ಕೊಪ್ಪಳ: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮಮಂದಿರ ಉದ್ಘಾಟನೆಗೆ ಇದುವರೆಗೂ ಅಧಿಕೃತ ಆಹ್ವಾನ ಬಂದಿಲ್ಲ. ಬಂದರೆ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಕೊಪ್ಪಳ ಏರ್‌ಸ್ಟ್ರೀಪ್‌ನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಮಮಂದಿರ ಉದ್ಘಾಟನೆಗೆ ತೆರಳುವ ಕುರಿತು ಸ್ಪಷ್ಟವಾಗಿ ಏನೂ ಹೇಳಲಿಲ್ಲ. ಆಹ್ವಾನ ಬಂದ ಮೇಲೆ ನೋಡೋಣ ಎಂದಷ್ಟೇ ಹೇಳಿದರು.ಶಾಸಕ ಬಸವರಾಜ ರಾಯರಡ್ಡಿ, ಬಿ.ಆರ್. ಪಾಟೀಲ್, ಆರ್.ವಿ. ದೇಶಪಾಂಡೆ ಅವರಿಗೆ ಸಚಿವ ಸಂಪುಟ ದರ್ಜೆ ನೀಡಿರುವುದರಲ್ಲಿ ತಪ್ಪೇನು? ಈ ವಿಷಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದರು.ಅವರೆಲ್ಲರೂ ಹಿರಿಯರು; ಅನುಭವಿಗಳು. ರಾಯರಡ್ಡಿ ಆರ್ಥಿಕವಾಗಿ ಹೆಚ್ಚು ತಿಳಿದವರು, ಅವರಿಗೆ ಹುದ್ದೆ ಕೊಟ್ಟರೆ ತಪ್ಪೇನು ? ಆಡಳಿತದಲ್ಲಿ ಅವರಿಗೆ ಬೇರೆ ಬೇರೆ ಜವಾಬ್ದಾರಿ ಕೊಟ್ಟಿದೆ. 14 ಬಜೆಟ್ ಮಂಡಿಸಿದ ಸಿಎಂಗೆ ಆರ್ಥಿಕ ಸಲಹೆಗಾರರು ಬೇಕಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ ಎಂದು ಪುನಃ ಕೇಳಿದಾಗ, ರಾಯರಡ್ಡಿ ಅವರಿಗೆ ಆರ್ಥಿಕ ಜ್ಞಾನ ಇದೆ ಎಂದರು.ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಆರ್ಥಿಕ ಸಲಹೆಗಾರರು ಇರಲಿಲ್ವಾ? ಹಾಗಿದ್ದರೆ ಅವರು ಆರ್ಥಿಕವಾಗಿ ಜಗತ್ಪ್ರಸಿದ್ಧ ಆಗಿದ್ರಾ? ಅವರು ಏಕೆ ನೇಮಕ ಮಾಡಿಕೊಂಡಿದ್ದರು? ಎಂದು ಮರುಪ್ರಶ್ನಿಸಿದರು.
ನಿಗಮ ಮಂಡಳಿ ನೇಮಕ ಕುರಿತು ಈಗಾಗಲೇ ಫೈನಲ್ ಮಾಡಲಾಗಿದೆ. ಹೈಕಮಾಂಡ್ ಕೂಡ ಅನುಮತಿ ನೀಡಿದೆ. ನಾನು, ಕೆಪಿಸಿಸಿ ಅಧ್ಯಕ್ಷರು ಮಾತನಾಡಿದ್ದೇವೆ, ಶೀಘ್ರ ಘೋಷಣೆ ಮಾಡಲಾಗುವುದು ಎಂದರು.ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಯಾವ ಪಕ್ಷದವರು? ಅವರ ಪಕ್ಷದವರು ತಾನೆ? ಅವರು ಆರೋಪ ಮಾಡ್ತಾರೆ ಅಂದರೆ ಏನರ್ಥ? ಈಗ ನಮ್ಮ ಸರ್ಕಾರ, ಬಿಜೆಪಿ ಸರ್ಕಾರದಲ್ಲಿ ಕೋವಿಡ್ ಭ್ರಷ್ಟಾಚಾರ, ಶೇ.40 ಭ್ರಷ್ಟಾಚಾರ ತನಿಖೆಗಾಗಿ ಆಯೋಗ ರಚನೆ ಮಾಡಿದೆ. ಯತ್ನಾಳ ಆಯೋಗಕ್ಕೆ ಮಾಹಿತಿ ನೀಡಲಿ, ತನಿಖೆ ಮಾಡಲಾಗುತ್ತಿದೆ. ಇದರ ಜೊತೆಗೆ ಪಿಎಸ್ಐ ಹಗರಣದ ಕುರಿತು ತನಿಖೆಗೆ ಆಯೋಗ ರಚಿಸಿದೆ ಎಂದರು.ಗೃಹಲಕ್ಷಿ ಹಣ ಇನ್ನೂ ಕೆಲವರದ್ದು ಬಂದಿಲ್ಲ ಎಂದು ಪತ್ರಕರ್ತರು ಕೇಳಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಕೊಪ್ಪಳ ಡಿಸಿ ನಳಿನ್ ಅತುಲ್ ಅವರನ್ನು ತರಾಟೆಗೆ ತೆಗೆದುಕೊಂಡರು.ಯಾರು ಇಲ್ಲಿ ಡಿಸಿ? ಯಾಕಯ್ಯ ಬಂದಿಲ್ಲ? ಎರಡು ತಿಂಗಳಿಂದ ಬಂದಿಲ್ಲ ಎಂದರೆ ನೀನೇನು ಮಾಡುತ್ತಿದ್ದೀಯಾ? ಎಂದರು. ಹಂತ ಹಂತವಾಗಿ ಬರ್ತಾ ಇದೆ ಎಂದು ಡಿಸಿ ಹೇಳಿದಾಗ, ಹಂತ ಹಂತವಾಗಿ ಅಂದರೆ ಏನರ್ಥ ಎಂದು ಕೋಪದಲ್ಲಿಯೇ ಪ್ರಶ್ನೆ ಮಾಡಿದರು. ಕೂಡಲೇ ಸಮಸ್ಯೆ ಇತ್ಯರ್ಥ ಮಾಡಿ ಎಂದು ಸೂಚಿಸಿದರು.ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಶಾಸಕ ರಾಘವೇಂದ್ರ ಹಿಟ್ನಾಳ ಇದ್ದರು.