿದರು. ಪೋಡಿಮುಕ್ತ ಗ್ರಾಮವೆಂದರೇನು ಗೊತ್ತಿಲ್ಲದ ನೀನು, ಹೇಗೆ ಕೆಲಸ ಮಾಡುತ್ತೀಯಾ ಸಿಇಒಗೆ ಹೇಳಿ ಕರ್ತವ್ಯ ಲೋಪದ ನೋಟಿಸ್‌ ಜಾರಿ ಮಾಡಿಸುತ್ತೇನೆಂದು ಎಚ್ಚರಿಕೆ ನೀಡಿದರು. ಒಂದು ವಾರದಲ್ಲಿ ಉಳಿದ ಹಕ್ಕುಪತ್ರ ಪೂರ್ಣಗೊಳ್ಳಬೇಕು. ನಾನೇ ಬಂದು ಹಕ್ಕು ಪತ್ರ ಕೊಡುತ್ತೇನೆ. ಫಲಾನುಭವಿಗಳು ಸ್ವತಃ ಬಂದು ಹಕ್ಕು ಪತ್ರ ಪಡೆದುಕೊಳ್ಳಬೇಕು. ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮನ್ನು ಮಾಲೀಕರನ್ನಾಗಿ ಮಾಡುತ್ತಿದೆ ಎಂದರು.

ಲಂಬಾಣಿ ಜನಾಂಗ ಎಲ್ಲಿಯೋ ಇದ್ದು ಏನೋ ಮಾಡಿಕೊಂಡು ಸರ್ಕಾರಿ ಜಮೀನಿನಲ್ಲಿ ಬದುಕುತ್ತಿದ್ದೀರಿ. ಯಾವ ಪಕ್ಷದ ಸರ್ಕಾರ ನಿಮ್ಮನ್ನು ಗುರುತಿಸಿದೇಯೋ ಅದನ್ನು ಮರೆಯುತ್ತಿದ್ದೀರಿ. ಶ್ರೀಮತಿ ಇಂದಿರಾ ಗಾಂಧಿಯವರು ನಿಮ್ಮನ್ನು ಗುರುತಿಸಿದ್ದು ನೆನಪಿನಲ್ಲಿಟ್ಟುಕೊಳ್ಳಬೇಕು. ಇಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪಕ್ಷಾತೀತ ಜಾತ್ಯಾತೀತವಾಗಿ ಪಂಚ ಗ್ಯಾರಂಟಿ ಕೊಡುವುದರ ಜೊತೆಗೆ ಸರ್ವಾಂಗೀಣ ಪ್ರಗತಿಗೆ ಪ್ರಯತ್ನಿಸುತ್ತಿದೆ ಎಂಬುದನ್ನು ಮರೆಯಬಾರದೆಂದರು.

ಈ ವೇಳೆ ನೀರಬೂದಿಹಾಳ ಗ್ರಾಪಂ ಅಧ್ಯಕ್ಷೆ ದ್ಯಾಮವ್ವ ಹೂಲಗೇರಿ, ತಾಪಂ ಮಾಜಿ ಸದಸ್ಯ ಶಂಕರ ರಾಠೋಡ, ಭೂಪಾಲ ಸರದೇಸಾಯಿ, ಗಿರೀಶ ನಾಡಗೌಡ್ರ, ಬಾಗಲಕೋಟೆ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಅನೀಲ ದಡ್ಡಿ, ಪ್ರವೀಣ ಚಿಕ್ಕೂರ, ಮಂಜುನಾಥ ಪಮ್ಮಾರ, ಅಶೋಕ ನಾಯ್ಕ, ಅಧಿಕಾರಿಗಳಾದ ವಿರೇಶ ಬಡಿಗೇರ, ಆನಂದ ಭಾವಿಮಠ, ಚೇತನ ಹೊಸಮನಿ ಹಾಗೂ ಫಲಾನುಭವಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಬದಲು ಕುರಿತು ಹೇಳಿಕೆ : ಯತೀಂದ್ರಗೆ ಸಿಎಂ ಸಿದ್ದು ಕ್ಲಾಸ್‌?
1.24 ಕೋಟಿ ಗೃಹ ಲಕ್ಷ್ಮಿಯರಿಗೆ ₹ 1.54 ಕೋಟಿ : ಲಕ್ಷ್ಮೀ ಹೆಬಾಳ್ಕರ್