ಮುಂದಿನ ಐದು ವರ್ಷ ನಾನೇ ಸಿಎಂ: ಸಿದ್ದರಾಮಯ್ಯ ಸ್ಪಷ್ಟನೆ

KannadaprabhaNewsNetwork |  
Published : Jul 02, 2025, 11:53 PM IST
   ಸಿಕೆಬಿ-2 ಮತ್ತು 3 ನಂದಿಯ ಭೋಗ ನಂದೀಶ್ವರ ದೇವಾಲಯದಲ್ಲಿ  ಭೋಗನಂದೀಶ್ವರನಿಗೆ ಪೂಜೆ ಸಲ್ಲಿಸಿದ ಸಿ.ಎಂ.ಸಿದ್ದರಾಮಯ್ಯ      ಸಿಕೆಬಿ-4 ನಂದಿಯ ಭೋಗ ನಂದೀಶ್ವರ ದೇವಾಲಯದಲ್ಲಿ ಸಚಿವರು ಶಾಸಕರೊಂದಿಗೆ ಪೋಟೋ ತೆಗೆಸಿಕೊಂಡ ಸಿ.ಎಂ.ಸಿದ್ದರಾಮಯ್ಯ ಸಿಕೆಬಿ-5  ನಂದಿಯಲ್ಲಿ ಸುದ್ದಿಗಾರರೊಂದಿಗೆ ಸಿ.ಎಂ.ಸಿದ್ದರಾಮಯ್ಯ ಮಾತನಾಡಿದರು | Kannada Prabha

ಸಾರಾಂಶ

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಚಿವರಾಗುವ ಅಧಿಕಾರವಿದೆ. ಸಚಿವ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. 142 ಜನ ನಮ್ಮ ಪಕ್ಷದವರಿದ್ದಾರೆ, 34 ಜನರನ್ನು ಮಾತ್ರ ಸಚಿವರನ್ನಾಗಿಸಬಹುದು, ಎಲ್ಲರನ್ನು ಮಾಡಲಾಗುವುದಿಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸರ್ಕಾರದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಬಿಜೆಪಿ ಹಗಲುಗನಸು ಕಾಣುತ್ತಿದೆ. ಬಿಜೆಪಿಯವರು ಸುಳ್ಳನ್ನು ಮಾತ್ರ ನಂಬುತ್ತಾರೆ, ಸತ್ಯವನ್ನಲ್ಲ. ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿರುವ ಬಿಜೆಪಿಯವರಿಗೆ ಸತ್ಯ ಹೇಳಿ ಗೊತ್ತೇ ಇಲ್ಲ. ಅವರು ನಂಬುತ್ತಾರೋ ಬಿಡುತ್ತಾರೋ ನಾವೆಲ್ಲಾ ಒಟ್ಟಾಗಿದ್ದೇವೆ. ಮುಂದಿನ ಐದು ವರ್ಷ ನಾನೇ ಸಿಎಂ. ನಮ್ಮ ಸರ್ಕಾರ ಬಂಡೆಯಂತೆ ಐದು ವರ್ಷ ಆಡಳಿತ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ನಂದಿಗಿರಿಧಾಮದಲ್ಲಿ ಸಂಪುಟ ಸಭೆ ಹಿನ್ನೆಲೆ ನಂದಿಯ ಭೋಗ ನಂದೀಶ್ವರ ದೇವಾಲಯಕ್ಕೆ ಸಚಿವರು, ಶಾಸಕರೊಂದಿಗೆ ಆಗಮಿಸಿ ಭೋಗನಂದೀಶ್ವರನಿಗೆ ಪೂಜೆ ಸಲ್ಲಿಸಿದ ನಂತರ ನಂದಿ ಬೆಟ್ಟಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಸಿಎಂ, ನೀರಾವರಿ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಏನು ಮಾಡಿದ್ದಾರೆ. ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿತ್ತು. ಎಚ್. ಡಿ. ಕುಮಾರಸ್ವಾಮಿಯವರು ಒಂದು ವರ್ಷ ಎರಡು ತಿಂಗಳು ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರದಲ್ಲಿದ್ದರು. ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರಲ್ಲದೇ, ಬರೀ ಸುಳ್ಳು ಹೇಳಿಕೊಂಡು ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಹೊಸಪೇಟೆಯಲ್ಲಿ ನಡೆದ ನಮ್ಮ ಸರ್ಕಾರದ 2 ವರ್ಷದ ಸಾಧನಾ ಸಮಾವೇಶದಲ್ಲಿ ಮಳೆಯಿದ್ದರೂ ಸುಮಾರು ಮೂರು ಲಕ್ಷಕ್ಕಿಂತ ಹೆಚ್ಚು ಜನ ಸೇರಿದ್ದರು. ಜನರು ಸರ್ಕಾರದ ಪರವಾಗಿ ಸುಮ್ಮನೆ ಬರುತ್ತಾರೆಯೇ ಎಂದು ಪ್ರಶ್ನಿಸಿದರು.

