ಚನ್ನಪಟ್ಟಣ: ನಗರಸಭೆ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿದ ಒಂದು ವರ್ಷದ ಅಧಿಕಾರಾವಧಿಯಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದು, ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ವಾಸೀಲ್ ಅಲಿಖಾನ್ ತಿಳಿಸಿದರು.
ನಗರಸಭೆಗೆ ಹೊಸ ಕಟ್ಟಡ: ₹೧೦ ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ನಗರಸಭೆಯ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದ್ದು, ನೆಲ ಅಂತಸ್ತು ಕಾಮಗಾರಿ ಪೂರ್ಣಗೊಂಡಿದೆ. ೨೦೨೨-೨೩ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ೩೧ ವಾರ್ಡ್‌ಗಳಿಗೆ ₹೨೦ ಕೋಟಿಯಲ್ಲಿ ಟೆಂಡರ್ ಕರೆದು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಭಾಗಶಃ ಕಾಮಗಾರಿಗಳು ಪೂರ್ಣಗೊಂಡಿದೆ. ೨೦೨೪- ೨೫ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ೩೧ ವಾರ್ಡ್‌ಗಳಲ್ಲಿ ಪ್ರತಿ ವಾರ್ಡ್‌ಗೆ ₹೧ ಕೋಟಿಯಂತೆ ಒಟ್ಟು ₹೩೧ ಕೋಟಿಯಲ್ಲಿ ಟೆಂಡರ್ ಕರೆದು ಕೆಲವು ವಾರ್ಡ್‌ಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.
ಸ್ವಚ್ಛತಾ ಸಿಬ್ಬಂದಿಗೆ ವಿಮೆ: ಚನ್ನಪಟ್ಟಣ ನಗರಸಭಾ ವ್ಯಾಪ್ತಿಯ ರಾಮಮ್ಮನ ಕರೆ ಹತ್ತಿರ ಇರುವ ವಿದ್ಯುತ್ ಚಿತಾಗಾರ ಚಾಲನೆಗೊಂಡಿದೆ. ನಗರಸಭೆಯಲ್ಲಿ ಇಲ್ಲಿಯವರೆಗೆ ೯೮೫೦ ಇ- ಖಾತೆಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ. ಕಚೇರಿಯ ರೆಕಾರ್ಡ್ ರೂಂ ನಲ್ಲಿರುವ ದಾಖಲೆಗಳ ಡಿಜಿಟಲೀಕರಣಕ್ಕೆ ಕ್ರಮವಹಿಸಲಾಗಿದೆ. ಕಚೇರಿಯ ಎಲ್ಲಾ ಸ್ವಚ್ಛತಾ ಸಿಬ್ಬಂದಿಗೆ ನಗರಸಭಾ ವತಿಯಿಂದ ವಿಮೆ ಮಾಡಲಾಗಿದೆ. ಬೆಂಗಳೂರು- ಮೈಸೂರು ರಸ್ತೆಯಲ್ಲಿರುವ ಶೇರು ಹೋಟೆಲ್‌ನಿಂದ ಮಂಗಳವಾರಪೇಟೆ ವರೆಗೆ ಸೆಂಟರ್ ಮೀಡಿಯಂ ಕಂಬಗಳ ನವೀಕರಣ ಕಾಮಗಾರಿ ಮುಕ್ತಾಯಗೊಳಿಸಲಾಗಿದೆ ಎಂದರು.ನಗರದ ಹೃದಯಭಾಗದಲ್ಲಿರುವ ಶೆಟ್ಟಿಹಳ್ಳಿ ಕೆರೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ನಗರಸಭಾ ವತಿಯಿಂದ ₹೭೦ ಲಕ್ಷಗಳನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ. ಬೆಂಗಳೂರು- ಮೈಸೂರು ಹೆದ್ದಾರಿ ಹಾಗೂ ಸಾತನೂರು ರಸ್ತೆಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು ಕಾಮಗಾರಿ ಪ್ರಗತಿಯಲ್ಲಿದೆ. ನಗರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಹೊಸದಾಗಿ ೦೫ ಆಟೋ ಟಿಪ್ಪರ್ ಗಳನ್ನು ಖರೀದಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಹಳೆಯ ಬೀದಿ ದೀಪಗಳು ಸೋಡಿಯಂ ಮತ್ತು ಟ್ಯೂಬ್‌ಲೈಟ್‌ಗಳನ್ನು ತೆಗೆದು ೪೦೦೦ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಗಿದೆ. ವಾರ್ಡ್ ನಂ.೦೧ರಿಂದ ೧೬ರವೆರೆಗೆ ಗುಂಡಿ ಬಿದ್ದಿರುವ ರಸ್ತೆ ಅಭಿವೃದ್ಧಿ ಹಾಗೂ ಎಂ.ಜಿ.ರಸ್ತೆ ದುರಸ್ತಿ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿ, ತಮ್ಮ ಅವಧಿಯಲ್ಲಿ ಕಾರ್ಯನಿರ್ವಹಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
(ಫೋಟೋ ಮಗ್‌ಶಾಟ್ ಮಾತ್ರ)ಪೊಟೋ೨೮ಸಿಪಿಟಿ೧:
ಚನ್ನಪಟ್ಟಣದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ವಾಸೀಲ್ ಅಲಿಖಾನ್ ಪತ್ರಿಕಾಗೋಷ್ಠಿಯಲ್ಲಿ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಿದರು.