ಕನ್ನಡಪ್ರಭ ವಾರ್ತೆ ಟಿ. ನರಸೀಪುರತಾಲೂಕಿನ ಕರೋಹಟ್ಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಗೂ ರೈತ ಬಾಂಧವರ ಸಹಯೋಗದೊಂದಿಗೆ ರಾಷ್ಟ್ರೀಯ ರೈತ ದಿನವನ್ನು ಭತ್ತದ ರಾಶಿ ಪೂಜೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.ಕ್ಷೇತ್ರ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಮಾತನಾಡಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಹೇಳಿದಂತೆ ಜೈ ಜವಾನ್ ಜೈ ಕಿಸಾನ್, ದೇಶಕ್ಕೆ ಅನ್ನ ನೀಡುವ ರೈತರು ಹಾಗೂ ದೇಶ ರಕ್ಷಣೆ ಮಾಡುವ ಸೈನಿಕರನ್ನು ಪ್ರತಿದಿನ ನೆನೆಯೋಣ ಅವರಿಗೆ ಗೌರವ ಸಲ್ಲಿಸೋಣ ಎಂದು ಇತ್ತೀಚಿನ ದಿನಗಳಲ್ಲಿ ರೈತರ ಕೆಲಸ ಮಾಡಲು ಯುವಕರು ನಿರಾಸಕ್ತಿ ತೋರಿಸುತ್ತಿದ್ದು, ಸರ್ಕಾರ ರೈತ ಬಾಂಧವರಿಗೆ, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವ ಮೂಲಕ ಹೆಚ್ಚಿನ ಸೌಲಭ್ಯ ನೀಡುವುದರ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕು ಹೆಚ್ಚು ಹೆಚ್ಚು ಯುವಕರು ಕೃಷಿ ಕ್ಷೇತ್ರದಲ್ಲಿ ಪಾಲ್ಗೊಳ್ಳುವಂತೆ ಆಕರ್ಷಕ ಯೋಜನೆಗಳನ್ನು ಘೋಷಿಸಬೇಕು ಎಂದು ತಿಳಿಸಿದರು. ಕೃಷಿ ಮೇಲ್ವಿಚಾರಕ ಟಿ.ಆರ್. ಕುಮಾರ್ ಮಾತನಾಡಿ, ಧರ್ಮಾಧಿಕಾರಿ ಹಾಗೂ ಮಾತೃಶ್ರೀ ಅಮ್ಮನವರು ಕಳೆದ ನಾಲ್ಕು ದಶಕಗಳಿಂದ ಸಣ್ಣ ಅತಿ ಸಣ್ಣ ರೈತರನ್ನು ಸಂಘಟಿಸಿ ಪ್ರಗತಿ ಬಂದು ತಂಡಗಳನ್ನು ರಚಿಸಿ ಅವರಿಗೆ, ಬಿತ್ತನೆ ಬೀಜ, ಔಷಧಿ, ಗೊಬ್ಬರ ನೀಡುವುದರ ಮೂಲಕ, ಅವರಿಗೆ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ, ಕ್ಷೇತ್ರೋತ್ಸವ, ಕೃಷಿ ಅಧ್ಯಯನ ಪ್ರವಾಸ, ಬಾಡಿಗೆ ಆಧಾರಿತ ರೈತ ಸೇವಾ ಕೇಂದ್ರ, ಯಂತ್ರ ಶ್ರೀ ಕಾರ್ಯಕ್ರಮ, ಕೃಷಿ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ರೈತ ಬಾಂಧವರನ್ನು ಹೆಚ್ಚು ಬಲಪಡಿಸುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ, ಇದರಿಂದ ರೈತ ಬಾಂಧವರು ಆರ್ಥಿಕ ಅಭಿವೃದ್ಧಿ ಸಾಧಿಸಿದ್ದಾರೆ ಎಂದು ತಿಳಿಸಿದರು.