ವಿರೋಧಿಗಳ ಪ್ರಮಾಣ ಪತ್ರ ನನಗೆ ಅಗತ್ಯವಿಲ್ಲ: ಪುರಸಭಾಧ್ಯಕ್ಷ ಎ.ಆರ್.ಅಶೋಕ್

KannadaprabhaNewsNetwork | Published : Jan 30, 2025 12:31 AM

ಸಾರಾಂಶ

ನಮ್ಮ ಸರ್ಕಾರ ಇದೆ, ಅನುದಾನ ತರುತ್ತೇವೆ ಎಂದು ಹೇಳುತ್ತಾ ಕಾಲಹರಣ ಮಾಡದೇ, ಅತ್ಯವಶ್ಯಕವಾದ ಸಣ್ಣ,ಪುಟ್ಟದಾದ ಉತ್ತಮ ಕೆಲಸಗಳನ್ನು ಮಾಡುತ್ತಿದ್ದೇನೆ.

ಕನ್ನಡಪ್ರಭ ವಾರ್ತೆ ಬೇಲೂರುಪ್ರವಾಸಿ ಕೇಂದ್ರ ಪಟ್ಟಣದ ಪುರಸಭೆ ಅಧ್ಯಕ್ಷನಾದ ನಂತರ ಜನಪರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಕಾರ್ಯ ವೈಖರಿ ಬಗ್ಗೆ ವಿರೋಧಿಗಳ ಪ್ರಮಾಣ ಪತ್ರ ಅಗತ್ಯವಿಲ್ಲ ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.ಇಲ್ಲಿನ ಪುರಸಭೆ ಸಂಭಾಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ, ಪುರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ಪೂರ್ಣಗೊಳಿಸಲು ತಮ್ಮ ಅಲ್ಪ ಅವಧಿಯಲ್ಲಿ ಆಗದಿದ್ದರೂ ತಮ್ಮ ಮನಸ್ಸಿಗೆ ಹಾಗೂ ಸಾರ್ವಜನಿಕರ ಸ್ಪಂದನೆಗೆ ಕರ್ತವ್ಯ ನಿರ್ವಹಿಸಿದ ತೃಪ್ತಿ ತಮಗಿದೆ ಎಂದರು. ನಮ್ಮ ಸರ್ಕಾರ ಇದೆ, ಅನುದಾನ ತರುತ್ತೇವೆ ಎಂದು ಹೇಳುತ್ತಾ ಕಾಲಹರಣ ಮಾಡದೇ, ಅತ್ಯವಶ್ಯಕವಾದ ಸಣ್ಣ,ಪುಟ್ಟದಾದ ಉತ್ತಮ ಕೆಲಸಗಳನ್ನು ಮಾಡುತ್ತಿದ್ದೇನೆ. ನಾಗರೀಕರನ್ನು ಖುಷಿಪಡಿಸಲು ಸುಖಾಸುಮ್ಮನೆ 50, 100 ಕೋಟಿ ಬಜೆಟ್ ಮಂಡಿಸಿ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಕೂರಲು ತಮಗೆ ಸಾಧ್ಯವಿಲ್ಲ. ವಿಶ್ವವಿಖ್ಯಾತ ಪ್ರವಾಸಿ ಕೇಂದ್ರ ಪಟ್ಟಣದ ಅಭಿವೃದ್ಧಿಗೆ ತುರ್ತು ಅಗತ್ಯ ಇರುವಂತಹ ಕಾಮಗಾರಿಗಳನ್ನು ಬಜೆಟ್‌ನಲ್ಲಿ ಸೇರಿಸಿ ಮಂಡಿಸಲಾಗುವುದು. ಪಟ್ಟಣದ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಹಿರಿಯ ಪುರಸಭೆ ಸದಸ್ಯರ ನಾಮಫಲಕಗಳನ್ನು ಪ್ರಮುಖ ರಸ್ತೆಗೆ ಅಳವಡಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದರು.ಬಜೆಟ್ ಪೂರ್ವ ಬಾವಿ ಸಭೆಯಲ್ಲಿ ಆಗಮಿಸಿದವರು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಆದರೆ ಈ ಬಾರಿ ಅಗತ್ಯನುಗುಣವಾಗಿ ಮಾತ್ರ ಬಜೆಟ್ ರೂಪಿಸಲಾಗುತ್ತದೆ. ಪಟ್ಟಣಕ್ಕೆ ದಿನದ 24 ಗಂಟೆ ಕುಡಿಯುವ ನೀರಿನ ಸೌಲಭ್ಯ, ಒಳಚರಂಡಿ ಯೋಜನೆ, ಈಜುಕೊಳ, ಕಲಾಮಂದಿರ, ಪುರಸಭಾ ವ್ಯಾಪ್ತಿ ಗುರುತಿಸುವುದು, ತೆರಿಗೆ ವಂಚಿತರಿಸಿದ ವಸೂಲಾತಿ, ಹೈಟೆಕ್ ಶೌಚಾಲಯ ನಿರ್ಮಾಣ, ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಲಭ್ಯ, ಸ್ವಾಗತ ಕಾಮಾನು ನಿರ್ಮಾಣ, ಬಡಾವಣೆಗಳಿಗೆ ನಾಮಫಲಕ ಅಳವಡಿಕೆ, ರಸ್ತೆ ವಿಸ್ತರಣೆ ಹೀಗೆ ನಾನಾ ಯೋಜನೆಗಳ ಬಗ್ಗೆ ಬಜೆಟ್ ರೂಪಿಸಲಾಗುತ್ತದೆ ಎಂದು ಹೇಳಿದರು.

