ಬ್ಯಾಡಗಿ: ಮಹಿಳೆಯಲ್ಲಿರುವ ಪುನಶ್ಚೇತನ ಶಕ್ತಿ ಸಮಾಜಕ್ಕೆ ಸದ್ಬಳಕೆಯಾಗುತ್ತಿಲ್ಲ, ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ ಎಂಬುದು ಕೇವಲ ಯೋಜನೆಗಳನ್ನು ರೂಪಿಸುವುದರಿಂದ ಸಾಧ್ಯವಿಲ್ಲ, ಪುರುಷ ಪ್ರಧಾನ ಕುಟುಂಬಗಳ ಮನಸ್ಥಿತಿ ಬದಲಾದಲ್ಲಿ ಮಾತ್ರ ಸಾಕಾರಗೊಳ್ಳಲಿದೆ ಎಂದು ಪಿಎಸ್‌ಐ ಭಾರತಿ ಕುರಿ ಅಭಿಪ್ರಾಯಪಟ್ಟರು.
ತಾಲೂಕಿನ ಕದರಮಂಡಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಕ್ಕಳ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಆಧುನಿಕ ಯುಗದಲ್ಲಿಯೂ ಸಹ ಮಹಿಳೆ ಮೇಲೆ ಕುಟುಂಬದ ಒಳಗೂ ಹೊರಗೂ ನಿರಂತರ ದೌರ್ಜನ್ಯ ನಡೆಯುತ್ತಿವೆ, ಆಧುನಿಕ ಹಾಗೂ ತಂತ್ರಜ್ಞಾನ ಯುಗದಲ್ಲಿಯೂ ಸಹ ಮಹಿಳಾ ಸಮಾನತೆ ಕೇವಲ ಪುಸ್ತಕ ಹಾಗೂ ಮಾತಿನಲ್ಲೇ ಉಳಿಯುತ್ತಿದೆ. ಅವಳಿಗೆ ಸಮಾನತೆ ನೀಡುವ ನಿಟ್ಟಿನಲ್ಲಿ ಪುರುಷ ಪ್ರಧಾನ ಸಮಾಜ ಮುಂದಾಗದಿರುವುದು ಖೇದದ ಸಂಗತಿ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಮಾತನಾಡಿ, ಸತಿ ಸಹಗಮನ ಪದ್ಧತಿಯಿಂದ ಹಿಡಿದು ಇಂದಿನ ಡಿಜಿಟಲ್ ವಂಚನೆಯಲ್ಲಿಯೂ ಸಹ ಮಹಿಳೆಯನ್ನೇ ಗುರಿಯಾಗಿಸಲಾಗುತ್ತಿದೆ, ಯಾವ ಕಾಲಘಟ್ಟದಲ್ಲಿಯೂ ಮಹಿಳೆ ಸುರಕ್ಷಿತವಾಗಿಲ್ಲ ಎಂಬುದಕ್ಕೆ ಸಾವಿರಾರು ವರ್ಷಗಳಿಂದ ಸಾಕಷ್ಟು ಉದಾಹರಣೆಗಳು ಸಿಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಶಾಂತಕುಮಾರ ಪಮ್ಮಾರ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹಾಂತೇಶ ಕಂಬಳಿ, ಮುಖ್ಯ ಶಿಕ್ಷಕ ಎ.ಜೆ.ಛತ್ರದ, ಎಸ್‌ಡಿಎಂಸಿ ಅಧ್ಯಕ್ಷ ಗದಿಗಯ್ಯ ಹಿರೇಮಠ, ಸರ್ವ ಸದಸ್ಯರು, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕನ್ನಪ್ಪ ಛತ್ರದ, ಕಾರ್ಯದರ್ಶಿ ಮಾಲತೇಶ ಬಡಿಗೇರ, ಡಿ.ಬಿ. ಕುಸಗೂರ, ಆರಾಧ್ಯಮಠ ಸರ್, ಡಿ.ಎನ್. ದಾಳೇರ, ಕವಿತಾ ಬನ್ನಿಹಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.