ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾನೇನು ಆಸೆ ಪಟ್ಟಿರಲ್ಲಿಲ್ಲ. ನಿಮಗಾಗಿ ಮತ್ತು ಪಕ್ಷಕ್ಕಾಗಿ ಬಂದು ನಾನು ತಲೆಕೊಟ್ಟೆ. ರಾಜಕೀಯವಾಗಿ ನನಗೆ ಆಗಿರುವ ಪೆಟ್ಟು ನಿಮಗ್ಯಾರಿಗಾದರೂ ಆಗಿದ್ದರೆ ಮನೆಯಿಂದ ಆಚೆ ಬರುತ್ತಿರಲಿಲ್ಲ. ಆದರೆ, ನಾನು ಬಂದು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಳಲು ತೋಡಿಕೊಂಡರು.ತಾಲೂಕಿನ ದೊಡ್ಡಮಳೂರು ಗ್ರಾಮದ ಸಾಯಿ ಮಂದಿರದಲ್ಲಿ ಆಯೋಜಿಸಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಚುನಾವಣೆಗೆ ಸ್ಪರ್ಧಿಸಿ ಎಂದರು. ಆದರೆ, ನಾನು ನಿರಾಕರಿಸಿದೆ. ಅದರೆ, ಇಲ್ಲಿ ಬಂದು ನಿಮಗಾಗಿ ತಲೆಕೊಟ್ಟೆ ಎಂದು ಬೇಸರ ವ್ಯಕ್ತಪಡಿಸಿದರು.
ಚನ್ನಪಟ್ಟಣದ ಉಪಚುನಾವಣೆಯಲ್ಲಿ ಜಯಮುತ್ತು ಅಥವಾ ಹಾಪ್‌ಕಾಮ್ಸ್ ದೇವರಾಜು ಇಬ್ಬರಲ್ಲಿ ಒಬ್ಬರು ಸ್ಪರ್ಧಿಸುವಂತೆ ಕುಮಾರಸ್ವಾಮಿ ತಿಳಿಸಿದರು. ಆದರೆ, ಕಡೆಗೆ ನನ್ನ ತಲೆಗೆ ಕಟ್ಟಿದರು. ಸೋತರೂ ನಾನು ಮನೆಯಲ್ಲಿ ಕೂತಿಲ್ಲ, ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದೇನೆ. ಇದು ನೀವು ಕಟ್ಟಿರುವ ಪಕ್ಷ. ಇಲ್ಲಿ ಪ್ರಾಮಾಣಿಕರು ಯಾರು?, ಅಪ್ರಾಮಾಣಿಕರು ಯಾರು ಎಂದು ತಮ್ಮ ಮನಸಾಕ್ಷಿಗೆ ಕೇಳಿಕೊಂಡರೆ ಸಾಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.ಎರಡು ತಿಂಗಳ ಹಿಂದೆ ದೆಹಲಿಗೆ ಬಂದ ಜಯಮುತ್ತು ತಾಲೂಕು ಅಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸಿ ಎಂದು ಮನವಿ ಮಾಡಿದ್ದಾರೆ. ನವಂಬರ್ ವೇಳೆಗೆ ಕೆಲ ಜಿಲ್ಲೆಗಳ ಜೆಡಿಎಸ್ ಅಧ್ಯಕ್ಷರ ಬದಲಾವಣೆ ಆಗಲಿದೆ. ಜಯಮುತ್ತು ಅವರನ್ನೇ ಮುಂದುವರಿಸುವುದಾದರೂ ಮುಂದುವರಿಸಿ, ಇಲ್ಲ ನೀವೇ ಮೂರು ನಾಲ್ಕು ಹೆಸರು ಅಂತಿಮಗೊಳಿಸಿ ಕಳಿಸಿ ಎಂದರು.
ಬಮೂಲ್ ಚುನಾವಣೆಯಲ್ಲಿ ಸರ್ಕಾರ ಹೇಗೆ ನಡೆದುಕೊಂಡಿತು. ಅಧಿಕಾರಿಗಳು ಹೇಗೆ ಕುಣಿದರು ಎಂದು ನೋಡಿದ್ದೇವೆ. ಕಾಂಗ್ರೆಸ್‌ನವರು ಹೇಗೆ ನಡೆದುಕೊಳ್ಳಬೇಕು ಎಂದು ಕಲಿಸಿದ್ದಾರೆ ಎಂದರು.ನಿಮ್ಮ ಮೇಲೆ ಹಾಕುವ ಕೇಸ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನೂರು ಕೇಸ್ ಹಾಕಿದರೂ ತಲೆ ಕಡೆಸಿಕೊಳ್ಳಬೇಡಿ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು ಮಾತನಾಡಿ, ಕಳೆದ ಹನ್ನೊಂದು ವರ್ಷದಿಂದ ನಾನು ಜೆಡಿಎಸ್ ತಾಲೂಕು ಅಧ್ಯಕ್ಷನಾಗಿದ್ದೇನೆ. ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಏನಾದರೂ ಸಣ್ಣಪುಟ್ಟ ಲೋಪದೋಷ ಆಗಿದ್ದರೆ ಕ್ಷಮಿಸಿ. ಪಕ್ಷದ ತೀರ್ಮಾನಕ್ಕೆ ಬದ್ದನಾಗಿರುತ್ತೇನೆ ಎಂದರು.ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ನಗರಸಭೆ ಸದಸ್ಯರಾದ ಮಂಜುನಾಥ್, ಕಂಠಿ, ಮುಖಂಡರಾದ ಡಿಎಂಕೆ ಕುಮಾರ್, ಬಿಳಿಯಪ್ಪ, ರೇಖಾ ಉಮಾಶಂಕರ್, ರಮ್ಯಾ ಇತರರು ಇದ್ದರು.
ನಾನು ಅಧಿಕಾರ ತೆಗೆದುಕೊಳ್ಳಲ್ಲ: ನಿಖಿಲ್ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವ ದಿನ ದೂರವಿಲ್ಲ. ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ದಿನ ನಾನು ಅಧಿಕಾರ ತೆಗೆದುಕೊಳ್ಳುವುದಿಲ್ಲ. ಕಾರ್ಯಕರ್ತರು, ಹಾಗೂ ಮುಖಂಡರಿಗೆ ಅಧಿಕಾರಿ ಸಿಕ್ಕಿಲ್ಲ ಎಂದು ದೂರು ಏನಿದೆಯೋ ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಿಮಗೆ ಅಧಿಕಾರಿ ಕಲ್ಪಿಸಲು ಶ್ರಮಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಘೋಷಿಸಿದರು.
ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ಸಿಎಂ ಮಾಡಬೇಕು. ಪಕ್ಷ ಉಳಿಸಬೇಕು. ಮಾತೆತ್ತಿದರೆ ಜೆಡಿಎಸ್ ವಿಲೀನವಾಗುತ್ತದೆ ಎನ್ನುತ್ತಾರೆ, ವಿಲೀನಗೊಳಿಸಲು ನಮ್ಮ ಕಾರ್ಯಕರ್ತರು ಅಷ್ಟು ಅಸಮರ್ಥರೇ. ಪಕ್ಷ ಕಟ್ಟುವ ಜವಬ್ದಾರಿ ನಮ್ಮ ಮೇಲಿದೆ ಎಂದರು.