ಬಿಜೆಪಿ ನನ್ನನ್ನು ಸರಿಯಾಗಿ ಬಳಸಿಕೊಳ್ಳದ ನೋವಿದೆ : ವಿಜಯಪುರ ಸಂಸದ ರಮೇಶ ಜಿಗಜಿಣಗಿ

KannadaprabhaNewsNetwork | Updated : Mar 07 2025, 12:29 PM IST

ಸಾರಾಂಶ

ಪಕ್ಷದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಟ್ಟರೆ ಸೆಕೆಂಡ್ ಹಿರಿಯ ರಾಜಕಾರಣಿ ನಾನೇ ಆಗಿದ್ದೇನೆ. ಆದರೆ ಪಕ್ಷವೇ ನನ್ನನ್ನು ಬಳಸಿಕೊಂಡಿಲ್ಲ.

 ವಿಜಯಪುರ : ರಾಜಕಾರಣದಲ್ಲಿ ನಾನು ಹಿರಿಯನಾಗಿದ್ದರೂ ಬಿಜೆಪಿ ನನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂಬ ನೋವು ನನಗೆ ಇದೆ. ನಾಯಕರು ನನ್ನನ್ನು ಕರೆದು ಕೇಳಿದಾಗ ನನ್ನ ಅಭಿಪ್ರಾಯವನ್ನು ಅವರಿಗೆ ಸರಿಯಾಗಿಯೇ ಹೇಳುತ್ತೇನೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮಾರ್ಮಿಕವಾಗಿ ನುಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯ ರಾಜಕೀಯದಲ್ಲಿ ಪಕ್ಷದಲ್ಲಿನ ಕಚ್ಚಾಟದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಟ್ಟರೆ ಸೆಕೆಂಡ್ ಹಿರಿಯ ರಾಜಕಾರಣಿ ನಾನೇ ಆಗಿದ್ದೇನೆ. ಆದರೆ ಪಕ್ಷವೇ ನನ್ನನ್ನು ಬಳಸಿಕೊಂಡಿಲ್ಲ. ನಾವು ಸಂಘ ಪರಿವಾರದಿಂದ ಬಂದಿಲ್ಲ, ರಾಮಕೃಷ್ಣ ಹೆಗಡೆ ಅವರ ಜೊತೆ ಬಂದವರು. ಹಾಗಾಗಿ ನಾಯಕರಿಗೆ ಇವರು ಮಧ್ಯದಲ್ಲಿ ಬಂದಿದ್ದಾರೆ ಎಂಬ ಭಾವನೆ ಇರಬಹುದು ಎಂದು ಬೇಸರಿಸಿದರು.

ಅಧಿಕಾರಕ್ಕಾಗಿ ಯಾರ ಮನೆ ಮುಂದೆ ನಿಂತಿಲ್ಲ:

ನನಗೇನು ಆ ಹುದ್ದೆ, ಈ ಹುದ್ದೆ ಬೇಕಂತೇನಿಲ್ಲ. ನಾನೇನು ಕೇಳದಿದ್ದರೂ ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಕಳೆದ 45-50 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದೇನೆ. ಕೊಟ್ಟರೆ ಜೈ ಅನ್ನೋದು ಇಲ್ಲದಿದ್ದರೆ ಇಲ್ಲ. ಬೇಕೇಬೇಕು ಎಂಬ ಭಾವನೆ ನನಗೆ ಇಲ್ಲ. ಅಧಿಕಾರ, ಸ್ಥಾನಮಾನಕ್ಕಾಗಿ ನಾನು ಯಾರ ಮನೆ ಮುಂದೆಯೂ ಹೋಗಿ ನಿಂತಿಲ್ಲ. ನಿಲ್ಲೋದು ಇಲ್ಲ. ಸಲಾಂ ಹೊಡೆಯೋದು ಮಾಡಿಲ್ಲ. ಸ್ಥಾನಮಾನಗಳನ್ನು ನನಗೆ ಕೊಟ್ಟರು ಅಷ್ಟೆ ಬಿಟ್ಟರೂ ಅಷ್ಟೆ ಎಂದು ಖಡಕ್ಕಾಗಿಯೇ ಉತ್ತರಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ:

