ಪಿಟಿಸಿಎಲ್‌ ಜಾಗ ಅಕ್ರಮ ಮಾರಾಟ ಪ್ರಶ್ನಿಸ್ಬಹುದು: ಕೋರ್ಟ್‌

KannadaprabhaNewsNetwork |  
Published : Oct 27, 2025, 12:15 AM IST
Karnataka high court

ಸಾರಾಂಶ

ಕರ್ನಾಟಕ ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ವರ್ಗಗಳ (ಕೆಲ ಭೂಮಿಗಳ ವರ್ಗಾವಣೆ ನಿಷೇಧ-ಪಿಟಿಸಿಎಲ್‌) ಕಾಯ್ದೆಯಡಿ ಮಂಜೂರಾದ ಜಮೀನು ಬೇರೊಬ್ಬರಿಗೆ ವರ್ಗಾವಣೆ/ಮಾರಾಟ ಮಾಡುವುದು ಅಕ್ರಮ ಹಾಗೂ ಅನೂರ್ಜಿತವೆಂದು ಪುನರುಚ್ಚರಿಸಿರುವ ಹೈಕೋರ್ಟ್‌

ವೆಂಕಟೇಶ್‌ ಕಲಿಪಿ

  ಬೆಂಗಳೂರು :  ಕರ್ನಾಟಕ ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ವರ್ಗಗಳ (ಕೆಲ ಭೂಮಿಗಳ ವರ್ಗಾವಣೆ ನಿಷೇಧ-ಪಿಟಿಸಿಎಲ್‌) ಕಾಯ್ದೆಯಡಿ ಮಂಜೂರಾದ ಜಮೀನು ಬೇರೊಬ್ಬರಿಗೆ ವರ್ಗಾವಣೆ/ಮಾರಾಟ ಮಾಡುವುದು ಅಕ್ರಮ ಹಾಗೂ ಅನೂರ್ಜಿತವೆಂದು ಪುನರುಚ್ಚರಿಸಿರುವ ಹೈಕೋರ್ಟ್‌, ಇಂಥ ಜಮೀನಿನ ಅಕ್ರಮ ವರ್ಗಾವಣೆ ಕುರಿತು ಕಾನೂನು ಕ್ರಮ ಜರುಗಿಸುವಂತೆ ಕೋರಿ ಲಿಖಿತವಾಗಿ ಅರ್ಜಿ ಸಲ್ಲಿಸಲು ಅಥವಾ ದೂರು ನೀಡಿ ವಿಚಾರಣೆಗೆ ಕೋರಲು ಯಾವುದೇ ಆಸಕ್ತ ವ್ಯಕ್ತಿಗೂ ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು ಪೂರ್ವ ತಾಲೂಕಿನ ವರ್ತೂರು ಹೋಬಳಿಯ ರಾಮಗೊಂಡನಹಳ್ಳಿ ಗ್ರಾಮದ ಸರ್ವೇ ನಂಬರ್‌ 114ರಲ್ಲಿನ 2 ಎಕರೆ 4 ಗುಂಟೆ ಜಾಗ ಪಿಟಿಸಿಎಲ್‌ ಕಾಯ್ದೆಯಡಿ 1950ರ ಪೂರ್ವದಲ್ಲಿ ಸರ್ಕಾರದಿಂದ ಮಂಜೂರಾಗಿರುವ ಪೂಜಿಗ ಎಂಬುವವರ ಕಾನೂನುಬದ್ಧ ವಾರಸುದಾರರ ಹೆಸರಿಗೆ ಪುನರ್‌ ಸ್ಥಾಪಿಸಲು ನಗರ ಜಿಲ್ಲಾಧಿಕಾರಿ 2022ರ ಅ.31ರಂದು ಆದೇಶ ಹೊರಡಿಸಿದ್ದರು. ಈ ಆದೇಶ ರದ್ದು ಕೋರಿ ಬೆಂಗಳೂರು ತಾವರೆಕೆರೆ ನಿವಾಸಿ ಎ.ವಿಜಯ್‌ ಕುಮಾರ್‌ ಎಂಬುವವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿ, ವಿವಾದಿತ ಜಮೀನನ್ನು ಜಿಲ್ಲಾಧಿಕಾರಿಯ ಪೂರ್ವಾನುಮತಿ ಪಡೆದು ಪೂಜಿಗ ಅವರ ಕಾನೂನುಬದ್ಧ ವಾರಸುದಾರರರಿಂದ ಖರೀದಿಸಿದ್ದೇನೆ ಎಂದು ಆಕ್ಷೇಪಿಸಿದ್ದರು.

