ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ಬರುವ ಪ್ರವಾಸಿಗರು ಐತಿಹಾಸಿಕ ಸ್ಮಾರಕಗಳ ಮೇಲೆ ಏರಿ ಫೋಟೋಗಳಿಗೆ ಪೋಸು ನೀಡುವುದು, ರೀಲ್ಸ್ ಮಾಡಿ ಹುಚ್ಚಾಟ ಮೆರೆಯುವುದು ನಡೆಯುತ್ತಲೇ ಸಾಗಿದೆ.
ದೀಪಾವಳಿಯಿಂದ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಹಂಪಿಗೆ ಆಗಮಿಸಿದ್ದರು. ಅ. 20ರಿಂದ ಅ. 26ರ ವರೆಗೆ ಅಂದಾಜು ಐದೂವರೆ ಲಕ್ಷದಷ್ಟು ದೇಶ, ವಿದೇಶಿ ಪ್ರವಾಸಿಗರು ಹಂಪಿ ಸ್ಮಾರಕಗಳನ್ನು ವೀಕ್ಷಿಸಿದ್ದಾರೆ. ಅದರಲ್ಲೂ ಕೆಲ ಪ್ರವಾಸಿಗರು ಹಂಪಿ ಸ್ಮಾರಕಗಳ ಮೇಲೆ ಏರಿ ಹುಚ್ಚಾಟವೂ ಮೆರೆದಿದ್ದಾರೆ. ಇನ್ನು ಭದ್ರತೆ ಕಣ್ಗಾವಲಿನಲ್ಲಿರುವ ಕಮಲ ಮಹಲ್ ಸ್ಮಾರಕವನ್ನು ಮುಟ್ಟುವುದು, ಈ ಸ್ಮಾರಕದಲ್ಲಿ ಕುಳಿತು ಫೋಟೋ ತೆಗೆಸಿಕೊಳ್ಳುವ ಚಾಳಿಯೂ ಮುಂದುವರಿದಿದೆ. ಇನ್ನು ನೀರಿನ ಬಾಟಲಿಗಳನ್ನು ಎಲ್ಲೆಂದರಲ್ಲಿ ಪ್ರವಾಸಿಗರು ಬಿಸಾಡುತ್ತಿದ್ದಾರೆ.
ಹಂಪಿ ಹೇಮಕೂಟ ಪ್ರದೇಶದ ಸ್ಮಾರಕದ ಮೇಲೆ ಯುವಕರ ಗುಂಪೊಂದು ಏರಿ ಫೋಟೋ ತೆಗೆಸಿಕೊಂಡಿದೆ. ಹಂಪಿಯಲ್ಲಿ ಸ್ಮಾರಕಗಳ ಮೇಲೆ ಏರಿ ಯುವಕರು ಹುಚ್ಚಾಟ ಮೆರೆದರೂ ಅವರಿಗೆ ಲಗಾಮು ಹಾಕುವ ಕಾರ್ಯ ಮಾತ್ರ ಆಗುತ್ತಿಲ್ಲ. ಪ್ರವಾಸಿಗರಿಗೆ ನೀತಿ ಹೇಳಬೇಕಾದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತ್ರ ತೆಪ್ಪಗಾಗುತ್ತಿದ್ದಾರೆ.ಇನ್ನೊಂದೆಡೆ ಹಂಪಿ ಪ್ರಾಧಿಕಾರ ಇದ್ದರೂ ಇಲ್ಲದಂತಾಗಿದೆ. ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳ ಅಧಿಕಾರಿಗಳು ಕೂಡ ಸ್ಮಾರಕಗಳ ಸಂರಕ್ಷಣೆಯತ್ತ ಚಿತ್ತ ಹರಿಸದೇ ತಮ್ಮ ಆದ್ಯ ಕರ್ತವ್ಯದಿಂದ ವಿಮುಖರಾಗುತ್ತಿದ್ದಾರೆ. ಹಾಗಾಗಿ ಹಂಪಿಗೆ ಬರುವ ಪ್ರವಾಸಿಗರಿಗೆ ನೀತಿ, ನಿಯಮ, ಕಾಯ್ದೆಗಳ ಪರಿಜ್ಞಾನ ಇಲ್ಲದೆ ಸ್ಮಾರಕಗಳ ಮೇಲೇರಿ ಹುಚ್ಚಾಟ ಮೆರೆಯುವಂತಾಗಿದೆ.
ಹಂಪಿಗೆ ಬರುವ ಪ್ರವಾಸಿಗರು ಸ್ಮಾರಕಗಳ ಮೇಲೆ ಏರಿ ಹುಚ್ಚಾಟ ಮೆರೆಯದಂತೆ ಪೊಲೀಸರನ್ನು ಬಳಸಿಕೊಂಡು ಜಾಗೃತಿ ಮೂಡಿಸಲಾಗುವುದು. ಇನ್ನು ಸ್ಮಾರಕಗಳು, ಸಪ್ತಸ್ವರ ಮಂಟಪದ ಕಂಬಗಳನ್ನು ಮುಟ್ಟುವುದು ಸೇರಿದಂತೆ ಸ್ಮಾರಕಗಳಿಗೆ ಧಕ್ಕೆಯನ್ನುಂಟು ಮಾಡದಂತೆ ಜಾಗೃತಿ ಮೂಡಿಸಲಾಗುವುದು ಎನ್ನುತ್ತಾರೆ ಎಸ್ಪಿ ವಿಜಯನಗರ ಎಸ್. ಜಾಹ್ನವಿ.