ಬನ್ನೂರು, ರೆಂಬೋಲೇನ್ ಕೆಂಗುರಿ ತಳಿಗಳ ಆಗಮನಚಂದ್ರು ಕೊಂಚಿಗೇರಿ
ಹಂಪಿ ಉತ್ಸವದಲ್ಲಿ ಕಮಲಾಪುರ ಬಳಿ ಪಶು ಸಂಗೋಪನಾ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಆಯೋಜಿಸಿದ್ದ, ಟಗರುಗಳ ಪ್ರದರ್ಶನವು ಕುರಿಗಾರರಲ್ಲಿ ಇನ್ನು ಹೆಚ್ಚು ಕುರಿ ಸಾಕಾಣಿಕೆ ಮಾಡಬೇಕೆಂಬ ಆಸಕ್ತಿ ಹೆಚ್ಚಿಸಿತು.
ಕೊಬ್ಬಿದ ಟಗರು, ಕಾಳಗಕ್ಕೆ ಸಿದ್ಧಗೊಂಡ ಟಗರು, ಕಣ್ಣು ಹುಬ್ಬೇರಿಸುವ ಸುಂದರ ಕುರಿ ಹೀಗೆ ಹತ್ತಾರು ಬಗೆಯ ಟಗರು ಪ್ರದರ್ಶನವು ಜನರ ಗಮನ ಸೆಳೆದವು.ಹೊಸಪೇಟೆ ಸುತ್ತಮುತ್ತಲಿನ ಗ್ರಾಮಗಳಿಂದ 51 ಟಗರು ಭಾಗವಹಿಸಿದ್ದವು. ಬಳ್ಳಾರಿ ತಳಿ(ಡೆಕ್ಕನ್ ತಳಿ), ಕೆಂದೂಳಿ, ಕಪ್ಪು ಕುರಿ, ಬನ್ನೂರ್ ಕುರಿ, ಡಾಬರ್ ತಳಿ ಹಾಗೂ ರ್ಯಾಂಬೋಲನ್ ತಳಿಯ ಟಗರು ಮತ್ತು ಕುರಿಗಳು ಹೆಚ್ಚಾಗಿ ಕಂಡುಬಂದವು.
ಹೀಗೆ ಹತ್ತು ಹಲವು ತಳಿಯ ಟಗರು ಮತ್ತು ಮೇಕೆಗಳು ಶನಿವಾರ ನಡೆದ ಕುರಿ ಪ್ರದರ್ಶನದಲ್ಲಿ ಸಾರ್ವಜನಿಕರ ಗಮನ ಸೆಳೆದವು.
ಪ್ರದರ್ಶನದಲ್ಲಿ ಟಗರುಗಳ ಮೂಲ ತಳಿ, ದೇಹದಾರ್ಢ್ಯತೆ, ಚುರುಕುತನ, ಅವುಗಳ ಚರ್ಮ ಸ್ಪರ್ಶಿಸುವ ಮೂಲಕ ಆರೋಗ್ಯ, ಹಲ್ಲು ಸೇರಿದಂತೆ ಸಮರ್ಥನೆಗೆ ಒಳಪಡಿಸಿದ ಬಳಿಕ ತೀರ್ಪುಗಾರರು ಅವುಗಳ ಚಲನ ವಲನಗಳನ್ನು ಪರಿಶೀಲಿಸಿ ಬಹುಮಾನ ಘೋಷಿಸಿದರು.
ಕೊಂಡನಾಯಕನ ಹಳ್ಳಿಯ ಮಾರುತಿ ಅವರ ರ್ಯಾಂಬೋಲೋ ತಳಿಯ ಟಗರು 7,500 ಹಾಗೂ ಪ್ರಮಾಣ ಪತ್ರ ಒಳಗೊಂಡು ದ್ವಿತೀಯ ಸ್ಥಾನ ಪಡೆದುಕೊಂಡಿತು.
4 ಮತ್ತು 5ನೇ ಸ್ಥಾನ ಪಡೆದ ಇಬ್ಬರಿಗೆ ಸಮಾಧಾನಕರ ಬಹುಮಾನವಾಗಿ ಪ್ರಮಾಣ ಪತ್ರ ಹಾಗೂ ಪಶು ಆಹಾರದ ಕಿಟ್ ವಿತರಿಸಿದರು.
ಪ್ರದರ್ಶನದಲ್ಲಿ ಕುರಿ ಮತ್ತು ಟಗರು ಸಾಕಾಣಿಕೆಯಲ್ಲಿ ಅನುಸರಿಸಬೇಕಾದ ಕ್ರಮ, ಆಹಾರ ಪದ್ಧತಿ ಹಾಗೂ ಅವುಗಳ ಆರೋಗ್ಯ ನಿರ್ವಹಣೆ ಕುರಿತು ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು. ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲಾ ಕುರಿ ಮತ್ತು ಟಗರುಗಳಿಗೆ ಇಲಾಖೆ ವತಿಯಿಂದ ಮಾಲೀಕರಿಗೆ ಪ್ರಮಾಣ ಪತ್ರ, ಪಶು ಆಹಾರದ ಕಿಟ್ ವಿತರಿಸಲಾಯಿತು.