ಕನ್ನಡಪ್ರಭ ವಾರ್ತೆ ಹಲಗೂರು
ಗ್ರಾಮೀಣ ಪ್ರದೇಶದಲ್ಲಿ ಕಷ್ಟಪಟ್ಟು ವ್ಯಾಸಂಗ ಮಾಡಿಕೊಂಡು ಸಮಾಜ ಸೇವೆಯ ಗುರಿಯೊಂದಿಗೆ ಯುಪಿಎಸ್ಸಿ ಕೋಚಿಂಗ್ ಸೆಂಟರ್‌ನಲ್ಲಿ ಉನ್ನತ ಶಿಕ್ಷಣ ಪಡೆದು ಐಐಎಸ್ ಅಧಿಕಾರಿಯಾಗಿ ಸಾರ್ವಜನಿಕರ ಸೇವೆ ಮಾಡುವ ಕನಸು ಹೊಂದಿದ್ದೇನೆ ಎಂದು ಗೊಲ್ಲರಹಳ್ಳಿಯ ಜಿ.ಡಿ.ಅಮೃತ ಆಶಯ ವ್ಯಕ್ತಪಡಿಸಿದರು.ಹಲಗೂರಿನ ಜನ ಸೇವಾ ಆಶ್ರಯಟ್ರಸ್ಟ್ ವತಿಯಿಂದ ಗೊಲ್ಲರಹಳ್ಳಿಯ ಭಾಗ್ಯಮ್ಮ- ದೇವರಾಜು ದಂಪತಿ ಪುತ್ರಿ ಜಿ.ಡಿ.ಅಮೃತ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಬಿಎಸ್ಸಿ ಕೃಷಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಪಾಲರಿಂದ ಚಿನ್ನದ ಪದಕ ಪಡೆದ ಹಿನ್ನೆಲೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಇಲ್ಲಿನ ಜನರ ಕಷ್ಟ ಸುಖಗಳನ್ನು ನೋಡಿ ತಿಳಿದಿದ್ದೇನೆ. ಈಗ ಹೆಚ್ಚಿನ ವ್ಯಾಸಂಗಕ್ಕಾಗಿ ಕೋಚಿಂಗ್ ಪಡೆಯುತ್ತಿದ್ದು, ಐಎಎಸ್ ಆಫೀಸರ್ ಆಗಿ ಸದಾಕಾಲ ಸಾರ್ವಜನಿಕರ ಸೇವೆ ಮಾಡುವ ಕನಸನ್ನು ಕಾಣುತ್ತಿದ್ದೇನೆ. ಅದಕ್ಕೆ ನಮ್ಮ ಕುಟುಂಬ ಪೂರ್ಣ ಸಹಕಾರ ನೀಡುತ್ತಿದೆ ಎಂದರು.ಟ್ರಸ್ಟ್ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಜಿ.ಡಿ.ಅಮೃತ ಚಾಮರಾಜನಗರ ಜಿಲ್ಲೆಯ ವಿವಿಯ ಬಿಎಸ್ಸಿ ಕೃಷಿ ವಿಭಾಗದಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಸ್ಥಾನ ಪಡೆದು ರಾಜ್ಯಪಾಲರಿಂದ ಚಿನ್ನದ ಪದಕ ಪಡೆದ ಹಿನ್ನೆಲೆಯಲ್ಲಿ ಟ್ರಸ್ಟ್ ವತಿಯಿಂದ ಅಭಿನಂದಿಸಲಾಗುತ್ತಿದೆ ಎಂದು ತಿಳಿಸಿದರು.
ಚಿನ್ನದ ಪದಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳು ಗ್ರಾಮಕ್ಕೆ, ತಂದೆ-ತಾಯಿಗಳಿಗೆ ಹೆಸರು ತರುವ ನಿಟ್ಟಿನಲ್ಲಿ ಇನ್ನಷ್ಟು ವ್ಯಾಸಂಗ ಮಾಡಿ ಸಾಧನೆ ಮಾಡಿ ರಾಜ್ಯಕ್ಕೆ ಹೆಸರು ತರುವಂತಾಗಲಿ ಎಂದು ಆಶಿಸುತ್ತೇನೆ ಎಂದರು.ಇದೇ ವೇಳೆ ಗ್ರಾಮೀಣ ಪ್ರತಿಭೆ ಜಿ.ಡಿ.ಅಮೃತ ಅವರಿಗೆ ಮೈಸೂರು ಪೇಟೆ ತೊಡಿಸಿ ಸನ್ಮಾನಿಸಿ ಫಲ ತಾಂಬೂಲ ನೀಡಿ ಅಭಿನಂದಿಸಲಾಯಿತು. ಈ ವೇಳೆ ಗೌರಮ್ಮ, ಶಿವಲಿಂಗೇಗೌಡ , ಭಾಗ್ಯಮ್ಮ, ದೇವರಾಜು, ಟ್ರಸ್ರ್ ಕಾರ್ಯದರ್ಶಿ ಸತೀಶ್, ಖಜಾಂಜಿ ಜಿ.ಕೆ.ನಾಗೇಶ್ ಮುಖಂಡರಾದ ಕಾಂತರಾಜು, ಜಗದೀಶ ಸೇರಿದಂತೆ ಇತರರು ಇದ್ದರು.