ಸರ್ಕಾರದಿಂದ ಮಂಜೂರಾದ ಜಮೀನು ಯಾವುದೇ ವರ್ಗಾವಣೆ ನಿಷೇಧ

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರ ಪೀಠ, ಪಿಟಿಸಿಎಲ್‌ ಕಾಯ್ದೆಯ ಸೆಕ್ಷನ್‌ 4 ಮತ್ತು 4(2) ಅನ್ವಯ ಎಸ್‌ಸಿ-ಎಸ್‌ಟಿ ವರ್ಗದವರಿಗೆ ಸರ್ಕಾರದಿಂದ ಮಂಜೂರಾದ ಜಮೀನು ಯಾವುದೇ ವರ್ಗಾವಣೆ ನಿಷೇಧಿಸುತ್ತದೆ. ಸೆಕ್ಷನ್‌ 4(1) ಹಾಗೂ (2) ಪ್ರಕಾರ ಸಿವಿಲ್ ನ್ಯಾಯಾಲಯದ ತೀರ್ಪು ಜಾರಿ ಹಾಗೂ ಯಾವುದೇ ಇತರ ಪ್ರಾಧಿಕಾರದ ಯಾವುದೇ ಆದೇಶದ ಮೂಲಕ ಮಂಜೂರಾದ ಯಾವುದೇ ಜಮೀನಿನ ಮಾರಾಟ ಸಹ ಅಕ್ರಮ. ಕಾಯ್ದೆಯ ಸೆಕ್ಷನ್ 5(1) ರಲ್ಲಿ ಅಡಿ ಎಸ್‌ಟಿ-ಎಸ್‌ಟಿ ಸಮುದಾಯದವರಿಗೆ ಮಂಜೂರಾದ ಜಮೀನಿನ ವರ್ಗಾವಣೆ/ಮಾರಾಟದ ಕುರಿತು ಯಾವುದೇ ಆಸಕ್ತ ವ್ಯಕ್ತಿ ಸಹ ಲಿಖಿತ ಮಾಹಿತಿ ಮೇರೆಗೆ ಅರ್ಜಿ ಸಲ್ಲಿಸಬಹುದು. ಆ ಬಗ್ಗೆ ವಿಚಾರಣೆ ನಡೆಸುವ ಅಧಿಕಾರ ಉಪ ವಿಭಾಗಾಧಿಕಾರಿ ಹೊಂದಿರುತ್ತಾರೆ ಎಂದು ಪೀಠ ಹೇಳಿದೆ.

ಜೊತೆಗೆ, ಇಂತಹ ಪ್ರಕರಣದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವ ಅಧಿಕಾರ ಸಹ ಉಪ ವಿಭಾಗಾಧಿಕಾರಿಗೆ ಇರುತ್ತದೆ. ಮಂಜೂರಾದ ಜಮೀನು ಅಕ್ರಮ ವರ್ಗಾವಣೆಯಾಗಿರುವುದು ದೃಢಪಟ್ಟರೆ, ಆ ಜಮೀನಿನಲ್ಲಿ ಸ್ವಾಧೀನದಲ್ಲಿ ಇರುವವರನ್ನು ತೆರವುಗೊಳಿಸಲು ಸಹ ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಬಹುದು. ಸೆಕ್ಷನ್‌ 5(3) ಹೇಳುವ ಪ್ರಕಾರ ಕಾಯ್ದೆಯಡಿ ಮಂಜೂರು ಮಾಡಲಾದ ಭೂಮಿಗಳು ಮೂಲ ಮಂಜೂರು ಪಡೆದವರು ಅಥವಾ ಅವರ ಕಾನೂನುಬದ್ಧ ಉತ್ತರಾಧಿಕಾರಿ ಹೊರತುಪಡಿಸಿ ಬೇರೆ ವ್ಯಕ್ತಿಯ ಸ್ವಾಧೀನದಲ್ಲಿದ್ದರೆ, ಅದನ್ನು ಪುನರ್‌ ಸ್ಥಾಪಿಸಬೇಕು. ಮಂಜೂರಾದವರಲ್ಲದೆ ಬೇರೊಬ್ಬ ವ್ಯಕ್ತಿ ಭೂಮಿಯನ್ನು ವರ್ಗಾವಣೆಯ ಮೂಲಕ ಸ್ವಾಧೀನಪಡಿಸಿಕೊಂಡಿದ್ದರೆ, ಅದು ಅನೂರ್ಜಿತವಾಗುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಜಮೀನಿನ ವರ್ಗಾವಣೆ ಅನೂರ್ಜಿತ

