ಕುಶಾಲನಗರ: ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಸ್ಮರಣೆ

KannadaprabhaNewsNetwork | Published : Jan 30, 2025 12:31 AM

ಸಾರಾಂಶ

ಕುಶಾಲನಗರದ ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ‘ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಸ್ಮರಣೆ’ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಬರೆದ ದಾಂಪತ್ಯ ಗೀತೆಗಳು ಮೈಸೂರು ಮಲ್ಲಿಗೆಯ ಕಂಪು ಬೀರುತ್ತಿದ್ದವು ಎಂದು ಸಾಹಿತಿ ಕಣಿವೆ ಭಾರಧ್ವಜ್ ಆನಂದ ತೀರ್ಥ ಹೇಳಿದ್ದಾರೆ.

ಕುಶಾಲನಗರದ ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಸ್ಮರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆ.ಎಸ್.ನರಸಿಂಹಸ್ವಾಮಿ ಬರೆದಂ ಗೀತೆಗಳು ಇಂದಿಗೂ ಹಾಗೂ ಎಂದೆಂದಿಗೂ ಕೇಳುಗರ ಮನ ತಣಿಸುತ್ತವೆ. ತಮ್ಮ ಪತ್ನಿಯನ್ನು ಕುರಿತು ಬರೆದಂತಹ ಕೆ.ಎಸ್.ನ. ಕವನಗಳಲ್ಲಿ ಸಾರ್ಥಕ ದಾಂಪತ್ಯ ಜೀವನದ ಸೊಗಸು ಅಡಗಿದೆ ಎಂದರು.

ಬದುಕಿನಲ್ಲಿ ಬಡತನವಿದ್ದರೂ ಕೂಡ ಯಾವುದನ್ನೂ ಲೆಕ್ಕಿಸದೇ ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿದ ಮೇರು‌ಕವಿಯಾಗಿ ನಮ್ಮೊಡನೆ ಇದ್ದಾರೆ ಎಂದು ಭಾರಧ್ವಜ್ ಹೇಳಿದರು.

ಪ್ರಧಾನ ನುಡಿಗಳಾಡಿದ ಕುಶಾಲನಗರದ ನಿವೃತ್ತ ಶಿಕ್ಷಕ ಉ.ರಾ.ನಾಗೇಶ್, ಕೆ.ಎಸ್.ನರಸಿಂಹಸ್ಚಾಮಿ ಕನ್ನಡ ಸಾಹಿತ್ಯದ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಕವಿ.

ಬದುಕಿನಲ್ಲಿ ಬಡತನವಿದ್ದರೂ ಕೂಡ ತಮ್ಮತನ ಬಿಡಲಾಗದ ಕೆ.ಎಸ್.ನ. ತಮ್ಮ ಕಲ್ಪನಾ ಲೋಕದಲ್ಲಿ ತಲ್ಲೀನರಾಗಿ ಬರೆದ ಅದೆಷ್ಟೋ ಪದ್ಯಗಳು ಇಂದು ಹೆಸರಾಂತ ಗೀತೆಗಳಾಗಿವೆ.

ಮೈಸೂರು ಮಲ್ಲಿಗೆ ಕವನ ಸಂಕಲನ ಕವಿಗೆ ಅಗಾಧ ಮಟ್ಟದ ಹೆಸರು ತಂದು ಕೊಟ್ಟ ಮೇರು ಸಂಕಲನ. ಕೊನೆಗೆ ಸ್ವಂತ ಮನೆಯೂ ಇಲ್ಲದ ಕೆ.ಎಸ್.ನ ತಮ್ಮ ಪತ್ನಿಯ ಆರೋಗ್ಯಕ್ಕಾಗಿ ತಮ್ಮ ಕವಿತೆಗಳ ಬರವಣಿಗೆಯ ಕಾಫಿಯ ಹಕ್ಕು ಮಾರಾಟ ಮಾಡಿದರು ಎಂದರು.

ಕವಿ ಕೆ.ಎಸ್.ನ. ಜೀವಿತಾವಧಿಯಲ್ಲಿ ಮಂಡ್ಯ ಜಿಲ್ಲಾಡಳಿತದ ಕಾರ್ಯಕ್ರಮಕ್ಕೆ ಅವರ ಮನೆಗೆ ತೆರಳಿದ್ದಾಗ ಕೆ.ಎಸ್.ನ ದಂಪತಿ ನೀಡಿದ ಆತಿಥ್ಯವನ್ನು ನಾಗೇಶ್ ಸ್ಮರಿಸಿದರು.

ಬರಹಗಾರ್ತಿ ರಾಣಿ ವಸಂತ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಸಾಹಿತ್ಯದ ಆಸಕ್ತಿ ಹೊಂದಲು ಕೆ.ಎಸ್.ನರಸಿಂಹಸ್ವಾಮಿ ಕವನ ಸಂಕಲನಗಳನ್ನು ಓದಲು ಕರೆ ಕೊಟ್ಟರಲ್ಲದೇ ಕೆ.ಎಸ್.ನರಸಿಂಹಸ್ವಾಮಿ ಕಾಲಘಟ್ಟದಲ್ಲಿನ ಕವಿಗಳು ಎಷ್ಟೇ ಸಾಹಿತ್ಯ ಕೃಷಿ ಮಾಡಿದರೂ ಕೂಡ ಬಡತನವನ್ನು ಗೆಲ್ಲಲಾಗಲಿಲ್ಲ. ಇಂದಿನ ಆಧುನಿಕ ಕಾಲಘಟ್ಟದ ಲ್ಲಿ ಬಡತನವನ್ನೇ ಕಾಣದ ಸಾಹಿತಿಗಳಿದ್ದಾರೆ ಎಂದರು.

ಕುವೆಂಪು ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಕುಶಾಲನಗರದ ಕನ್ನಡ ಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ಪಂದನಾ ಕೆ.ಎಸ್.ನ. ಕುರಿತು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಅಧ್ಯಕ್ಷ ಮಣಜೂರು ಮೂರ್ತಿ, ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್ ಮಾತನಾಡಿದರು.

ಸಾಹಿತ್ಯಾಸಕ್ತರ ವೇದಿಕೆ ಸಂಚಾಲಕ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು.

ವೇದಿಕೆ ವತಿಯಿಂದ ನಿವೃತ್ತ ಶಿಕ್ಷಕ ಉ.ರಾ.ನಾಗೇಶ್ ಅವರನ್ನು ಗೌರವಿಸಲಾಯಿತು.

Share this article