ಹುಬ್ಬಳ್ಳಿ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೋರ್ವ ಕಾಂಗ್ರೆಸ್ ಪ್ರತಿನಿಧಿ, ಪಕ್ಷವೆಂದು ಬಂದಾಗ ಪಕ್ಷದ ಅಭ್ಯರ್ಥಿಗಳ ಪರವಾಗಿ ನಾನು ಹಿತಕಾಯಬೇಕಾಗಿರುವುದು ನನ್ನ ಕರ್ತವ್ಯ, ಗುರುವಾರ ಬೆಳಗಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಾನು ಪಕ್ಷದ ಪ್ರತಿನಿಧಿಯಾಗಿ ಹೇಳಿಕೆ ನೀಡಿದ್ದೇನೆ ಎಂದರು. ಅವರಷ್ಟೆ ಅಲ್ಲ ರಾಜ್ಯದ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿ ಎಂಬುದು ನನ್ನ ಇಚ್ಛೆಯಾಗಿದೆ ಎಂದರು.
ನೇಹಾ ತಂದೆಯಾಗಿ ನನ್ನ ಹೋರಾಟ ಪಕ್ಷಾತೀತವಾಗಿದ್ದು, ಈ ಹೋರಾಟಕ್ಕೂ ಮತ್ತು ನನ್ನ ರಾಜಕೀಯ ಹೇಳಿಕೆಗಳಿಗೂ ಯಾವುದೇ ಸಂಬಂಧವಿಲ್ಲ, ನನ್ನ ಮಗಳ ಸಾವಿಗೆ ನ್ಯಾಯ ಸಿಗುವವರೆಗೂ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.ಈ ಹಿಂದೆ ಮುಖ್ಯಮಂತ್ರಿ ಭೇಟಿಯಾದ ಸಂದರ್ಭದಲ್ಲಿ ಕೆಲವು ಬೇಡಿಕೆ ಇಟ್ಟಿದ್ದೇನೆ. ತೀವ್ರಗತಿಯಲ್ಲಿ ಪ್ರಕರಣದ ತನಿಖೆ ನಡೆಸುವಂತೆ ಒತ್ತಾಯಿಸಿದ್ದೆ, ಸರ್ಕಾರ ಈ ತನಿಖೆಯನ್ನು ಸಿಐಡಿಗೆ ವಹಿಸಿದೆ. ಈ ಹಿಂದೆ ನಾ ನೀಡಿದ ದೂರಿನಲ್ಲಿ ಕೊಲೆಯ ಹಿಂದೆ ಇನ್ನೂ ಹಲವರು ಭಾಗಿಯಾಗಿರುವ ಕುರಿತು ಕೆಲವರ ಹೆಸರನ್ನು ತಿಳಿಸಿದ್ದೆ. ಆದರೆ, ಈವರೆಗೆ ಆರೋಪಿಯೋರ್ವನನ್ನು ಮಾತ್ರ ಬಂಧಿಸಲಾಗಿದೆ. ಉಳಿದವರ ಬಂಧನವಾಗಲಿ ಅಥವಾ ತನಿಖೆಯಾಗಲಿ ನಡೆದಿಲ್ಲ. ಇದು ನನಗೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದರು.