ಪುತ್ತೂರು: ಆರ್ಯಾಪು ಗ್ರಾಮದ ಕೊಲ್ಯ ಕಾಲೊನಿಗೆ ಕಳೆದ ಚುನಾವಣೆಯಲ್ಲಿ ಮತ ಕೇಳಲು ಬಂದಾಗ ಇಲ್ಲಿನ ನಿವಾಸಿಗಳು ತಡೆಗೋಡೆಯ ಬೇಡಿಕೆಯನ್ನು ಮುಂದಿಟ್ಟಿದ್ದರು. ತಡೆಗೋಡೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿರಲಿಲ್ಲ. ಇಲ್ಲಿಗೆ ತಡೆಗೋಡೆ ಅಗತ್ಯವಿದೆ ಎಂದು ಹೇಳಿದ್ದೆ. ಆದರೆ ಶಾಸಕನಾದ ಬಳಿಕ ಈ ಭಾಗದ ಜನರ ಬೇಡಿಕೆಯನ್ನು ಮರೆಯಲಿಲ್ಲ. ಇಲ್ಲಿ ತಡೆಗೋಡೆ ನಿರ್ಮಾಣಕ್ಕೆ ೨ ಕೋಟಿ ರು. ಅನುದಾನ ಮಂಜೂರು ಮಾಡುವ ಮೂಲಕ ಜನರ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಕೊಲ್ಯ ಕಾಲೊನಿಯಲ್ಲಿ ತಡೆಗೋಡೆ ಕಾಮಗಾರಿಗೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.ಪ್ರತಿ ಮಳೆಗಾಲದಲ್ಲಿ ಇಲ್ಲಿನ ಮನೆಯವರು ಭಯದಲ್ಲೇ ದಿನ ದೂಡುತ್ತಿದ್ದರು. ಧರೆ ಯಾವಾಗ ಕುಸಿಯುತ್ತದೆ ಎಂಬ ಭಯ ಪ್ರತಿ ಮನೆಯವರಲ್ಲಿತ್ತು. ಸಣ್ಣ ಮನೆಯನ್ನು ಕಟ್ಟಿಕೊಂಡು, ಮಕ್ಕಳೊಂದಿಗೆ ವಾಸ ಮಾಡುತ್ತಿರುವ ಬಡ ಕುಟುಂಬಗಳಿಗೆ ಇಂದು ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದೇನೆ. ಮುಂದಿನ ಮಳೆಗಾಲಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದೇನೆ ಎಂದರು. ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ದ.ಕ. ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದಾಲಿ, ಆರ್ಯಾಪು ಗ್ರಾಪಂ ಸದಸ್ಯೆ ಪೂರ್ಣಿಮಾ ಮಾತನಾಡಿದರು.
ಗ್ರಾಪಂ ಸದಸ್ಯ ಪವಿತ್ರಾ ರೈ, ಪಕ್ಷದ ಮುಖಂಡರಾದ ಸಲಾಂ ಸಂಪ್ಯ, ಹಾರಿಸ್ ಸಂಟ್ಯಾರ್, ಕೇಶವ ಸುವರ್ಣ, ಅಣ್ಣಿ ಕಲ್ಲರ್ಪೆ, ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.
ಯೋಗೀಶ್ ಸಾಮಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ ಸಂಟ್ಯಾರ್ ಸ್ವಾಗತಿಸಿದರು. ಗ್ರಾಪಂ ಸದಸ್ಯ ನೇಮಾಕ್ಷ ಸುವರ್ಣ ಮಗಿರೆ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.