ಹೊನ್ನಾಳಿ : ಅಲೆಮಾರಿ ಅಭಿವೃದ್ಧಿ ನಿಗಮದ ಮೂಲಕ ರಾಜ್ಯದ 31 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ಟೆಂಟ್‌ಮುಕ್ತ ಕರ್ನಾಟಕ ನಿರ್ಮಿಸುವ ಸಂಕಲ್ಪ ಮಾಡಲಾಗಿದೆ ಎಂದು ಕರ್ನಾಟಕ ಎಸ್‌ಸಿ- ಎಸ್‌ಟಿ ಅಲೆಮಾರಿಗಳ ಅಭಿವೃದ್ಧಿ ನಿಗಮ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳಲ್ಲಿ 51 ಪರಿಶಿಷ್ಟ ಜಾತಿ ಸಮುದಾಯಗಳು, 23 ಪರಿಶಿಷ್ಟ ಪಂಗಡದಲ್ಲಿ ಸಮುದಾಯಗಳಿವೆ. ಇದೇ ರೀತಿ ಅರಣ್ಯ ಆದಿವಾಸಿ ಸಮುದಾಯಗಳು 48 ಸೇರಿ ಒಟ್ಟು 122 ವಿವಿಧ ರೀತಿಯ ಜನಸಮುದಾಯಳಿವೆ. ಈ ಎಲ್ಲ ಸಮುದಾಯಗಳು ಅಲೆಮಾರಿಗಳಾಗಿದ್ದಾರೆ. ಅವರಿಗೆ ಸ್ವಂತ ನೆಲೆ ಇಲ್ಲದೇ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ ಎಂದರು.
ಈಗಾಗಲೇ ಮೈಸೂರು, ಚಿಕ್ಕಮಗಳೂರು, ಹಾಸನ, ದಾವಣಗೆರೆ, ಚಿತ್ರದುರ್ಗ, ರಾಯಚೂರು, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೆನೆ. ಅಲ್ಲಿ ಅಲೆಮಾರಿಗಳು ತಂಗಿರುವ ಟೆಂಟ್‌ಗಳಿಗೆ ಭೇಟಿ ಮಾಡಿ, ಸಮಸ್ಯೆಗಳ ಕುರಿತು ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ, ಅಲೇಮಾರಿಗಳ ನೈಜ ಸಮಸ್ಯೆಗಳನ್ನು ಅರಿತು, ಡ್ಯಾಕ್ಯುಮೆಂಟರಿ ಮಾಡಿ, ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಆ ಮೂಲಕ ಆದಿವಾಸಿ ಜನ ಸಮುದಾಯಗಳಿಗೆ ಶಾಶ್ವತ ನೆಲೆ ಕಲ್ಪಿಸಿ, ಕರ್ನಾಟಕವನ್ನು ಟೆಂಟ್‌ಮುಕ್ತ ರಾಜ್ಯವಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.ದೇಶದ ಇತಿಹಾಸದಲ್ಲಿ 1871ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರದ ಕಾಲದಲ್ಲಿ ಈ ಎಲ್ಲ ಸಮುದಾಯದವರನ್ನು ಕ್ರಿಮಿನಲ್ ಹಿನ್ನಲೆವುಳ್ಳ ಸಮುದಾಯಗಳೆಂದು ಪರಿಗಣಿಸಿ, ಬಯಲು ಬಂದೀಖಾನೆಗಳಲ್ಲಿ ಇಡುತ್ತಿದ್ದರು. ಅಂದಿನಿಂದ ಹಿಂದಿನವರೆಗೆ ಸಾಮಾಜಿಕ ಜೀವನದಲ್ಲಿ ಯಾವುದೇ ನೆಲೆಯಿಲ್ಲದೇ ಅಲೆಮಾರಿಗಳಾಗಿ ಊರೂರು ತಿರುಗಾಡುತ್ತ, ಟೆಂಟ್‌ಗಳಲ್ಲಿ ಬದುಕುವುದೇ ಇವರ ಜೀವನಶೈಲಿಯಾಗಿದೆ ಎಂದರು.