ಕೊಪ್ಪಳ:
ನೆಲಮಂಗಲದ ತೈಲೇಶ್ವರ ಗಾಣಿಗರ ಮಹಸಂಸ್ಥಾನ ಮಠದ ಪೂರ್ಣಾನಂದಪೂರಿ ಸ್ವಾಮೀಜಿ ಅವರು ಅನುದಾನ ಬಿಡುಗಡೆಗೆ ನಾನು ಕಮಿಷನ್ ಕೇಳಿದ್ದೇನೆಂದು ಆರೋಪಿಸಿದ್ದು ಅದನ್ನು ಸಾಬೀತುಪಡಿಸಿದರೆ ರಾಜಕೀಯ ಬಿಡುವೆ ಎಂದು ಸಚಿವ ಶಿವರಾಜ ತಂಗಡಗಿ ಸವಾಲು ಹಾಕಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಅವರು ಮಾಡಿರುವ ಆರೋಪ ನಿರಾಧಾರ ಎಂದರು.
ಹಣಕಾಸು ಇಲಾಖೆಯ ಸೂಚನೆ ಮೇರೆಗೆ ಈಗಾಗಲೇ ಹಣ ಬಿಡುಗಡೆಗೆ ಕ್ರಮವಹಿಸಲಾಗಿದೆ. ಆದರೂ ವಿನಾಕಾರಣ ಆರೋಪ ಮಾಡಿದ್ದಾರೆ. ಈ ರೀತಿ ಆರೋಪ ಮಾಡುವುದನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಕಾನೂನು ರೀತಿಯಲ್ಲಿ ಕ್ರಮ ವಹಿಸುವ ಬಗ್ಗೆ ಚಿಂತನೆ ನಡೆಸಿದ್ದು ವಕೀಲರೊಂದಿಗೆ ಚರ್ಚಿಸಿ ಮಾನಹಾನಿ ಕೇಸ್ ಸಹ ದಾಖಲಿಸುತ್ತೇನೆ ಎಂದರು.ಕೇಳಿದ ತಕ್ಷಣ ಹಣ ನೀಡಬೇಕು ಎನ್ನುವ ಧೋರಣೆ ಅವರದು. ಆದರೆ, ಅದಕ್ಕೂ ನೀತಿ, ನಿಯಮಗಳು ಇರುತ್ತವೆ. ಅದರಂತೆ ಪ್ರಕ್ರಿಯೇ ನಡೆಯುತ್ತದೆ ಎಂದರು.
ಸಿಎಂ ಬದಲಾವಣೆ ಕುರಿತು ಮಾತನಾಡಲ್ಲ:ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತನಾಡದಂತೆ ಹೈಕಮಾಂಡ್ ಸೂಚಿಸಿದ್ದು ನಾನು ಸಹ ಆ ಕುರಿತು ಮಾತನಾಡುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಈಗಾಗಲೇ ಸಿಎಂ ಬದಲಾವಣೆ ಕುರಿತು ಮಾತನಾಡಿದ ಶಾಸಕರಿಗೆ ಹೈಕಮಾಂಡ್ ನೋಟಿಸ್ ನೀಡಿದೆ. ಸಿಎಂ ಬದಲಾವಣೆ ಕುರಿತು ನಾನು ಏನೂ ಹೇಳುವುದಿಲ್ಲ. ಹೈಕಮಾಂಡ್ ಅದನ್ನು ನೋಡಿಕೊಳ್ಳುತ್ತದೆ. ಹಿರಿಯ ಸಚಿವರಾದ ರಾಜಣ್ಣ ಹೇಳಿರುವ ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ನನಗೇನೂ ಗೊತ್ತಿಲ್ಲ. ಅವರನ್ನೇ ಕೇಳಿಕೊಳ್ಳಿ ಎಂದರು.ಸಿಎಂ ಸಿದ್ದರಾಮಯ್ಯ ಅವರನ್ನು ಡಿಮೋಷನ್ ಮಾಡಲಾಗುತ್ತಿದೆ ಎಂದು ಬಿಜೆಪಿಯವರು ಹೇಳುವುದಲ್ಲ. ಸಿಎಂ, ಡಿಸಿಎಂ ಅವರನ್ನು ಪ್ರಮೋಷನ್ ಮಾಡುವುದು, ಡಿಮೋಷನ್ ಮಾಡುವುದು ರಾಜ್ಯದ ಜನತೆಯೇ ಹೊರತು ಬಿಜೆಪಿಯವರಲ್ಲ ಎಂದು ತಿರುಗೇಟು ನೀಡಿದರು.ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಗ್ಯಾರಂಟಿ ಯೋಜನೆಗಳ ಕುರಿತು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ಅವರೇ ಈಗಾಗಲೇ ನಾನು ಹೇಳಿದ್ದೊಂದು, ಬರೆದಿದ್ದೊಂದು ಎಂದು ಹೇಳಿದ್ದಾರಲ್ಲ ಎಂದು ಮರು ಪ್ರಶ್ನಿಸಿದ ಅವರು, ರಾಯರಡ್ಡಿ ಅವರು ಹಿರಿಯರಿದ್ದಾರೆ. ಅವರು ಸಚಿವರಾಗಬೇಕು. ಮೂರು ಬಾರಿ ಆಯ್ಕೆಯಾಗಿರುವ ಶಾಸಕ ರಾಘವೇಂದ್ರ ಹಿಟ್ನಾಳ ಸಚಿವರಾಗಬೇಕು. ಜತೆಗೆ ನಾನು ಸಚಿವನಾಗಿ ಮುಂದುವರಿಯಬೇಕೆಂದು ಹಾಸ್ಯಭಾಷೆಯಲ್ಲಿ ಹೇಳಿ ಜಾರಿಕೊಂಡರು.