ಮಣಿಪಾಲ: ನನಗೆ ಪ್ರಧಾನಿ ನರೇಂದ್ರ ಮೋದಿ ಮತ್ತವರ ಕೆಲಸಗಳು ಬಹಳ ಇಷ್ಟ, ಆದರೆ ನಾನು ರಾಜಕೀಯಕ್ಕೆ ಸೇರುವುದಿಲ್ಲ ಎಂದು ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹೇಳಿದ್ದಾರೆ.ಮಣಿಪಾಲದ ಮಾಹೆಯ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೋಬೋಟಿಕ್ ಸರ್ಜರಿ ಕೇಂದ್ರ ಉದ್ಘಾಟಿಸಿ, ಸುದ್ದಿಗಾರರೊಂದಿಗೆ ಸಂವಾದ ನಡೆಸಿದರು.
ಸದ್ಯಕ್ಕಂತೂ ರಾಜಕೀಯ ಸೇರುವ ಆಸಕ್ತಿ ಇಲ್ಲ, ಅದರ ಬದಲು ಎಳೆಯ ಬ್ಯಾಡ್ಮಿಂಟನ್ ಆಟಗಾರರಿಗೆ ತರಬೇತಿ ನೀಡುವುದನ್ನು ಇಷ್ಟಪಡುತ್ತೇನೆ ಎಂದರು.ನನ್ನದೇ ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪನೆ ಮಾಡುವುದಿಲ್ಲ, ಈಗಾಗಲೇ ಹೈದರಾಬಾದ್‌ನಲ್ಲಿ ಪುಲ್ಲೆಲ ಗೋಪಿಚಂದ್ ಅವರ ಅತ್ಯುತ್ತಮವಾದ ಅಕಾಡೆಮಿ ಇದೆ, ನನ್ನ ಪತಿ ಕೂಡ ಅಲ್ಲಿಯೇ ಕೋಚ್ ಆಗಿದ್ದಾರೆ, ನಾನು ಕೂಡ ಎಳೆಯ ಆಟಗಾರರಿಗೆ ತರಬೇತಿ ನೀಡುವ ಬಗ್ಗೆ ಯೋಚಿಸುತಿದ್ದೇನೆ ಎಂದವರು ಹೇಳಿದರು.
ಕ್ರೀಡಾ ರಂಗದಲ್ಲಿ ಸಾಕಷ್ಟು ತಾಂತ್ರಿಕತೆ ಬಳಕೆಯಾಗುತ್ತಿದೆ, ಎಐ ಈಗ ತಾನೇ ಪ್ರವೇಶ ಮಾಡುತ್ತಿದೆ, ಆದರೆ ರೋಬೋಟಿಕ್ ಇನ್ನೂ ಪ್ರವೇಶ ಮಾಡಿಲ್ಲ. ಕ್ರೀಡಾಪಟುಗಳ ತರಬೇತಿಗೆ ಎಐ ಮತ್ತು ರೋಬೋಟಿಕ್ ಬಳಕೆಯಾದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಬಹುದು ಎಂದರು.25 ವರ್ಷಗಳ ತ್ಯಾಗ, ಒತ್ತಡ:
ಚಾಂಪಿಯನ್ ಆಗುವುದು ಬಹಳ ಕಷ್ಟದ ಕೆಲಸ, ನಾನು ಅದಕ್ಕಾಗಿ ತ್ಯಾಗ ಮಾಡಿದ್ದೇನೆ. 25 ವರ್ಷಗಳ ಕಾಲ ನಾನು ಮನೆ, ಗೆಳೆಯರು, ಆಹಾರ, ವಿಹಾರ, ಪಾರ್ಟಿ ಇತ್ಯಾದಿಗಳನ್ನೆಲ್ಲಾ ದೂರ ಇಟ್ಟಿದ್ದೆ, ಬಹಳ ಒತ್ತಡ ಅನುಭವಿಸಿದ್ದೇನೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪ್ರಕಾಶ್ ಪಡುಕೋಣೆ ಅವರು ನಮ್ಮೆಲ್ಲರ ಹೆಮ್ಮೆ, ಅವರಿಂದ ನಾವು ಬಹಳ ಸ್ಪೂರ್ತಿ ಪಡೆದಿದ್ದೇವೆ, ಅವರು ಇದೇ ಜಿಲ್ಲೆಯವರು ಎಂದು ಕೇಳಿ ಸಂತೋಷವಾಯಿತು, ನಾನು ಕರ್ನಾಟಕದ ಕರಾವಳಿಗೆ ಪ್ರಥಮ ಬಾರಿಗೆ ಬಂದಿದ್ದೇನೆ ಎಂದರು.
ಏಷಿಯನ್ ಗೇಮ್ಸ್‌ನಲ್ಲಿ ಪದಕ ಗೆದ್ದಿರುವ ಚಿರಾಗ್ ಶೆಟ್ಟಿ ಬಹಳ ಒಳ್ಳಯ ಆಟಗಾರ, ತುಂಬಾ ಕಠಿಣ ಪರಿಶ್ರಮ ಪಡುತಿದ್ದಾರೆ. ಅವರಿಗೆ ಒಳ್ಳಯ ಭವಿಷ್ಯ ಇದೆ ಎಂದು ಸೈನಾ ಹೇಳಿದರು.