-ಸಂಸದ ಗೋವಿಂದ ಕಾರಜೋಳ ಹೇಳಿಕೆ । ವಿವಿಧ ಇಲಾಖೆಗಳ ನೇತೃತ್ವ ಕೃಷಿ ಮೇಳ ಮತ್ತು ನೂತನ ಕೃಷಿ ಪದವಿ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಹಿರಿಯೂರು
140 ಕೋಟಿ ಜನಸಂಖ್ಯೆಗೆ ಆಹಾರವನ್ನು ಪೂರೈಸುತ್ತಿರುವ ಏಕೈಕ ರೈತಾಪಿ ವರ್ಗಕ್ಕೆ ನೀರಾವರಿ ಸೌಲಭ್ಯ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.ಬಬ್ಬೂರು ಫಾರಂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಮಹಾವಿದ್ಯಾಲಯ ಕೃಷಿ ವಿಜ್ಞಾನ ಕೇಂದ್ರ ಮತ್ತು ವಿವಿಧ ಇಲಾಖೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಕೃಷಿ ಮೇಳ ಮತ್ತು ನೂತನ ಕೃಷಿ ಪದವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 66 ಲಕ್ಷ ಹೆಕ್ಟೇರ್ ನೀರಾವರಿ ಮಾಡಲು ಅವಕಾಶವಿದ್ದು 40 ಲಕ್ಷ ಹೆಕ್ಟೇರ್ ಬೃಹತ್ ನೀರಾವರಿ ಹಾಗೂ 10 ಲಕ್ಷ ಹೆಕ್ಟೇರ್ ಸಣ್ಣ ನೀರಾವರಿ ಹಾಗೂ 16 ಲಕ್ಷ ಹೆಕ್ಟೇರ್ ರೈತರು ಸ್ವಯಂ ಖರ್ಚಿನಲ್ಲಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಸ್ವಾತಂತ್ರ‍್ಯ ಬಂದ ನಂತರ ಹಿಂದೆ ಬಿದ್ದಿರುವುದು ಸರ್ಕಾರಗಳು ಮಾತ್ರ. ಎಲ್ಲಿಯವರೆಗೂ ನೀರಾವರಿಗೆ ಆದ್ಯತೆ ನೀಡುವುದಿಲ್ಲವೋ ಅಲ್ಲಿಯವರೆಗೂ ರೈತರ ಬದುಕು ಹಸನಾಗುವುದಿಲ್ಲ.
ಕೃಷಿ ಇಲಾಖೆ ಇಂದು ಅಧಿಕಾರಿಗಳ ಇಲಾಖೆಯಾಗಿದೆ. ಹೊಲಗಳಿಗೆ ಹೋಗಿ ಮಾರ್ಗದರ್ಶನ ಮಾಡುವ ಅಧಿಕಾರಿಗಳೇ ಇಲ್ಲ. ಕೂತಲ್ಲೇ ಮೊಬೈಲ್ ನೋಡಿ ಕೆಲಸ ಮಾಡುವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಆಡಳಿತದ ಅನುಭವದ ಕೊರತೆ ಇದೆ.
ಇತ್ತೀಚೆಗೆ ಉತ್ತಮ ಮಳೆಯಾಗಿದ್ದು ಅಂತರ್ಜಲ ವೃದ್ಧಿಯಾಗಿದೆ. ಆದರೆ, ಸರ್ಕಾರ ರೈತರಿಗೆ ವಿದ್ಯುತ್ ಕೊಡಬೇಕು. ಕಳೆದ ಬಾರಿ 17500 ಮೆಗಾ ವ್ಯಾಟ್ ವಿದ್ಯುತ್ ಖರ್ಚಾಗಿದ್ದು, ಈ ಬಾರಿ 20 ಸಾವಿರಕ್ಕೂ ಅಧಿಕ ಮೆಗಾವ್ಯಾಟ್ ವಿದ್ಯುತ್ ಬೇಕಿದೆ. ರಾಜ್ಯ ಸರ್ಕಾರ ರೈತರಿಗೆ ವಿದ್ಯುತ್ ವ್ಯವಸ್ಥೆ ಮಾಡಿಕೊಡಲು ಮುಂದಾಗಬೇಕು ಎಂದರು.
ಬಬ್ಬೂರು ಗ್ರಾಪಂ ಅಧ್ಯಕ್ಷ ಎಂ ಚಿತ್ತಯ್ಯ, ಸಹ ಸಂಶೋಧನಾ ನಿರ್ದೇಶಕ ಡಾ. ಶರಣಪ್ಪ ಜಂಗoಡಿ, ಕುಲಪತಿ ಡಾ.ಆರ್.ಸಿ.ಜಗದೀಶ್, ಆಡಳಿತ ಮಂಡಳಿ ಸದಸ್ಯರಾದ ಡಾ.ಬಿ.ಕೆ.ಕುಮಾರಸ್ವಾಮಿ, ಡಾ.ಪಿ.ಕೆ.ಬಸವರಾಜ್, ಡಾ.ಬಿ. ಹೇಮ್ಲಾ ನಾಯ್ಕ್, ಡಾ.ದುಷ್ಯಂತ್ ಕುಮಾರ್, ಡಾ.ಕೆ.ಟಿ.ಗುರುಮೂರ್ತಿ, ಕುಲಸಚಿವ ಡಾ.ಎಸ್.ಯು ಪಾಟೀಲ್, ತೋಟಗಾರಿಕೆ ಉಪ ನಿರ್ದೇಶಕಿ ಸವಿತಾ, ಜಂಟಿ ಕೃಷಿ ನಿರ್ದೇಶಕ ಡಾ.ಮಂಜುನಾಥ್, ನಬಾರ್ಡ್ ಎಜಿಎಂ ಕವಿತಾ ಶಶಿಧರ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ, ರೈತ ಸಂಘದ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ, ಕೆಸಿ.ಹೊರಕೇರಪ್ಪ, ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಕುಮಾರ್ ಇದ್ದರು.
ಫೋಟೋ: ಬಬ್ಬೂರು ಫಾರಂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಕೃಷಿ ಮೇಳ ಮತ್ತು ನೂತನ ಕೃಷಿ ಪದವಿ ಕಾರ್ಯಕ್ರಮವನ್ನು ಸಂಸದ ಗೋವಿಂದ ಕಾರಜೋಳ ಉದ್ಘಾಟನೆ ಮಾಡಿ ಮಾತನಾಡಿದರು.