ಹೊಸದುರ್ಗಕ್ಕೆ ಏತ ನೀರಾವರಿ ಮೂಲಕ ನೀರು ತರುತ್ತೇನೆ

KannadaprabhaNewsNetwork |  
Published : Feb 13, 2025, 12:49 AM IST
ಪೋಟೋ, 12ಎಚ್‌ಎಸ್‌ಡಿ1: ಹೊಸದುರ್ಗದ ತಾಪಂ ಸಭಾಂಗಣದಲ್ಲಿ ಶಾಸಕ ಬಿಜಿ ಗೋವಿಂದಪ್ಪ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. | Kannada Prabha

ಸಾರಾಂಶ

ಹೊಸದುರ್ಗದ ತಾಪಂ ಸಭಾಂಗಣದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.

ತಾಪಂ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ಭರವಸೆ ಕನ್ನಡಪ್ರಭ ವಾರ್ತೆ ಹೊಸದುರ್ಗ

ವಿವಿಸಾಗರ ಜಲಾಶಯದ ಹಿನ್ನಿರಿನ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಚಿಸಿರುವ ಮೂವರು ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಲಿದ್ದು, ಹಿನ್ನೀರಿನ ರೈತರ ಸಮಸ್ಯೆ ಆಲಿಸಿ ಅಲ್ಲಿನ ಪರಿಸ್ಥಿಯ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಅಧಿಕಾರಿಗಳು ಭೇಟಿ ನೀಡಿದಾಗ ಹೆಚ್ಚುವರಿ ನೀರು ಸರಾಗವಾಗಿ ಹರಿಯಲು ಜಲಾಶಯದ ಕೋಡಿಯಲ್ಲಿ ಸ್ಪಿಲ್ಲರ್‌ ಗೇಟ್‌ ಅಳವಡಿಕೆ, ಜಲಾಶಯಕ್ಕೆ ಬರುವ ಹಳ್ಳಗಳಿಗೆ ನೀರಿನ ಅಳತೆ ಮಾಪನ ಅಳವಡಿಕೆ ಸೇರಿದಂತೆ ಭದ್ರಾ ಯೋಜನೆಯಿಂದ ಬಿಟ್ಟು ಹೊಗಿರುವ ಹಿನ್ನಿರಿನ ಲಕ್ಕಿಹಳ್ಳಿ. ಅತ್ತಿಮಗ್ಗೆ, ಜಿ.ಎನ್‌.ಕೆರೆ, ಮತ್ತೋಡು ಹಾಗೂ ಕಾರೇಹಳ್ಳಿ ಗ್ರಾಪಂ ವ್ಯಾಪ್ತಿಯ 17 ಕೆರೆಗಳಿಗೆ ಹಾಗೂ 29 ಸಾವಿರ ಎಕೆರೆ ಕೃಷಿ ಭೂಮಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸಲು ಬೇಕಾದ ಕ್ರಮಗಳ ಬಗ್ಗೆ ತಜ್ಞರ ತಂಡ ಸರ್ಕಾರ ವರದಿ ನೀಡಲಿದೆ ಎಂದು ಹೇಳಿದರು.

ಜಲಾಶಯ ಯಾವ ತಾಲೂಕಿನದ್ದು ಎನ್ನುವುದು ನನಗೆ ಮುಖ್ಯವಲ್ಲ. ನಾನು ಜಲಾಶಯದ ಬಗ್ಗೆ ಸಾಕಷ್ಠು ಹೇಳಿಕೆ ನೀಡಬಹುದು, ಅದೆಲ್ಲಾ ಕೇವಲ ಕಾಗದದ ಹೇಳಿಕೆಗಳಾಗುತ್ತವೆ ಆದರೆ ಸರ್ಕಾರ ರಚಿಸಿರುವ ಅಧಿಕಾರಿಗಳ ತಂಡ ಬಂದು ಸ್ಥಳ ಪರಿಶೀಲಿಸಿ ನೀಡುವ ವರದಿ ಮುಖ್ಯವಾಗುತ್ತದೆ. ಇದರಿಂದ ಯಾವ ಸರ್ಕಾರ ಬಂದರೂ ಯೋಜನೆ ಅನುಷ್ಠಾನಕ್ಕೆ ಸಹಕಾರಿಯಾಗುತ್ತದೆ ಎಂದರು.

*ಎಫ್‌ಡಿಎ ವಿರುದ್ಧ ಕ್ರಮ ಕೈಗೊಳ್ಳಿ: ನೋಂದಣಿ ಇಲಾಕೆ ಮೇಲಿನ ಚರ್ಚೆಯಲ್ಲಿ ಸಾಲ ಕೊಟ್ಟವರು ಸಾಲ ವಸೂಲಿ ಮಾಡುವುದೇ ಕಷ್ಠವಾಗಿರುವಾಗ ಅಡಮಾನ ಮಾಡಿರುವ ಜಮೀನಿಗೆ ಸಾಲ ಇಲ್ಲ ಎಂದು ಇಸಿ ಕೊಟ್ಟು ಮಾರಾಟಕ್ಕೆ ಸಹಕರಿಸಿರುವ ಎಫ್‌ಡಿಎ ಮೇಘನಾ ವಿರುದ್ಧ ಕ್ರಮ ಕೈಗೊಂಡು ಅವರನ್ನು ಅಮಾನತು ಪಡಿಸಿ ಎಂದು ಉಪ ನೊಂದಣಾಧಿಕಾರಿಗೆ ತಾಕೀತು ಮಾಡಿದ ಶಾಸಕರು, ನೀವು ಮಾಡುವ ತಪ್ಪಿನಿಂದ ಸಾಲ ಕೊಟ್ಟವರು ಏನು ಆಗಬೇಕು ನಿಮ್ಮ ಕೆಲಸದಲ್ಲಿ ಬೇಜವಬ್ದಾರಿತನ ಕಾಣುತ್ತಿದೆ ಅದನ್ನು ಸರಿ ಪಡಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