ಸ್ಥಳೀಯ ನಾಗರಿಕ ಡಿ.ಕೆ.ವೆಂಕಟೇಶ್ ಮಾತನಾಡಿ, ಪುರಸಭೆ ವಾಣಿಜ್ಯಗಳನ್ನು ಕಡಿಮೆ ಬಾಡಿಗೆಗೆ ನೀಡುತ್ತಿರುವುದರಿಂದ ಪುರಸಭೆ ಆದಾಯಕ್ಕೆ ಕುತ್ತು ಉಂಟಾಗುತ್ತಿದೆ. ಮಳಿಗೆಗಳನ್ನು ಕಡಿಮೆ ಬಾಡಿಗೆಗೆ ನೀಡಿ, ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿರುವುದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗುತ್ತಿದೆ ಎಂದರು.ಪುರಸಭೆ ಸದಸ್ಯ ಬಿ.ಎ.ಜಮಾಲೂದ್ದೀನ್ ಮಾತನಾಡಿ, ಸರ್ಕಾರ ಪುರಸಭೆ ಯಾವುದೇ ಅನುದಾನ ನೀಡದಿರುವುದರಿಂದ ಪಟ್ಟಣ್ಣದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಪಟ್ಟಣದಲ್ಲಿ ಸಾಕಷ್ಟು ಕೆಲಸಗಳು ಆಗಬೇಕಿರುವುದರಿಂದ ಅಧ್ಯಕ್ಷರು ಇವುಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕು ಎಂದರು.24/7 ತಂಡದ ನೂರ್ ಅಹಮ್ಮದ್ ಮಾತನಾಡಿ, ಅನಾಥ ಶವ ಸಂಸ್ಕಾರದ ವಿಷಯದಲ್ಲಿ ಪುರಸಭೆ ಸಾಕಷ್ಟು ಹಣ ದುರುಪಯೋಗ ಪಡಿಸಿಕೊಂಡಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.ಬಜೆಟ್ ಪೂರ್ವಭಾವಿ ಸಭೆಯಲ್ಲಿ ಹೆಚ್ಚಿನ ಸಾರ್ವಜನಿಕರು ಹಾಜರಿರದ್ದ ಬಗ್ಗೆ ನೆರೆದಿದ್ದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಪುರಸಭೆ ಉಪಾಧ್ಯಕ್ಷೆ ಉಷಾ, ಮುಖ್ಯಾಧಿಕಾರಿ ಸುಜಯ್ ಕುಮಾರ್, ಸದಸ್ಯರಾದ ಜಮೀಲಾ, ಜಗದೀಶ್, ಅಕ್ರಂ, ಪುಟ್ಟಸ್ವಾಮಿ, ಮೀನಾಕ್ಷಿ, ರತ್ನಮ್ಮ, ಸೌಮ್ಯ ಇತರರು ಇದ್ದರು.

Share this article