ಹುಬ್ಬಳ್ಳಿ: ನೇಕಾರ ಸಮುದಾಯದ ಸ್ಥಿತಿಗತಿ ದಾಖಲಿಕರಣಕ್ಕಾಗಿ ಒಕ್ಕೂಟದಿಂದ ಪ್ರತ್ಯೇಕ ಜಾತಿ ಗಣತಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಈ ಸಮೀಕ್ಷೆ ನಡೆಯಲಿದೆ ಎಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್. ಸೋಮಶೇಖರ್ ತಿಳಿಸಿದರು.
ಇಲ್ಲಿನ ನವನಗರದ ಗಣೇಶ ಪ್ರಸಾದ ಸಭಾ ಭವನದಲ್ಲಿ ಭಾನುವಾರ ಕುರುಹಿನಶೆಟ್ಟಿ (ನೇಕಾರ) ಸಮಾಜ ಅಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ತೃತೀಯ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆ ಮತ್ತು ಧಾರವಾಡ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಜಾತಿ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.ಈಚೆಗೆ ಮಂಡಿಸಲಾದ ಕಾಂತರಾಜು ವರದಿಯಲ್ಲಿ ರಾಜ್ಯದಲ್ಲಿ ನೇಕಾರ ಸಮಾಜದವರು 9.28 ಲಕ್ಷ ಜನರಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ, ವಾಸ್ತವವಾಗಿ ರಾಜ್ಯದಲ್ಲಿ 45ರಿಂದ 50 ಲಕ್ಷ ಜನಸಂಖ್ಯೆಯಿದೆ. ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಹೊಸ ಆ್ಯಪ್ ಬಿಡುಗಡೆ ಮಾಡಿ ಸ್ಥಳೀಯ ಅಧ್ಯಕ್ಷರಿಗೆ ಅಲ್ಲಿನ ನಮ್ಮ ಸಮುದಾಯದ ಪ್ರತಿಯೊಂದು ಮನೆಗಳ ಸಮೀಕ್ಷೆ ಮಾಡಿ, ಸರ್ಕಾರದ ಗಮನಕ್ಕೆ ತರಲಾಗುವುದು. ಇದಕ್ಕೆ ಜಿಲ್ಲೆಯ ಸಮಾಜ ಬಾಂಧವರು ಬೆಂಬಲಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಬಿ.ಎಸ್. ಬಾವೂರ 2024 ರಲ್ಲಿ ನಡೆದ ಸರ್ವಸದಸ್ಯರ ಸಭೆಯ ನಿರ್ಣಯ ಮಂಡಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಆರ್. ಗುಡ್ಡಾನವರ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಎಸ್.ಬಿ. ದಿಬ್ಬದಮನಿ 2024-25 ನೇ ಸಾಲಿನ ಅಢಾವೆ ಪತ್ರಿಕೆ ಮಂಡಿಸಿ ಅನುಮೋದನೆ ಪಡೆದರು. ಇದೇ ವೇಳೆ ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಈ ವೇಳೆ ದೇವಾಂಗ ಸಮಾಜದ ರಾಜ್ಯಾಧ್ಯಕ್ಷ ರವೀಂದ್ರ ಕಲಬುರ್ಗಿ, ಬೆಳಗಾವಿ ವಿಭಾಗದ ಕುರುಹಿನಶೆಟ್ಟಿ ಕೇಂದ್ರ ಸಂಘದ ಉಪಾಧ್ಯಕ್ಷ ಎಂ.ಪಿ. ಶಿವಕುಮಾರ್, ಧಾರವಾಡ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಗೌರವಾಧ್ಯಕ್ಷ ಎಂ.ಬಿ. ರೋಣದ, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ರವೀಂದ್ರ ಹರ್ತಿ, ನವನಗರ ನೇಕಾರ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ವಿ.ಬಿ. ಚವಡಿ, ಉಪಾಧ್ಯಕ್ಷ ಕೆ.ಎಸ್. ಡೊಳ್ಳಿನ, ಮಹಿಳಾ ವಿಭಾಗದ ಜಿಲ್ಲಾ ಅಧ್ಯಕ್ಷೆ ಮಾಲಾ ಪಾಗಿ ಸೇರಿದಂತೆ ಹಲವರಿದ್ದರು. ನಂದಿನಿ ಕೋಳಿವಾಡ ಹಾಗೂ ಗೀತಾ ಓಂಕಾರಿ ನಿರೂಪಿಸಿದರು.