ನಾನು ಸಂಸದನಾದಾಗಿನಿಂದ ವಿಜಯಪುರ ಜಿಲ್ಲೆಗೆ ಎಲ್ಲ ರೀತಿಯ ಅಭಿವೃದ್ಧಿ ದೃಷ್ಟಿಯಿಂದ ಶ್ರಮಿಸಿದ್ದೇನೆ. ಅದರ ಫಲವಾಗಿ ಕೇಂದ್ರ ಸರ್ಕಾರದ ನಬಾರ್ಡ್ ಯೋಜನೆಯಿಂದ 2024-25ರಲ್ಲಿ ₹1433 ಕೋಟಿ ಅನುದಾನ ಬಂದಿದೆ. ನಾನು ಹಾಗೂ ನಬಾರ್ಡ್ ಅಧಿಕಾರಿಗಳು ಕಾಳಜಿ, ಶ್ರಮ ವಹಿಸಿದ್ದರಿಂದ ಕೇಂದ್ರ ಇಷ್ಟೊಂದು ಹಣವನ್ನು ಜಿಲ್ಲೆಯ ಅಭಿವೃದ್ಧಿಗೆ ಮಂಜೂರು ಮಾಡಿದೆ. ಈ ಹಣದಲ್ಲಿ ಸಣ್ಣ ನೀರಾವರಿ ಇಲಾಖೆಗೆ, ಜಲಧಾರೆ ಯೋಜನೆಗಳಿಗೆ, ಲೋಕೋಪಯೋಗಿ ರಸ್ತೆಗಳಿಗೆ, ಶಿಕ್ಷಣ ಕ್ಷೇತ್ರಕ್ಕೆ ಅನುದಾನ, ಮೀನುಗಾರಿಕೆಗೆ, ಪಶುಸಂಗೋಪನೆಗೆ, ಆರೋಗ್ಯ ಇಲಾಖೆಗೆ, ಕೋಲ್ಡ್ ಸ್ಟೋರೇಜ್ ಗಳಿಗಾಗಿ ಸೇರಿದಂತೆ ಹಲವಾರು ಇಲಾಖೆಗಳಿಗೆ ಅನುದಾನ ಬಂದಿದೆ. ಇದರಲ್ಲಿ ಕೆಲವು ಕೆಲಸಗಳು ಪ್ರಗತಿಯಲ್ಲಿದ್ದು, ಇನ್ನು ಕೆಲವು ಆರಂಭವಾಗಲಿವೆ ಎಂದರು. ಉದಾಹರಣೆಗಾಗಿ ರೈತರ ಅನುಕೂಲಕ್ಕಾಗಿ ತಿಕೋಟಾ ತಾಲೂಕಿನಲ್ಲಿ ₹4 ಕೋಟಿಯಲ್ಲಿ ಶೀತಲಗೃಹ, ಅರಕೇರಿಯಲ್ಲಿ ₹10 ಕೋಟಿಯಲ್ಲಿ ಕೋಲ್ಡ್ ಸ್ಟೋರೆಜ್, ವಿಜಯಪುರ ಹಾಗೂ ಬಸವನ ಬಾಗೇವಾಡಿಯಲ್ಲಿ ಉಗ್ರಾಣಗಳು ನಿರ್ಮಾಣ ಆಗಲಿವೆ ಎಂದು ಸಂಸದರು ತಿಳಿಸಿದರು.

ಜೆಜೆಎಂನಲ್ಲಿ ಅವ್ಯವಹಾರ:

ಜಲಜೀವನ ಮಿಷನ್ ಯೋಜನೆಯಲ್ಲಿ ಬಹಳಷ್ಟು ಕೆಲಸಗಳಲ್ಲಿ ಅವ್ಯವಹಾರ ಆಗಿದೆ ಎಂದು ಜನರು ನನಗೆ ಹೇಳುತ್ತಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಕೆಲಸವೇ ಆಗಿಲ್ಲ. ಗುತ್ತಿಗೆದಾರರು ಗುತ್ತಿಗೆ ಪಡೆದು ಸಬ್ ಕಾಂಟ್ರ್ಯಾಕ್ಟ್ ಕೊಡುವುದರಿಂದ ಹೀಗೆ ಆಗುತ್ತದೆ. ಕಳಪೆ ಕಾಮಗಾರಿ ಮಾಡಿದವರಿಗೆ ಬ್ಲಾಕ್ ಲಿಸ್ಟ್ ಹಾಕಲಾಗುತ್ತದೆ ಎಂದು ತಿಳಿಸಿದರು.

ಶಾಸಕರು ಕೆಲಸ ಮಾಡಲಿ:

ಶಾಸಕರು ಅವರವರ ಕ್ಷೇತ್ರದಲ್ಲಿ ಜೆಜೆಎಂ ಕುರಿತು ಪ್ರಗತಿ ಪರಿಶೀಲನೆ ಮಾಡುವುದು ಸೇರಿದಂತೆ ಫಾಲೋಅಪ್ ಮಾಡಬೇಕು. ಅವರು ಸರಿಯಾಗಿ ಮಾಡದ ಕಾರಣ ಹೀಗೆ ಯೋಜನೆ ಹಳ್ಳ ಹಿಡಿಯುತ್ತಿದೆ. ಬೇರೆಯವರ ಕ್ಷೇತ್ರಗಳಲ್ಲಿ ನಾನು ಏನಾದರೂ ಮಾಡಲು ಹೋದರೆ ನಮ್ಮ ಕ್ಷೇತ್ರದಲ್ಲಿ ಬಂದು ಕಾರುಬಾರು ಮಾಡ್ತಿದ್ದಾರೆ ಎನ್ನುತ್ತಾರೆ, ಹಾಗಾಗಿ ನಾನು ಸುಮ್ಮನಾಗಿದ್ದೇನೆ ಎಂದು ಸಂಸದ ಜಿಗಜಿಣಗಿ ಹೇಳಿದರು.

Share this article