ಕನ್ನಡಪ್ರಭ ವಾರ್ತೆ ಮಂಡ್ಯ
ರಾಜಕಾರಣ ಮಾಡುವುದಕ್ಕಾಗಿ ರಾಜಕಾರಣ ಮಾಡುವವರು ನೀವು. ಜನಸೇವೆ ಮಾಡಲು ರಾಜಕಾರಣ ಮಾಡುವವನು ನಾನು. ನಿಮ್ಮಂತೆ ಮಿತ್ರದ್ರೋಹ, ಮೈತ್ರಿಧರ್ಮ ದ್ರೋಹ ನನಗೆ ಗೊತ್ತಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿರುಗೇಟು ನೀಡಿದ್ದಾರೆ.ಕೂಗಾಡುವುದು, ಮುಖಂಡರ ಮೇಲೆ ಎಗರಾಡುವುದನ್ನು ಬಿಟ್ಟರೆ ಜಿಲ್ಲಾ ಉಸ್ತುವಾರಿ ಇವರಿಗೆ ತಿಳಿದೇ ಇಲ್ಲ. ಅವನ್ಯಾರ್ರೀ ಪುಟ್ಟರಾಜು. ಸ್ವಲ್ಪ ಹಿಂದಿರುಗಿ ನೋಡಪ್ಪ ಎಂದಿದ್ದೀರಿ. ನೀವು ಜಿಪಂ ಉಪಾಧ್ಯಕ್ಷರಾದಾಗಿನಿಂದಲೂ ನಿಮ್ಮನ್ನು ಉಪಾಧ್ಯಕ್ಷರನ್ನಾಗಿ ಮಾಡುವಾಗಲೂ ಇದ್ದವನು. ನಾನೂ ಮೂರು ಸಲ ಎಂಎಲ್‌ಎ, ಒಮ್ಮೆ ಎಂಪಿ, ಜಿಲ್ಲಾ ಉಸ್ತುವಾರಿ ಸಚಿವ ಹುದ್ದೆ ಎಲ್ಲವನ್ನೂ ನೋಡಿದ್ದೇನೆ. ನಿಮ್ಮಂತೆ ನಂಬಿಸಿ ಕತ್ತು ಕೊಯ್ಯುವವನಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಸಮಸ್ಯೆ, ಕಾವೇರಿ ಸಮಸ್ಯೆ ಬಂದಾಗ ಧ್ವನಿ ಎತ್ತುವುದು ನಮ್ಮೆಲ್ಲರ ಕರ್ತವ್ಯ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ಈಗಾಗಲೇ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿದ್ದರೂ ರೈತರಿಗೆ ನೀರು ಕೊಡದೆ ರಾಜಕಾರಣ ಮಾಡಿದ್ದೀರಿ. ಈಗ ಮಳೆ ಆರಂಭವಾಗಿದೆ. ತಮಿಳುನಾಡಿಗೆ ನೀರು ಹರಿಸುವ ವಿಚಾರವಾಗಿ ಎಚ್ಚರಿಕೆ ಇರಲಿ. ರೈತರ ಬದುಕಿನ ಬಗ್ಗೆ ಗಮನವಿರಲಿ ಎಂದರೆ ಬಾಯಿಗೆ ಬಂದಂತೆ ಹರಟುತ್ತಿದ್ದೀರಿ ಎಂದು ಟೀಕಿಸಿದ್ದಾರೆ.ದುರಹಂಕಾರದ ಮಾತುಗಳು ಒಳ್ಳೆಯದಲ್ಲ. ಎಗರಾಡುವುದನ್ನು ಬಿಟ್ಟು ಜಿಲ್ಲೆಯ ಜನರಿಗೆ ಒಳ್ಳೆಯ ಕೆಲಸ ಮಾಡಿ. ಕೇಂದ್ರ ಮಂತ್ರಿಗಳ ಜನಸಂಪರ್ಕ ಸಭೆಗೆ ಅಧಿಕಾರಿಗಳು ಹೋಗುವುದು ಬೇಡ ಎಂದು ಠರಾವು ಹೊರಡಿಸಿದ್ದು ಯಾರು? ಕಾವೇರಿ ಸಮಸ್ಯೆ ಬಂದಾಗ ಕುಮಾರಸ್ವಾಮಿ ಅವರು ಬೇಕು. ಜನಸೇವೆಗೆ ಬಂದರೆ ರಾಜಕಾರಣ ಮಾಡುತ್ತೀರಿ. ಒಕ್ಕೂಟದ ವ್ಯವಸ್ಥೆಯಲ್ಲಿ ಕೆಲಸ ಮಾಡುವುದನ್ನು ಕಲಿಯಬೇಕು. ಸಂವಿಧಾನ ಪುಸ್ತಕ ಹಿಡಿದುಕೊಂಡು ಓಡಾಡಿದರೆ ಆಗುವುದಿಲ್ಲ. ಅದನ್ನು ಓದಿ ಒಕ್ಕೂಟ ವ್ಯವಸ್ಥೆ ಏನೆಂಬುದನ್ನು ತಿಳಿದುಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಕುಮಾರಸ್ವಾಮಿ ಅವರು ಮಂತ್ರಿಯಾಗಿ ಕೇವಲ ಒಂದು ತಿಂಗಳಾಗಿದೆ. ಅವರಿಗೂ ಸಮಯಾವಕಾಶ ಕೊಡಿ. ಜಿಲ್ಲೆಯ ರೈತರ ಸಮಸ್ಯೆ, ಜನರ ಸಮಸ್ಯೆ ಏನೂಂತ ಅವರಿಗೂ ಗೊತ್ತಿದೆ. ಅದರಂತೆ ಕೆಲಸ ಮಾಡುತ್ತಾರೆ. ಅವರ ಬಗ್ಗೆ ಹಗುರವಾಗಿ ಮಾತನಾಡುವವರಿಗೆಲ್ಲಾ ಜಿಲ್ಲೆಯ ಜನರೇ ಬುದ್ಧಿ ಕಲಿಸಿದ್ದಾರೆ. ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ಋಣ ತೀರಿಸುವುದು ಗೊತ್ತಿದೆ. ಇನ್ನಾದರೂ ಜಿಲ್ಲೆಯ ಸಮಸ್ಯೆಗಳ ಅರಿತು ಕೆಲಸ ಮಾಡಿ. ಬೇರೆ ನಾಯಕರ ಬಗ್ಗೆ ಮಾತನಾಡುವಾಗ ಗೌರವವಿರಲಿ ಎಂದು ತಿಳಿಸಿದ್ದಾರೆ.