ರಸ್ತೆಯಲ್ಲ, ಇದು ಕೆಸರಿನ ಹೊಂಡ, ನರಸಾಪುರ ಗ್ರಾಮದಲ್ಲಿ ಅವ್ಯವಸ್ಥೆ

KannadaprabhaNewsNetwork |  
Published : Oct 27, 2025, 12:15 AM IST
ಗ್ರಾಮದ ಪ್ರಮುಖ ರಸ್ತೆ ಕೆಸರಿನ ಹೊಂಡವಾಗಿರುವುದು.  | Kannada Prabha

ಸಾರಾಂಶ

ರಸ್ತೆಯಲ್ಲಿ ಆಳವಾದ ಹೊಂಡಗಳು ಮತ್ತು ಕೆಸರು ತುಂಬಿದ್ದು, ವಾಹನ ಸಂಚಾರಕ್ಕೆ ಅಸಾಧ್ಯವಾದ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಪರದಾಡುತ್ತಿದ್ದಾರೆ.

ವಿಶೇಷ ವರದಿ

ಗದಗ: ಬೆಟಗೇರಿಗೆ ಹೊಂದಿಕೊಂಡಿರುವ ​ಹಾತಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಸಾಪುರ ಗ್ರಾಮದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಪ್ರತಿದಿನ ಇಲ್ಲಿ ಸಂಚರಿಸುವ ಸಾವಿರಾರು ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ರಸ್ತೆಯಲ್ಲಿ ಆಳವಾದ ಹೊಂಡಗಳು ಮತ್ತು ಕೆಸರು ತುಂಬಿದ್ದು, ವಾಹನ ಸಂಚಾರಕ್ಕೆ ಅಸಾಧ್ಯವಾದ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಪರದಾಡುತ್ತಿದ್ದಾರೆ.

ಇತ್ತೀಚೆಗೆ ಜಿಲ್ಲಾದ್ಯಂತ ಮಳೆ ಸುರಿದ ಕಾರಣ ನರಸಾಪುರ ಗ್ರಾಮದ ಮುಖ್ಯ ರಸ್ತೆಯು ಕೆಸರುಮಯವಾಗಿ, ದೊಡ್ಡ ಗಾತ್ರದ ಹಳ್ಳಗಳಿಂದ ತುಂಬಿದೆ. ನರಸಾಪುರ ಗ್ರಾಮಕ್ಕೆ ನಿತ್ಯವೂ ಶಾಲೆಗೆ ತೆರಳುವ ಮಕ್ಕಳನ್ನು ಕರೆ ತರುವ ಶಾಲಾ ಬಸ್ ಕೆಸರಿನಲ್ಲಿ ಆಳವಾಗಿ ಸಿಲುಕಿಕೊಂಡು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ.

ಅದರಲ್ಲಿಯೂ ಕಳೆದ ಎರಡೂ ದಿನಗಳಿಂದ ಗ್ರಾಮಕ್ಕೆ ತೆರಳಿದ ಶಾಲಾ ಬಸ್ ಅಲ್ಲಿಯೇ ಸಿಕ್ಕಿ ಹಾಕಿಕೊಂಡು ಹೊರತೆಗೆಯಲು ಪರದಾಡಿದರು. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಬಸ್‌ನಲ್ಲಿದ್ದ ಶಾಲಾ ಮಕ್ಕಳನ್ನು ಕೆಳಗಿಳಿಸಿ ಬಸ್ ಹೊರತೆಗೆಯಲು ದಿನಗಟ್ಟಲೇ ಕಷ್ಟ ಪಟ್ಟಿದ್ದಾರೆ.

​ಸಮಸ್ತ ನರಸಾಪುರ ಗ್ರಾಮದ ಸಾರ್ವಜನಿಕರ ಪರವಾಗಿ, ಹದಗೆಟ್ಟಿರುವ ರಸ್ತೆಯನ್ನು ಕೂಡಲೇ ದುರಸ್ತಿಪಡಿಸಲು ಮತ್ತು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಬೇಕು. ಕೂಡಲೇ ನಮ್ಮ ರಸ್ತೆಯ ದುಸ್ಥಿತಿಯನ್ನು ಗಮನಿಸಿ ಶಾಲಾ ಮಕ್ಕಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳು ಕಾರ್ಯಪ್ರವೃತ್ತರಾಗಬೇಕು. ಇನ್ನಷ್ಟು ಅನಾಹುತಗಳಾಗುವ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

​ನರಸಾಪುರ ಗ್ರಾಮದ ಸಾರ್ವಜನಿಕರು ಈ ಕುರಿತು ಹಾತಲಗೇರಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಪ್ರತಿದಿನ ಈ ರಸ್ತೆಯಲ್ಲಿ ಭಯದಿಂದ ಓಡಾಡಬೇಕು. ಶಾಲಾ ಮಕ್ಕಳಿಗೆ ಆಗುತ್ತಿರುವ ತೊಂದರೆ ನೋಡಿದರೆ ಅಧಿಕಾರಿಗಳಿಗೆ ನಮ್ಮ ಮೇಲೆ ಯಾವುದೇ ಕಾಳಜಿ ಇಲ್ಲವೇ ಎಂದು ಸ್ಥಳೀಯ ನಿವಾಸಿ ರವಿರಾಜ ತಳವಾರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ನಭಾಗ್ಯದಂತೆ ಪುಸ್ತಕ ಭಾಗ್ಯವೂ ಜಾರಿಯಾಗಲಿ; ಕಥೆಗಾರ ಡಾ.ಅಮರೇಶ ನುಗಡೋಣಿ
ಮಕ್ಕಳ ಬೆಳೆವಣಿಗೆಗೆ ಉತ್ತಮ ವಾತಾವರಣ ಅವಶ್ಯ