ಐದು ವರ್ಷ ನಾನೇ ಮುಖ್ಯಮಂತ್ರಿ:

ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದೇನೆ ಎಂದು ಸ್ಪಷ್ಟಪಡಿಸಿದ ಸಿಎಂ, ನವೆಂಬರ್ ನಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರು ಇಳಿಯಲಿದ್ದಾರೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ನಮ್ಮ ಹೈಕಮಾಂಡ್ ಅಲ್ಲ. ಆರ್.ಅಶೋಕ್, ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಹೇಳಿದೆಲ್ಲಾ ಸತ್ಯವಲ್ಲ ಎಂದರು.

ಆನ್ ಲೈನ್ ಮೂಲಕ ಜಾತಿ ನಮೂದಿಸಬಹುದು:

ಜಾತಿ ಸಮೀಕ್ಷೆಯಲ್ಲಿ ತೊಂದರೆಗಳಾಗಿದ್ದರೆ ಆನ್ ಲೈನ್ ಮೂಲಕ ಜಾತಿ ನಮೂದಿಸಬಹುದು ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವುದಾದರೂ ಒಂದು ದಾರಿಯಲ್ಲಿ ಜಾತಿ ಹೇಳಿಕೊಳ್ಳಬೇಕು. ಸಮೀಕ್ಷೆ ಮಾಡುವವರು ಮನೆಗೆ ಬಂದಾಗ ಅಥವಾ ಶಿಬಿರದಲ್ಲಿ ಪರಿಶಿಷ್ಟರು ತಮ್ಮ ಜಾತಿ ಹೇಳಿಕೊಳ್ಳಬೇಕು. ಸಮೀಕ್ಷೆ ಮಾಡುವವರು ಮನೆ ಮನೆಗೆ ತೆರಳುತ್ತಿದ್ದಾರೆ ಎಂದರು.

ಸಚಿವ ಸ್ಥಾನ, ವರಿಷ್ಠರಿಂದ ಅಂತಿಮ ತೀರ್ಮಾನ:

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಚಿವರಾಗುವ ಅಧಿಕಾರವಿದೆ. ಸಚಿವ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. 142 ಜನ ನಮ್ಮ ಪಕ್ಷದವರಿದ್ದಾರೆ, 34 ಜನರನ್ನು ಮಾತ್ರ ಸಚಿವರನ್ನಾಗಿಸಬಹುದು, ಎಲ್ಲರನ್ನು ಮಾಡಲಾಗುವುದಿಲ್ಲ ಎಂದರು.

ರಾಜ್ಯದ ಎಲ್ಲಾ ಕಂದಾಯ ವಿಭಾಗಗಳಲ್ಲಿ ಸಚಿವ ಸಂಪುಟ ಸಭೆ:

ರಾಜ್ಯದ ಎಲ್ಲಾ ಕಂದಾಯ ವಿಭಾಗಗಳಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕೆಂದು ತೀರ್ಮಾನಿಸಿ ಗುಲ್ಬರ್ಗಾ, ಮೈಸೂರು, ಬೆಂಗಳೂರು ವಿಭಾಗಗಳಲ್ಲಿ ಸಂಪುಟ ಸಭೆ ನಡೆದಿದ್ದು, ಇನ್ನು ಕೆಲವೇ ದಿನಗಳಲ್ಲಿ ಬೆಳಗಾವಿ ಹಾಗೂ ವಿಜಯಪುರದಲ್ಲಿ ಕೂಡ ನಡೆಸಲಾಗುವುದು ಎಂದರು.

ಚಿಕ್ಕಬಳ್ಳಾಪುರದಲ್ಲಿ ಬೆಂಗಳೂರು ಕಂದಾಯ ವಿಭಾಗದ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ. ಬಜೆಟ್ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ಸಣ್ಣಪುಟ್ಟ ಕೆಲಸಗಳಿದ್ದರೆ ಮಾಡಿ ಕೊಡಲಾಗುವುದು ಎಂದರು.

ರಾಜ್ಯ ಸುಭೀಕ್ಷವಾಗಲಿ:

ರಾಜ್ಯದಲ್ಲಿ ಉತ್ತಮ ಮಳೆ- ಬೆಳೆಯಾಗಿ ಜನ ಸಂತೋಷದಿಂದಿರಲಿ, ಮಾನವೀಯ ಸಮಾಜ ನಿರ್ಮಾಣವಾಗುತ್ತ ಪ್ರಯತ್ನ ಮಾಡಲಿ ಎಂದು ಭೋಗನಂದೀಶ್ವರನಲ್ಲಿ ಪ್ರಾಥನೆ ಮಾಡಿದ್ದಾಗಿ ತಿಳಿಸಿದರು.

ಈ ವೇಳೆ ಸಚಿವರಾದ ಡಾ.ಎಂ.ಸಿ.ಸುಧಾಕರ್, ಜಿ.ಪರಮೇಶ್ವರ್, ಶಾಸಕರಾದ ಪ್ರದೀಪ್ ಈಶ್ವರ್,ಎಸ್.ಎನ್.ಸುಬ್ಬಾರೆಡ್ಡಿ, ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