‘ನಾನು ಒಕ್ಕಲಿಗ ನಾಯಕ ಎಂದು ಎಲ್ಲೂ ಹೇಳಿಲ್ಲ. ನನಗೆ ನನ್ನ ತಮ್ಮನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ ಎಂಬುದು ಸತ್ಯ. ಆದರೆ ನನ್ನ ತಮ್ಮನ ಸೋಲಿಗೆ ಕಾರಣವಾದ ಕೊಂಡಿಗಳು ಒಂದೊಂದಾಗಿ ಕಳಚಿಕೊಳ್ಳುತ್ತಿಲ್ಲವೇ? ಆರ್.ಆರ್ ನಗರ, ಚನ್ನಪಟ್ಟಣ ಏನೇನಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು
ಬೆಂಗಳೂರು : ‘ನಾನು ಒಕ್ಕಲಿಗ ನಾಯಕ ಎಂದು ಎಲ್ಲೂ ಹೇಳಿಲ್ಲ. ನನಗೆ ನನ್ನ ತಮ್ಮನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ ಎಂಬುದು ಸತ್ಯ. ಆದರೆ ನನ್ನ ತಮ್ಮನ ಸೋಲಿಗೆ ಕಾರಣವಾದ ಕೊಂಡಿಗಳು ಒಂದೊಂದಾಗಿ ಕಳಚಿಕೊಳ್ಳುತ್ತಿಲ್ಲವೇ? ಆರ್.ಆರ್ ನಗರ, ಚನ್ನಪಟ್ಟಣ ಏನೇನಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಮ್ಮನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಚನ್ನಪಟ್ಟಣ ಗೆದ್ದ ಮಾತ್ರಕ್ಕೆ ಡಿ.ಕೆ. ಶಿವಕುಮಾರ್ ಒಕ್ಕಲಿಗ ನಾಯಕರೇ?’ ಎಂಬ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದರು.
‘ನಾನು ನಾಯಕ ಎಂದು ಯಾವತ್ತು ಹೇಳಿದ್ದೇನೆ ಅಶೋಕಣ್ಣ? ನೀನು ಕನಕಪುರಕ್ಕೆ ಬಂದು ಎಷ್ಟು ಡೆಪಾಸಿಟ್ ತೆಗೆದುಕೊಂಡೆ? ಕಂದಾಯ ಸಚಿವರಾಗಿದ್ದುಕೊಂಡು ನನ್ನ ಮೇಲೆ ಕುಸ್ತಿ ಮಾಡಲು, ಡಿಚ್ಚಿ ಹೊಡೆಯಲು ಬಂದಿದ್ದಲ್ಲ. ನಿನಗೆ ಎಷ್ಟು ಮತ ಬಂತು? ನನ್ನ ತಮ್ಮ ಸೋತಿರುವುದು ನಿಜ. ಅದಕ್ಕೆ ಕಾರಣವಾದ ಒಂದೊಂದೇ ಕೊಂಡಿಗಳು ಕಳಚಿಕೊಳ್ಳುತ್ತಿವೆಯಲ್ಲವೇ?’ ಎಂದು ಪ್ರಶ್ನಿಸಿದರು.
ಚಕ್ರವರ್ತಿಗಳೇ ಬಿದ್ದಿದ್ದಾರೆ : ದೇಶದಲ್ಲಿ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ ಎಂಬ ಜೆಡಿಎಸ್ ಟ್ವೀಟ್ ಬಗ್ಗೆ ಕೇಳಿದಾಗ, ಅವರು ತಮ್ಮ ಪರಿಸ್ಥಿತಿ ಬಗ್ಗೆ ನೋಡಿಕೊಳ್ಳಲಿ. ನಾನು ಇಲ್ಲವಾದರೂ ಕಾಂಗ್ರೆಸ್‌ಗೆ ಏನೂ ಆಗುವುದಿಲ್ಲ. ಯಾರೇ ಹೋದರೂ ಕಾಂಗ್ರೆಸ್ ಪಕ್ಷಕ್ಕೆ ಏನೂ ಆಗುವುದಿಲ್ಲ. ಪ್ರಪಂಚದಲ್ಲಿ ದೊಡ್ಡ ದೊಡ್ಡ ಚಕ್ರವರ್ತಿಗಳೇ ಬಿದ್ದಿದ್ದಾರೆ. ಸದ್ದಾಂ ಹುಸೇನ್, ಪಾಕಿಸ್ತಾನದ ಕತೆ ಏನಾಯ್ತು ಎಂದು ಎಲ್ಲರಿಗೂ ಗೊತ್ತು ಎಂದು ತಿಳಿಸಿದರು.
ಕಳೆದ ವರ್ಷದ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೂ ಈ ಉಪ ಚುನಾವಣೆಯಲ್ಲಿನ ಮತಗಳಗಳಿಗೂ ಅಂತರವನ್ನು ಗಮನಿಸಿ. ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರದಲ್ಲಿ 50 ಸಾವಿರ ಮತ ಬದಲಾಗಿವೆ. ಚನ್ನಪಟ್ಟಣದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇವಲ 16 ಸಾವಿರ ಮತಗಳನ್ನು ಪಡೆದಿದ್ದರು. ಈ ಉಪಚುನಾವಣೆಯಲ್ಲಿ 1.12 ಲಕ್ಷ ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ನಮಗೆ ಮತ ಹಾಕದಿದ್ದರೆ ಇಷ್ಟು ಪ್ರಮಾಣದಲ್ಲಿ ಮತಗಳು ವ್ಯತ್ಯಾಸವಾಗುತ್ತಿತ್ತೇ? ಆಮೂಲಕ ಜನ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿಸಿದರು.