ನಾನು ಸತ್ಯ ಹೇಳಿದ್ದೇನೆ, ಸಿನಿಮಾ ರಂಗದವರು ಬೇಕಿದ್ರೆ ಪ್ರತಿಭಟನೆ ಮಾಡ್ಲಿ : ಡಿ.ಕೆ.ಶಿವಕುಮಾರ್

KannadaprabhaNewsNetwork | Updated : Mar 03 2025, 08:05 AM IST

ಸಾರಾಂಶ

ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನಲ್ಲಿ ಕನ್ನಡ ಸಿನಿಮಾರಂಗದ ಸ್ಟಾರ್‌ ನಟರು ಭಾಗವಹಿಸದ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಅಸಮಾಧಾನ ಹೊರ ಹಾಕಿದ್ದಾರೆ.

 ಉಡುಪಿ : ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನಲ್ಲಿ ಕನ್ನಡ ಸಿನಿಮಾರಂಗದ ಸ್ಟಾರ್‌ ನಟರು ಭಾಗವಹಿಸದ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಅಸಮಾಧಾನ ಹೊರ ಹಾಕಿದ್ದಾರೆ. 

ಅವರು ಭಾನುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಿನ್ನೆ ಆಗಿರೋದು ಯಾರ ಕಾರ್ಯಕ್ರಮ? ಅದೇನು ನನ್ನ ಕಾರ್ಯಕ್ರಮನಾ? ಫಿಲಂ ಇಂಡಸ್ಟ್ರಿ ಸತ್ತು ಹೋಯಿತು, ಥಿಯೇಟರಗಳು ಮುಚ್ಚಿಹೋಯಿತು, ನಮ್ಮ ಊಟ ಹೋಯಿತು ಅಂತ ಮಾತಾಡ್ತಾರೆ, ಹಾಗಿದ್ರೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಯಾರಿಗೋಸ್ಕರ ಮಾಡೋದು? ಇಂಡಸ್ಟ್ರಿ ಅಂತ ಹೇಳಿದರೆ ಕ್ಯಾಮರಾಮೆನ್, ಸ್ಕ್ರಿಪ್ಟ್ ರೈಟರ್, ನಟರು, ನಿರ್ದೇಶಕರು ಎಲ್ಲರೂ ಬರಬೇಕು, ಅವರ ಹಬ್ಬದಲ್ಲಿ ಅವರೇ ಇಲ್ಲ ಅಂದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು.

ನನಗೆ ಗೊತ್ತಿರುವ ಸತ್ಯ ಹೇಳಿದ್ದೇನೆ, ಸಿನಿಮಾ ರಂಗದವರು ಏನು ಬೇಕಾದರೂ ಮಾತನಾಡಿಕೊಳ್ಳಲಿ, ಅವರು ಬೇಕಿದ್ದರೆ ಪ್ರತಿಭಟನೆ ಮಾಡಲಿ, ಹೋರಾಟ ಮಾಡಲಿ ಎಂದರು.ಅವರು ನೆಲ, ಜಲದ ವಿಚಾರದಲ್ಲಿ ಹೋರಾಟ ಮಾಡುತ್ತೇವೆ ಎನ್ನುತ್ತಾರೆ, ಆದರೆ ನಾವು ನೆಲ ಜಲದ ವಿಚಾರದಲ್ಲಿ ಪಕ್ಷಾತೀತ ಹೋರಾಟ ಮಾಡಿದಾಗ, ನಮ್ಮ ಜನ, ನಮ್ಮ ಹಕ್ಕು ಹೋರಾಟ ಮಾಡಿದಾಗ, ಮೇಕೆದಾಟು ಯಾತ್ರೆ ಮಾಡುವಾಗಲೂ ಯಾರು ಬರಲಿಲ್ಲ. ಪ್ರೇಮ್, ದುನಿಯಾ ವಿಜಿ, ಸಾಧುಕೋಕಿಲ ಬಂದಿದ್ದರು, ಬಿಜೆಪಿಯವರು ಅವರ ಮೇಲೆ ಕೇಸು ಹಾಕಿದರು ಎಂದು ಹೇಳಿದರು. 

ಕಾಂಗ್ರೆಸ್ ಹೋರಾಟಗಳಲ್ಲಿ ಭಾಗವಹಿಸಲಿಕ್ಕೆ ಸಿನಿಮಾದವರು ಕಾಂಗ್ರೆಸ್ ಕಾರ್ಯಕರ್ತರಲ್ಲ ಎಂದ ಆರ್‌.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಅವರು ಬೇಕಾದ್ರೆ ತಲೆ ಕೆಳಗೆ ಮಾಡಿಕೊಳ್ಳಲಿ, ನಾವು ಸಿನಿಮಾದವರನ್ನು ಕಾರ್ಯಕರ್ತರೆಂದಿಲ್ಲ. ನಾವು ಐಟಿ, ಬಿಟಿ, ಇನ್ವೆಸ್ಟರ್ಸ್ ಮೀಟ್ ಮಾಡಿದ್ದೇವೆ, ಹಾಗಿದ್ರೆ ಅದರಲ್ಲಿ ಭಾಗವಹಿಸಿದರೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರಾ ಎಂದು ಪ್ರಶ್ನಿಸಿದರು. 

ಗೃಹಲಕ್ಷ್ಮಿ, ಗೃಹ ಜ್ಯೋತಿ ಕಾಂಗ್ರೆಸ್‌ನವರಿಗೆ ಮಾತ್ರ ಕೊಡ್ತಾ ಇದ್ದೇವಾ? ಬಿಜೆಪಿ ಕಾರ್ಯಕರ್ತರು ಯಾರು ಗ್ಯಾರಂಟಿ ಯೋಜನೆ ತೆಗೆದುಕೊಳ್ಳಬೇಡಿ ಎಂದು ಕರೆ ಕೊಟ್ಟುಬಿಡಿ, ಕಾಂಗ್ರೆಸ್ ಕೊಟ್ಟ ಕಾರ್ಯಕ್ರಮ ನೀವ್ಯಾರು ತಗೆದುಕೊಳ್ಳಬೇಡಿ ಅಂತ ಹೇಳಿ, ಅವರ ಪಕ್ಷದವರು ಬೇಕಿದ್ರೆ ಹಣ ಕೊಟ್ಟೆ ಬಸ್‌ನಲ್ಲಿ ಓಡಾಟ ಮಾಡಲಿ ಎಂದವರು ಅಶೋಕ್‌ಗೆ ಸವಾಲು ಹಾಕಿದರು.ಎಲ್ಲ ಪಕ್ಷದವರು ಸೌಲಭ್ಯಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಜನರು ಕರೆಕ್ಟ್ ಆಗಿ ಇದ್ದಾರೆ, ಆದರೆ ಬಿಜೆಪಿ ನಾಯಕರಿಗೆ ನಮಗೆ ಅವಕಾಶ ಸಿಕ್ಕಿಲ್ಲ, ಕಾಂಗ್ರೆಸ್‌ಗೆ ಸಿಕ್ಕಿದೆ ಅನ್ನುವ ಹೊಟ್ಟೆ ಉರಿ ಎಂದು ಡಿಕೆಶಿ ಹೇಳಿದರು.

Share this article