ಸಚಿವ ಸ್ಥಾನ ಸಿಕ್ಕಿಲ್ಲವೆಂಬ ಬೇಸರವಿಲ್ಲ: ಶಾಂತನಗೌಡ

KannadaprabhaNewsNetwork |  
Published : Aug 05, 2026, 01:30 AM IST
4ಕೆಡಿವಿಜಿ4-ದಾವಣಗೆರೆಯಲ್ಲಿ ಮಂಗಳವಾರ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ಸಿಗದಿರುವುದಕ್ಕೆ ಯಾವುದೇ ಬೇಸರವೂ ಇಲ್ಲ. ಪಕ್ಷದ ಹೈಕಮಾಂಡ್‌ ತೀರ್ಮಾನಕ್ಕೆ ತಾವು ಬದ್ಧರಿದ್ದಾವೆ. ಹೊನ್ನಾಳಿಯಲ್ಲಿ ನಡೆದ ಅಭಿಮಾನಿಗಳ ಸಭೆ ನಾನು ಕರೆದಿದ್ದಲ್ಲ, ಸಭೆ ಇರುವುದು ನನ್ನ ತಾಯಾಣೆಗೂ ಗೊತ್ತೇ ಇರಲಿಲ್ಲ ಎಂದು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.

- ಹೊನ್ನಾಳಿ ಅಭಿಮಾನಿಗಳ ಸಭೆ ನಾನು ಕರೆದಿದ್ದಲ್ಲ, ಸಭೆ ಇದ್ದುದು ತಾಯಾಣೆಗೂ ಗೊತ್ತಿರಲಿಲ್ಲ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ಸಿಗದಿರುವುದಕ್ಕೆ ಯಾವುದೇ ಬೇಸರವೂ ಇಲ್ಲ. ಪಕ್ಷದ ಹೈಕಮಾಂಡ್‌ ತೀರ್ಮಾನಕ್ಕೆ ತಾವು ಬದ್ಧರಿದ್ದಾವೆ. ಹೊನ್ನಾಳಿಯಲ್ಲಿ ನಡೆದ ಅಭಿಮಾನಿಗಳ ಸಭೆ ನಾನು ಕರೆದಿದ್ದಲ್ಲ, ಸಭೆ ಇರುವುದು ನನ್ನ ತಾಯಾಣೆಗೂ ಗೊತ್ತೇ ಇರಲಿಲ್ಲ ಎಂದು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿಯಲ್ಲಿ ಅಭಿಮಾನಿಗಳು ಪ್ರತಿಭಟಿಸಿದ್ದು, ಹೈಕಮಾಂಡ್ ವಿರುದ್ಧ, ಎಸ್‌.ಎಸ್‌. ಮಲ್ಲಿಕಾರ್ಜುನ ವಿರುದ್ಧ ಘೋಷಣೆ ಕೂಗಿದ್ದು ನನಗೆ ಗೊತ್ತಿಲ್ಲ. ಸಚಿವ ಸ್ಥಾನ ತಪ್ಪಲು ಎಸ್‌.ಎಸ್‌. ಮಲ್ಲಿಕಾರ್ಜುನ ಕಾರಣವೆಂಬ ಮಾತನ್ನೂ ನಾನು ಒಪ್ಪುವುದಿಲ್ಲ ಎಂದರು.

ಹೈಕಮಾಂಡ್‌, ಎಸ್.ಎಸ್‌. ಮಲ್ಲಿಕಾರ್ಜುನ ಬಗ್ಗೆ ಮಾತನಾಡಿದ್ದಕ್ಕೆ ಅಭಿಮಾನಿಗಳ ಪರವಾಗಿ ನಾನು ಎಲ್ಲರ ಕ್ಷಮೆ ಕೋರುವೆ. ನನಗೆ ಸಚಿವ ಸ್ಥಾನ ನೀಡುವಂತೆ ನಾನು ದೆಹಲಿ, ಬೆಂಗಳೂರು ಸೇರಿದಂತೆ ಎಲ್ಲಿಗೂ ಹೋಗಿಲ್ಲ. ಸೋಮವಾರ ನಾನು ಹೊನ್ನಾಳಿಯಲ್ಲೇ ಇದ್ದೆ. 2-3 ತಿಂಗಳ ಹಿಂದೆ 3-4 ಸಲ ಗೆದ್ದಂತಹ 30 ಶಾಸಕರ ಸಭೆ ನಡೆಸಿ, ಯಾರಾದರೂ ನಾಲ್ಕು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ತಾವು ಒತ್ತಾಯಿಸಿದ್ದು ನಿಜ ಎಂದು ಅವರು ತಿಳಿಸಿದರು.

ಸಚಿವ ಸ್ಥಾನಕ್ಕಾಗಿ ನಾನು ಎಲ್ಲಿಗೋ ಹೋಗಿಲ್ಲ. ಯಾರಿಗೂ ಸಚಿವ ಸ್ಥಾನ ಕೊಡುವಂತೆ ಕೇಳಿಯೂ ಇಲ್ಲ. ಆದರೆ ಆಯಿತು, ಹೋದರೆ ಹೋಯಿತು ಅಂತಾ ಸುಮ್ಮನಿದ್ದೆ. ನಾನು ಸಚಿವ ಸ್ಥಾನಕ್ಕಾಗಿ ಪ್ರಯತ್ನವನ್ನೇ ಮಾಡಿಲ್ಲವೆಂದ ಮೇಲೆ ಬೇಸರವಾಗುವ ಮಾತೇ ಇಲ್ಲ. ನನಗೂ ಹಿರಿತನವಿದ್ದು, ಸಚಿವ ಸ್ಥಾನ ನಿಭಾಯಿಸುವ ಸಾಮರ್ಥ್ಯವಿದೆ. ಆದರೆ, ಅದೃಷ್ಟ ಎಂಬುದೇ ಇಲ್ಲವಷ್ಟೇ. ಹಾಗಾಗಿ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅವರು ಹೇಳಿದರು.

