ಕನ್ನಡಿಗರ ಭಾವನೆಗೆ ಧಕ್ಕೆ ತರುವ ಮಾತನ್ನು ಒಪ್ಪಲ್ಲ: ಲಾಡ್‌

KannadaprabhaNewsNetwork |  
Published : May 29, 2025, 12:09 AM IST

ಸಾರಾಂಶ

ನಾವು ಕರ್ನಾಟಕದವರು. ನಮ್ಮ ಭಾಷೆ ಬಗ್ಗೆ ನಮಗೆ ಅಭಿಮಾನವಿದೆ. ನಮ್ಮ ಭಾಷೆ, ಅಭಿಮಾನಕ್ಕೆ ಧಕ್ಕೆ ತರುವಂತಹ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ಅವರು ಏನು ಹೇಳಿಕೆ ಕೊಟ್ಟಿದ್ದಾರೋ. ನಾನು ನೋಡಿಲ್ಲ. ಆದರೆ, ಇಂತಹ ಮಾತನ್ನು ನಾನು ಖಂಡಿಸುತ್ತೇನೆ.

ಹುಬ್ಬಳ್ಳಿ: ಕನ್ನಡ ಭಾಷೆಗೆ, ನಮ್ಮ ಭಾವನೆಗೆ ಧಕ್ಕೆ ತರುವ ಮಾತನ್ನು ನಾವು ಎಂದಿಗೂ ಒಪ್ಪುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು. ಈ ಮೂಲಕ ಚಿತ್ರನಟ ಕಮಲ್ ಹಾಸನ್‌ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.

ತಮಿಳು ಭಾಷೆಯಿಂದ ಕನ್ನಡ ಹುಟ್ಟಿದೆ ಎಂದು ಕಮಲ್ ಹಾಸನ್‌ ಹೇಳಿಕೆ ನೀಡಿದ್ದಾರೆ ಎಂಬ ಪ್ರಶ್ನೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅವರವರ ಅಭಿಪ್ರಾಯ ಅವರು ಹೇಳುತ್ತಾರೆ. ನಾವು ಕರ್ನಾಟಕದವರು. ನಮ್ಮ ಭಾಷೆ ಬಗ್ಗೆ ನಮಗೆ ಅಭಿಮಾನವಿದೆ. ನಮ್ಮ ಭಾಷೆ, ಅಭಿಮಾನಕ್ಕೆ ಧಕ್ಕೆ ತರುವಂತಹ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ಅವರು ಏನು ಹೇಳಿಕೆ ಕೊಟ್ಟಿದ್ದಾರೋ. ನಾನು ನೋಡಿಲ್ಲ. ಆದರೆ, ಇಂತಹ ಮಾತನ್ನು ನಾನು ಖಂಡಿಸುತ್ತೇನೆ ಎಂದರು

ಕಾಂಗ್ರೆಸ್‌ಗೆ ಬಂದರೆ ಸ್ವಾಗತ: ಬಿಜೆಪಿಯಿಂದ ಉಚ್ಚಾಟಿತ ಶಾಸಕರಾದ ಎಸ್‌.ಟಿ. ಸೋಮಶೇಖರ ಹಾಗೂ ಶಿವರಾಮ ಹೆಬ್ಬಾರ ಅವರು ಪಕ್ಷಕ್ಕೆ ಬಂದರೆ ಸ್ವಾಗತ. ಈ ನಿಟ್ಟಿನಲ್ಲಿ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದರು.

ಇಬ್ಬರು ಶಾಸಕರ ಜತೆ ಮತ್ತಷ್ಟು ಬಿಜೆಪಿ ಶಾಸಕರು ಬರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಪಕ್ಷದ ಸಿದ್ಧಾಂತ, ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ನೇತೃತ್ವ ಒಪ್ಪಿ ಯಾರಾದರೂ ಬರಬಹುದು. ಎಲ್ಲರಿಗೂ ಸ್ವಾಗತ. ಕಾಂಗ್ರೆಸ್‌ ಒಂದು ರೀತಿ ಡಬಲ್‌ ಡಕ್ಕರ್‌ ಇದ್ದಂಗೆ. ಯಾರು ಬೇಕಾದರೂ ಬರಬಹುದು. ಬರುವವರನ್ನು ತಗೋಬೇಕೋ ಬೇಡವೋ ಎನ್ನುವುದನ್ನು ಪಕ್ಷ ನಿರ್ಧರಿಸುತ್ತದೆ ಎಂದರು.

ಪ್ರಶ್ನೆನೇ ಕೇಳಬಾರದಾ?: ಬಿಜೆಪಿಯವರಿಗೆ ಪ್ರಶ್ನೆಯನ್ನೇ ಕೇಳಬಾರದು. ಏನಾದರೂ ಪ್ರಶ್ನೆ ಕೇಳಿದರೆ ವೈಯಕ್ತಿಕ ದಾಳಿ ಮಾಡುತ್ತಾರೆ ಎಂದು ಲಾಡ್‌ ತಿರುಗೇಟು ನೀಡಿದರು.

ಲಾಡ್‌ ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ಲಾಡ್‌ ತಿರುಗೇಟು ನೀಡಿದರು. ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ ಕೂಡಲೇ ಬಿಜೆಪಿಯವರು ಹೀಗೆ ಮಾತಾಡುತ್ತಾರೆ. ಭಾರತ ಜಿಡಿಪಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಆದರೆ, ತಲಾ ಆದಾಯದಲ್ಲಿ 146ನೆಯ ಸ್ಥಾನದಲ್ಲಿದೆ. ವ್ಯಾಪಂ ಹಗರಣ ಸೇರಿ ಅನೇಕ ಹಗರಣಗಳು ನಡೆದಿವೆ ಆ ಬಗ್ಗೆ ಏಕೆ ಬಿಜೆಪಿಯವರು ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

ನಾನು ಪ್ರಧಾನಿ ಮೋದಿ ಅವರನ್ನು ಬೈದಿಲ್ಲ; ಬೈಯುವುದೂ ಇಲ್ಲ. ಆದರೆ, ಪ್ರಶ್ನೆ ಕೇಳಿದ್ದೇನೆ ಅಷ್ಟೇ. ಪ್ರಶ್ನೆ ಕೇಳುವುದು ತಪ್ಪಾ? ಎಂದು ಪ್ರಶ್ನಿಸಿದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