ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾನುವಾರ ಬೆಂಗಳೂರು ನಡಿಗೆ ಅಭಿಯಾನದಲ್ಲಿ ನಾಗರಿಕರೊಬ್ಬರು, ಸರ್ಕಾರ ಎಲ್ಲಾ ಆಸ್ತಿಗಳನ್ನು ಎ ಖಾತಾ ಆಗಿ ಪರಿವರ್ತನೆ ಮಾಡುತ್ತಿರುವುದು ಒಳ್ಳೆಯ ಕೆಲಸ. ಈ ಪರಿವರ್ತನೆಗಾಗಿ ಅನೇಕರು, ಹಲವು ವರ್ಷಗಳಿಂದ ಕಾಯುತ್ತಿದ್ದರು ಎಂದು ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ, ಮುಕ್ತವಾಗಿ ಪ್ರಶಂಸಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಎ ಖಾತಾ-ಬಿ ಖಾತಾ ಕುರಿತು ಕೇವಲ ಟೀಕೆ ಮಾತ್ರ ಮಾಡುತ್ತಿದ್ದಾರೆ. ಯಾವುದೇ ಸಲಹೆ ಸೂಚನೆಗಳನ್ನು ನೀಡಿಲ್ಲ. ಬಿ ಖಾತೆಗಳನ್ನು ಬಿಜೆಪಿ ಅವಧಿಯಲ್ಲಿ ಮಾಡಲಾಯಿತು. ಇದನ್ನು ಮಾಡಲು ಹೇಳಿದವರು ಯಾರು? ಈಗ ಜನ ಆಸ್ತಿ ಖರೀದಿ ಮಾಡಿದ್ದಾರೆ. ಆದರೆ, ಯಾರಿಗೂ ಬ್ಯಾಂಕ್ ಗಳಿಂದ ಸಾಲ ದೊರೆಯುತ್ತಿಲ್ಲ. ಬಿ ಖಾತಾ ಆಸ್ತಿಯಲ್ಲಿ ಕಟ್ಟಿರುವ ಕಟ್ಟಡಗಳನ್ನು ಒಡೆದು ಹಾಕಲು ಆಗುತ್ತದೆಯೇ? ಈ ಹಿಂದೆ ಬೆಂಗಳೂರು ಪಕ್ಕದ ಹಳ್ಳಿಗಳಲ್ಲಿ ನಿವೇಶನ ಖರೀದಿ ಮಾಡಿದ್ದಾರೆ. ಈಗ ನಗರದ ಒಳಗೆ ಸೇರಿಕೊಂಡಿದೆ. ಅಂತಹ ಆಸ್ತಿಗಳನ್ನು ಗಟ್ಟಿ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.