ಪ್ರಕರಣದಲ್ಲಿ ಬೆಂಗಳೂರು ವಿಶೇಷ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯಿಂದ ಮಾಹಿತಿ ತರಿಸಿಕೊಂಡು ಪರಿಶೀಲಿಸಿದ್ದಾರೆ. ದಾಖಲೆಗಳ ಪ್ರಕಾರ ಅರ್ಜಿದಾರರು ಈ ಜಮೀನು ಖರೀದಿಸಲು ವಿಶೇಷ ಜಿಲ್ಲಾಧಿಕಾರಿಗಳಿಂದ ಪಿಟಿಸಿಎಲ್‌ ಕಾಯ್ದೆ ಸೆಕ್ಷನ್‌ 4(2) ಅಡಿ ಪೂರ್ವಾನುಮತಿ ಪಡೆದಿದ್ದೇನೆ ಎಂಬುದು ಸುಳ್ಳು. ಹಾಗಾಗಿ ಈ ಜಮೀನಿನ ವರ್ಗಾವಣೆ ಅನೂರ್ಜಿತವಾಗಲಿದೆ ಎಂದು ಪೀಠ ಹೇಳಿದೆ.

ಪಿಟಿಸಿಎಲ್‌ ಕಾಯ್ದೆಯ ಸೆಕ್ಷನ್‌ 5 ಅಡಿ ಯಾವುದೇ ಆಸಕ್ತ ವ್ಯಕ್ತಿ ಕಾಯ್ದೆಯಡಿ ಮಂಜೂರಾದ ಜಮೀನಿನ ವರ್ಗಾವಣೆ ವಿರುದ್ಧ ಅರ್ಜಿ ಸಲ್ಲಿಸಬಹುದಾಗಿದೆ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದ ಮುನಿರಾಜು ಅವರು ಪೂಜಿಗ ಅವರ ಕಾನೂನುಬದ್ಧ ವಾರಸುದಾರರೇ ಅಥವಾ ಮತ್ತೊಬ್ಬ ವಾರಸುದಾರರು ಅರ್ಜಿದಾರ ವಿಜಯ್‌ ಕುಮಾರ್‌ಗೆ ಜಮೀನು ಮಾರಾಟ ಮಾಡಿದ್ದಾರೆ ಎಂಬ ಬಗ್ಗೆ ಆಳವಾಗಿ ವಿಚಾರಿಸುವ ಅಗತ್ಯವಿಲ್ಲ. ಮುನಿರಾಜು ಅವರ ದೂರು ಆಧರಿಸಿ ಜಿಲ್ಲಾಧಿಕಾರಿಯವರು ಪ್ರಕರಣದಲ್ಲಿ ಪೂಜಿಗ ಅವರ ಕಾನೂನುಬದ್ಧ ವಾರಸುದಾರರು ಯಾರು ಎಂದು ಗುರುತಿಸಿ, ಅವರ ಹೆಸರಿಗೆ ಜಮೀನು ಪುನರ್‌ಸ್ಥಾಪಿಸಲು ವಿಚಾರಣೆ ನಡೆಸುವಂತೆ ತಹಸೀಲ್ದಾರ್‌ಗೆ ಆದೇಶಿಸಿರುವುದು ಸೂಕ್ತವಾಗಿದೆ ಎಂದು ತಿಳಿಸಿದ ಪೀಠ ಅರ್ಜಿ ವಜಾಗೊಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!