ಕನ್ನಡಪ್ರಭ ವಾರ್ತೆ ಕೂಡ್ಲಿಗಿ
ಮುಸ್ಲಿಂ ಸಮುದಾಯಕ್ಕೆ ಶಾದಿಮಹಲ್ ನಿರ್ಮಿಸಿಕೊಡುವ ಭರವಸೆ ಕೊಟ್ಟಿದ್ದೇನೆ. ಖಂಡಿತವಾಗಿಯೂ ಅದನ್ನು ಈಡೇರಿಸುತ್ತೇನೆ ಎಂದು ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ ತಿಳಿಸಿದರು.ಶನಿವಾರ ಬೆಳಗ್ಗೆ ಪಟ್ಟಣದ ಹೊರವಲಯದ ಕೊಟ್ಟೂರು ರಸ್ತೆ ಸಮೀಪದಲ್ಲಿರುವ ಎರಡು ಈದ್ಗಾಕ್ಕೆ ತೆರಳಿ ಬಕ್ರೀದ್ ಹಬ್ಬದ ಮುಸ್ಲಿಂ ಸಮುದಾಯದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಮಾತನಾಡಿದರು.
ಕಳೆದ ವರ್ಷ ರಂಜಾನ್ ಹಬ್ಬದ ಸಂದರ್ಭ ಶಾದಿಮಹಲ್ ಬೇಡಿಕೆಯನ್ನು ಮುಸ್ಲಿಂ ಬಾಂಧವರು ಸಲ್ಲಿಸಿದ್ದರು. ಅದನ್ನು ಸಂಬಂಧಿಸಿದ ಇಲಾಖೆ ಸಚಿವರೊಂದಿಗೆ ಮಾತನಾಡಿದ್ದು, ಕೊಟ್ಟ ಮಾತು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಅದರಂತೆ ಪಟ್ಟಣದ ಅಭಿವೃದ್ಧಿಗೆ ಅನುದಾನ ತರುವ ಮೂಲಕ ಅಭಿವೃದ್ಧಿಗೆ ಹೆಜ್ಜೆ ಇಟ್ಟಿರುವುದಾಗಿ ಶಾಸಕರು ಹೇಳಿದರು.ಮಾಜಿ ಸಚಿವ ಎನ್.ಎಂ. ನಬೀ, ಈದ್ಗಾದ ಮೌಲಿಗಳಾದ ಅಖಿಲ್ ಮೌಲಿಸಾಬ್, ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಭಾಷಾಸಾಹೇಬ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶುಕೂರ್, ಮಾದಿಹಳ್ಳಿ ನಜೀರ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
ಬೆಳಗ್ಗೆ ಮುಸ್ಲಿಂ ಬಾಂಧವರು ಹಾಗೂ ಮದರಸಾದಲ್ಲಿರುವ ಮಕ್ಕಳು ಸಾಮೂಹಿಕವಾಗಿ ಕೊಟ್ಟೂರು ರಸ್ತೆ ಸಮೀಪದ ಎರಡು ಈದ್ಗಾಗಳಿಗೆ ತೆರಳಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಪ್ರೀತಿ, ವಿಶ್ವಾಸದಿಂದ ಹಬ್ಬ ಆಚರಿಸಿ:ಕಂಪ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಶನಿವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.ಇಲ್ಲಿನ ಮುದ್ದಾಪುರ ರಸ್ತೆಯ ವಿಜಯನಗರ ಕಾಲುವೆ ಬಳಿಯ ಖದಿಮ್ ಈದ್ಗಾ ಮೈದಾನದಲ್ಲಿ ಹಾಗೂ ಹೊಸಪೇಟೆ ಬೈಪಾಸ್ ರಸ್ತೆ ಬಳಿಯ ಈದ್ಗಾ ಮೈದಾನದಲ್ಲಿ ಶನಿವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಜರುಗಿತು. ಮುಸ್ಲಿಂ ಬಾಂಧವರು ಒಬ್ಬರಿಗೊಬ್ಬರು ಆಲಿಂಗಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.ಮುಸ್ಲಿಂ ಧರ್ಮಗುರು ಸೈಯ್ಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರುಫ್ ಆಜಂ ಸಾಹೇಬ್ ಸಜ್ಜಾದೆ ನಶೀನ್ (ಪೀಠಾಧಿಪತಿ)ದಿವಾನಖಾನೆ ಆಶೀರ್ವಚನ ನೀಡಿ, ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಹಬ್ಬವಾಗಿದೆ. ಪ್ರತಿಯೊಬ್ಬರೂ ಯಾವುದೇ ಜಾತಿ, ಧರ್ಮಗಳ ಬೇಧ-ಬಾವವಿಲ್ಲದೆ ಪ್ರೀತಿ, ವಿಶ್ವಾಸದಿಂದ ಒಂದಾಗಿ ಈ ಹಬ್ಬವನ್ನು ಆಚರಿಸಬೇಕು ಎಂದರು.ಈ ಸಂದರ್ಭ ಖದೀಮ್ ಈದ್ಗಾ(ಸುನ್ನಿ) ಕಮಿಟಿ ಅಧ್ಯಕ್ಷ ಬಿ.ಗೌಸ್‌ಬಾಷ, ಪ್ರಮುಖರಾದ ಕೆ.ಮೆಹಬೂಬ್, ಎಂ.ಮೆಹಮೂದ್, ಎಂ.ಶಬ್ಬೀರ್, ಅಬ್ದುಲ್ ವಾಹೀದ್, ಎಂ.ಹರ್ಷದ್, ಎಂ.ಹೊನ್ನೂರವಲಿ, ಗೆಜ್ಜೆಳ್ಳಿಬಾಷ, ಎಂ.ಉಸ್ಮಾನ್, ಅಖಾನಿ, ಗನಿಸಾಬ್, ಅಜೀಜ್‌ಸಾಬ್, ಕೆ.ಜಾಹಿದುಲ್ಲಾ, ಬಿ.ಜಾಫರ್ ಸೇರಿ ಹಾಫೀಜ್‌ಗಳು, ಎಲ್ಲಾ ಮಸೀದಿಗಳ ಮುತುವಲ್ಲಿಗಳು ಪಾಲ್ಗೊಂಡಿದ್ದರು.
ಹೊಸಪೇಟೆ ಬೈಪಾಸ್ ರಸ್ತೆಯ ಇದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯ ವೇಳೆ ಶಿರಾಜ್ ಹಾಫಿಸಾಬ್, ಹಾಜಿ ಜಿಯಾವುದ್ದೀನ್ ಸೇರಿ ಕಂಪ್ಲಿ ಕೋಟೆಯ ಮಸೀದಿಗಳ ಮುತುವಲ್ಲಿಗಳು, ಈದ್ಗಾ ಕಮಿಟಿಯ ಪದಾಧಿಕಾರಿಗಳು, ಮುಸ್ಲಿಂ ಸಮುದಾಯದ ಮುಖಂಡರು ಇದ್ದರು.