ಮುಖಂಡರಾದ ಎಚ್.ಕೆ.ಗದಿಗೇಶ, ಆರ್.ನಾಗಪ್ಪ, ಸಣ್ಣಕ್ಕಿ ಬಸವನಗೌಡ, ದರ್ಶನ್ ಇತರರು ಇದ್ದರು.

- - -

(ಬಾಕ್ಸ್‌)

* ನಿಗಮ-ಮಂಡಳಿ ಜವಾಬ್ದಾರಿ ಸಿಗುವ ವಿಶ್ವಾಸ

ಎಲ್ಲರಿಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಸಹಜವಾಗಿಯೇ ಇರುತ್ತದೆ. ಆದರೆ, ಮುಖ್ಯಮಂತ್ರಿ ಆಗೋಕೆ ಆಗುತ್ತದಾ? ನಮ್ಮದು ಕಾಂಗ್ರೆಸ್ ಪಕ್ಷವಾಗಿದ್ದು, ತತ್ವ, ಸಿದ್ಧಾಂತದ ಮೇಲೆ ನಡೆಯುವ ಪಕ್ಷವಾಗಿದೆ. ಸಾಮಾಜಿಕ ನ್ಯಾಯದಡಿ ಮಂತ್ರಿಗಿರಿ, ಇತರೆ ಸ್ಥಾನಮಾನಗಳನ್ನು ಕೊಡಲಾಗುತ್ತದೆ. ಯಾವುದಾದರೂ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನವನ್ನು ಮುಂದಿನ ದಿನಗಳಲ್ಲಿ ಕೊಡಬಹುದು. ಅವಕಾಶ ಕೊಟ್ಟರೆ ತೆಗೆದುಕೊಳ್ಳುತ್ತೇನೆ. ಕೊಡದಿದ್ದರೂ ಸರಿ ಎಂದು ಶಾಸಕ ಶಾಂತನಗೌಡ ಸ್ಪಷ್ಟಪಡಿಸಿದರು.

ಮತ್ತೆ ಸ್ಪರ್ಧಿಸುತ್ತೇನೆ:

ನಾನೇನೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಹೋಗುವುದಿಲ್ಲ. ಅಭಿಮಾನಿಗಳಿಗೆ ಮನವರಿಕೆ ಮಾಡುವುದೇ ನಾಯಕತ್ವದ ಲಕ್ಷಣವಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಆಸೆ ಇದೆ. ಪಕ್ಷ ಅವಕಾಶ ಕೊಟ್ಟರೆ ಸರಿ. ಕೊಡದಿದ್ದರೆ ಯಾರಿಗೆ ಟಿಕೆಟ್ ಕೊಡುತ್ತದೋ ಅಂತಹವರ ಪರವಾಗಿ ಕೆಲಸ ಮಾಡುತ್ತೇನೆ ಎಂದರು.

- - -

(ಟಾಪ್‌ ಕೋಟ್‌) ದಾವಣಗೆರೆ ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ ಸಿಕ್ಕಿದ್ದು ಖುಷಿ ತಂದಿದೆ. ಅದರಲ್ಲೂ ಮಾಯಕೊಂಡ ಕ್ಷೇತ್ರದ ಕೆ.ಎಸ್.ಬಸವಂತಪ್ಪಗೆ ಸಚಿವ ಸ್ಥಾನ ನೀಡಿ, ಪಕ್ಷವು ಸಾಮಾಜಿಕ ಬದ್ಧತೆ ಎತ್ತಿಹಿಡಿದಿದೆ. ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯಕ್ಕೆ ಹೆಸರಾದ ಪಕ್ಷ. ಪರಿಶಿಷ್ಟ ಜಾತಿ ಮಾದಿಗ ಸಮುದಾಯದ ಬಸವಂತಪ್ಪಗೆ ಸಚಿವ ಸ್ಥಾನ ನೀಡಿದ್ದು ಸೂಕ್ತವಿದೆ. ನನಗೇ ಸಚಿವ ಸ್ಥಾನ ಸಿಕ್ಕಷ್ಟು ಖುಷಿಯಾಗಿದೆ. ನಾವೆಲ್ಲರೂ ಒಟ್ಟಾಗಿ ಸೇರಿ ಪಕ್ಷದ ಏಳಿಗೆಗೆ ಶ್ರಮಿಸುತ್ತೇವೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದೇವೆ.

- ಡಿ.ಜಿ.ಶಾಂತನಗೌಡ, ಹೊನ್ನಾಳಿ ಶಾಸಕ.

- - -

-4ಕೆಡಿವಿಜಿ4: ದಾವಣಗೆರೆಯಲ್ಲಿ ಮಂಗಳವಾರ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾತಂತ್ರ್ಯ ದಿನಾಚರಣೆ ಆಚರಣೆ ಕುರಿತು ಪೂರ್ವಭಾವಿ ಸಭೆ
ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹಿಸಿ ಕೆಆರ್‌ಎಸ್‌ ಪ್ರತಿಭಟನೆ