*ರೋಗದ ಮೂಲ ಕಂಡು ಹಿಡಿಯಿರಿ: ತಾಲೂಕಿನ ತೆಂಗು ಬೆಳಗೆ ತಗುಲಿರುವ ರೋಗ ಭಾಧೆಗೆ ಕಾರಣ ತಿಳಿಯುವಲ್ಲಿ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿ, ಬಬ್ಬೂರು ಫಾರಂನ ವಿಜ್ಞಾನಿಗಳು ಬರೀ ಹಳೇ ಕತೆ ಹೇಳುತ್ತಾರೆ. ಇದರಿಂದ ರೋಗಕ್ಕೆ ಮದ್ದು ತಿಗುತ್ತಿಲ್ಲ ಬೆಂಗಳೂರು ಅಥವಾ ಅರಸೀಕೆರೆಯ ಫಾರಂನಿಂದ ತಜ್ಞರನ್ನು ಕರೆಸಿ ರೋಗ ಭಾಧೆಗೆ ಕಾರಣ ತಿಳಿಯುವ ಕೆಲಸ ಮಾಡಿಸಿ ಎಂದು ತೋಟಕಾರಿಕೆ ಇಲಾಖೆ ಅಧಿಕಾರಿಗೆ ಸೂಚಿಸಿದರು.

ತೆಂಗಿಗೆ ತಗುಲಿರುವ ರೋಗ ನಿಯಂತ್ರಿಸಲು ಸರ್ಕಾರದಿಂದ ರೈತರಿಗೆ ಉಚಿತವಾಗಿ ಏನೂ ಕೊಟ್ಟರು ಪ್ರಯೋಜವಿಲ್ಲ. ಅಧಿಕಾರಿಗಳೇ ಈ ಬಗ್ಗೆ ಖುದ್ದು ಗಮನ ಹರಿಸಬೇಕು ಇಲ್ಲವಾದರೆ ಕೆಲವೇ ದಿನಗಳಲ್ಲಿ ತಾಲೂಕಿನಲ್ಲಿ ತೆಂಗು ಸಂಪೂರ್ಣವಾಗಿ ನಶಿಸಿ ಹೊಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ವೈದ್ಯರು ಕರ್ತವ್ಯದಲ್ಲಿರುತ್ತಿಲ್ಲ ಎಂದು ದೂರುಗಳು ಕೇಳಿ ಬರುತ್ತಿವೆ ಅದನ್ನು ಸರಿಪಡಿಸಿಕೊಳ್ಳಿ ಅಲ್ಲದೆ ಗರ್ಬಿಣಿಯರಿಗೆ ಹೆರಿಗೆ ನಂತರ ಪೋಷಕಾಂಶಗಳನ್ನು ನೀಡುವ ಬದಲು ಮುಂಚಿತವಾಗಿಯೇ ಸೂಕ್ತ ಪರಿಶೀಲನೆ ನಡೆಸಿ ಅಗತ್ಯ ಇರುವ ಪೋಷಕಾಂಶಗಳನ್ನು ನೀಡುವ ಮೂಲಕ ಆರೋಗ್ಯವಂತ ಮಗುವಿನ ಜನನಕ್ಕೆ ಏಕೆ ಕಾರಣವಾಗಬಾರದು ಎಂದರು.

ಆಸ್ಪತ್ರೆಯಲ್ಲಿ ಬೇಕಾಗಿರುವ ಸವಲತ್ತುಗಳ ಬಗ್ಗೆ ನಮ್ಮ ಗಮನಕ್ಕೆ ತಂದರೆ ಅದನ್ನು ಸರಿಪಡಿಸಬಹುದು ನಮಗೆ ಸಮಸ್ಯೆಯನ್ನೆ ಹೇಳದಿದ್ದರೆ ಅದನ್ನು ಪರಿಹಾರ ನೀಡುವವರು ಯಾರು ಎಂದು ತಾಲೂಕು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು.

ಸಭೆಯಲ್ಲಿ ತಾಪಂ ಇಒ ಸುನಿಲ್‌ ಕುಮಾರ್‌, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಇಸ್ಮಾಯಿಲ್‌, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ನಿರಂಜನಮೂರ್ತಿ, ಲೋಕೇಶಪ್ಪ, ಪದ್ಮನಾಭ ಸೇರಿ ತಾಲೂಕು ಮಟ್ಟದ ಅಧಿಕಾರಿಗಳೂ ಹಾಜರಿದ್ದರು.

PREV