ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಪ್ರೌಢಶಾಲಾ ಶಿಕ್ಷಕರಿಗೆ ಕೊಟ್ಟ ಮಾತಿನಂತೆ ಸಂಸದರ ವೇತನದ ೧೯,೯೮,೨೦೦ ರು.ಗಳ ಚೆಕ್‌ಅನ್ನು ನೀಡುವುದರ ಮೂಲಕ ನನ್ನ ಮಾತನ್ನು ಉಳಿಸಿಕೊಂಡಿದ್ದೇನೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ಶನಿವಾರ ಮೈಷುಗರ್ ಪ್ರೌಢಶಾಲೆಗೆ ಭೇಟಿ ನೀಡಿದ ವೇಳೆ ಹದಿನೈದು ತಿಂಗಳಿನಿಂದ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಶಿಕ್ಷಕರಿಗೆ ಸಂಸದರ ವೇತನದ ೧೯,೯೮,೨೦೦ ರು. ಚೆಕ್ ವಿತರಿಸಿ ಮಾತನಾಡಿದರು.
ವೇತನವಿಲ್ಲದೆ ಕೆಲಸ ಮಾಡುವುದು ತುಂಬಾ ಕಷ್ಟ. ನಿಮ್ಮ ನೋವು ನನಗೆ ಅರ್ಥವಾಗಿದೆ. ಹೀಗಾಗಿ ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇನೆ. ಇದು ಐತಿಹಾಸಿಕ ಶಾಲೆ. ಮಂಡ್ಯದ ಇತಿಹಾಸದಲ್ಲಿ ಈ ಶಾಲೆಗೂ ಒಂದು ಸ್ಥಾನವಿದೆ. ಹೀಗಾಗಿ ಶಾಲೆ ಸಂಕಷ್ಟಕ್ಕೆ ಸಿಲುಕುವುದು ನನಗೆ ಇಷ್ಟವಿಲ್ಲ. ಈ ಶಾಲೆಯನ್ನು ಉಳಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡುತ್ತೇನೆ. ಪಿಯುಸಿವರೆಗೆ ಈ ಶಾಲೆಯಲ್ಲಿ ಶಿಕ್ಷಣ ದೊರೆಯಲಿ. ನಾನು ಕೂಡ ಶಾಲೆಯ ಉಳಿವಿಗೆ ಕೈ ಜೋಡಿಸುತ್ತೇನೆ ಎಂದು ಭರವಸೆ ನೀಡಿದರು.ಆದಿಚುಂಚನಗಿರಿ ಶ್ರೀಗಳೊಂದಿಗೂ ಈ ಬಗ್ಗೆ ಮಾತಾಡಿದ್ದೇನೆ. ಒಂದೇ ರಾತ್ರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ನಾನು ಹೇಳುವುದಿಲ್ಲ. ಹಂತ ಹಂತವಾಗಿ ಶಾಲೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ. ಈ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕಿದೆ. ಮೈಷುಗರ್ ಪ್ರೌಢಶಾಲೆ ನಂಬರ್ ಓನ್ ಶಾಲೆ ಆಗಿರಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಅವರು ಹೇಳಿದರು.
ಶಿಕ್ಷಕರ ಕಷ್ಟ ತಿಳಿದು ನಾನು ಬಹಳ ನೊಂದಿದ್ದೆ. ೧೫ ತಿಂಗಳಿಂದ ಸಂಬಳ ಇಲ್ಲದೇ ಕೆಲಸ ಮಾಡುವುದು ಎಂದರೆ ಸುಲಭವಲ್ಲ. ಆ ಸಂಕಷ್ಟದ ಕಾಲದಲ್ಲಿಯೂ ಅವರು ಮಕ್ಕಳಿಗೆ ವಿದ್ಯೆ ಕಲಿಸಿದ್ದಾರೆ. ಹೀಗಾಗಿ ಎಲ್ಲಾ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಾಲೆ ಅಭಿವೃದ್ಧಿ ಎಲ್ಲರ ಕರ್ತವ್ಯ. ನನ್ನ ಕೈಲಾದದ್ದನ್ನು ನಾನು ಮಾಡುತ್ತೇನೆ. ಮಕ್ಕಳ ಅನುಕೂಲಕ್ಕೆ ಎರಡು ಶಾಲಾ ಬಸ್ ಬೇಕು ಎಂದು ಮನವಿ ಮಾಡಿದ್ದಾರೆ. ಮೈಷುಗರ್ ಶಾಲೆಯಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡಲು ಹೇಳಿದ್ದೇನೆ. ಈ ಬಗ್ಗೆ ಚುಂಚನಗಿರಿ ಶ್ರೀಗಳ ಬಳಿ ಮನವಿ ಮಾಡಿದ್ದೇನೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಸತ್ ಕಲಾಪ ಮುಗಿದ ಬಳಿಕ ಶ್ರೀಗಳ ಮಾರ್ಗದರ್ಶನದಲ್ಲಿ ಚರ್ಚೆ ಮಾಡುತ್ತೇವೆ. ಕಾಂಗ್ರೆಸ್ ನಾಯಕರಿಗೂ ಈ ಬಗ್ಗೆ ಹೇಳುತ್ತೇನೆ. ಶಾಲೆ ವಿಷಯದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಮೈಷುಗರ್ ಪ್ರೌಢಶಾಲೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕಿವಿಮಾತು ಹೇಳಿದರು.