ನಾನು ಬೇರೆಯವರ ಹೆಸರಲ್ಲಿ ಚುನಾವಣೆ ಮಾಡಲ್ಲ

KannadaprabhaNewsNetwork |  
Published : Jul 09, 2025, 12:18 AM ISTUpdated : Jul 09, 2025, 12:37 PM IST
ಪಾಟೀಲ | Kannada Prabha

ಸಾರಾಂಶ

ನಾನು ಬೇರೆಯವರ ಹೆಸರಲ್ಲಿ ಚುನಾವಣೆ ಎದುರಿಸದೆ, ಮಾಡಿದ ಅಭಿವೃದ್ಧಿ ಕಾರ್ಯ, ಸ್ವಂತ ಬಲದ ಮೇಲೆ ರಾಜಕಾರಣ ಮಾಡುತ್ತೇನೆ. ಚುನಾವಣೆಯಲ್ಲಿ ಟೀಕೆ ಟಿಪ್ಪಣಿ ಪರಿಗಣನೆಗೆ ಬರಲ್ಲ. ಹೀಗಾಗಿ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಯಾರಿಗೂ ಸರಿಯಲ್ಲ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

  ವಿಜಯಪುರ :  ನಾನು ಬೇರೆಯವರ ಹೆಸರಲ್ಲಿ ಚುನಾವಣೆ ಎದುರಿಸದೆ, ಮಾಡಿದ ಅಭಿವೃದ್ಧಿ ಕಾರ್ಯ, ಸ್ವಂತ ಬಲದ ಮೇಲೆ ರಾಜಕಾರಣ ಮಾಡುತ್ತೇನೆ. ಚುನಾವಣೆಯಲ್ಲಿ ಟೀಕೆ ಟಿಪ್ಪಣಿ ಪರಿಗಣನೆಗೆ ಬರಲ್ಲ. ಹೀಗಾಗಿ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಯಾರಿಗೂ ಸರಿಯಲ್ಲ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೀಕೆಗಳು ಅಳಿಯುತ್ತವೆ. ಅಭಿವೃದ್ಧಿ ಕೆಲಸ ಜನ ಮಾನಸದಲ್ಲಿ ಉಳಿಯುತ್ತವೆ ಎಂಬ ಸಿದ್ಧಾಂತದೊಂದಿಗೆ ರಾಜಕಾರಣ ಮಾಡುತ್ತಿದ್ದೇನೆ. ಯಾರು ಸಮರ್ಥರು, ಅಸಮರ್ಥರು ಎಂಬುದನ್ನು ಜನ ನಿರ್ಧರಿಸುತ್ತಾರೆ. ಇಂಡಿ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಂಡು ಜನರ ಹೃದಯಕ್ಕೆ ಹತ್ತಿರವಾಗಿದ್ದೇನೆ. ಹೀಗಾಗಿ ಟೀಕೆಗಳಿಗೆ ನಾನು ಉತ್ತರ ಕೊಡಲ್ಲ. ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕಾಗಿದ್ದ ಇಂಡಿಯನ್ನು ಅಭಿವೃದ್ಧಿ ಹೊಂದಿದ ತಾಲೂಕಾಗಿ ಪರಿವರ್ತಿಸಲಾಗಿದೆ. ನಾನು ಕೊಟ್ಟ ಮಾತಿನಂತೆ ಬದ್ಧತೆಯಿಂದ ಕೆಲಸ ಮಾಡುವ ರಾಜಕಾರಣಿ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಲ್ಲ. ಬೇರೆಯವರೂ ಮಾಡಬಾರದು ಎಂದು ತಿಳಿಸಿದರು.

ಇಂಡಿ ಭಾಗದಲ್ಲಿ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭ, ಕೆರೆ ತುಂಬುವ ಯೋಜನೆ, ನಿಂಬೆ ಮಂಡಳಿ, ನಿಂಬೆ ಜಿಐ ಟ್ಯಾಗ್, ಸರ್ಕಾರಿ ಕಚೇರಿಗಳ ಆರಂಭ, ಕುಡಿಯುವ ನೀರಿನ ಯೋಜನೆ ಸೇರಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಂಡು ಜನರಿಗೆ ನೀಡಿದ್ದ ಮಾತಿನಂತೆ ನಡೆದಿದ್ದೇನೆ.

ರೇವಣಸಿದ್ದೇಶ್ವರ ಏತ ನೀರಾವರಿ ಭೂಮಿಪೂಜೆ ಸಂದರ್ಭ ನಾನು ರಾಜಕಾರಣ ಮಾಡಿಲ್ಲ. ನಮ್ಮ ಭಾಗಕ್ಕೆ ನೀರಾವರಿ ಆಗುತ್ತದೆಂದು ಮುಕ್ತ ಮನಸ್ಸಿನಿಂದ ಭಾಗವಹಿಸಿದೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯನ್ನು ಗೋವಿಂದ ಕಾರಜೋಳರು ಅನುಮೋದನೆ ಕೊಡಿಸಿದ್ದರಿಂದ ಅವರಿಗೆ ಸದನದಲ್ಲಿ ಮಾತ್ರವಲ್ಲದೆ ಅವರ ಮನೆಗೆ ಹೋಗಿ ಅಭಿನಂದಿಸಿದ್ದೇನೆ. ಈ ಯೋಜನೆಗೆ ಅನುದಾನ ಕೊಟ್ಟಿದ್ದು ನಮ್ಮ ಸರ್ಕಾರ. ಮಾಹಿತಿ ಇಲ್ಲದಿದ್ದರೆ ಇಲ್ಲಸಲ್ಲದ್ದನ್ನು ಮಾತಾಡುವವರು ಕಾರಜೋಳರನ್ನು ಅಥವಾ ಬಸವರಾಜ ಬೊಮ್ಮಾಯಿ ಅವರನ್ನು ಕೇಳಲಿ ಎಂದು ಹೇಳಿದರು.

ಸರ್ಕಾರ ಬಂದು ಎರಡು ವರ್ಷಗಳಾಗಿದ್ದು ಗ್ಯಾರಂಟಿ ಯೋಜನೆಗಳು ಹಾಗೂ ಸಾಧನೆಗಳ ಬಗ್ಗೆ ಕೇಳಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಮಾತ್ರ ಸಂಘಟನೆ ಮಾಡುತ್ತೇವೆ. ಆದರೆ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಮುಂದಿನ 2028 ರ ಚುನಾವಣೆ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದಾರೆ. ಶಾಸಕರಿಗೆ ಅವರದ್ದೇ ಆದ ಸಮಸ್ಯೆಗಳು, ಅನಾನುಕೂಲತೆಗಳಿವೆ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಇರಲ್ಲ, ಪವರ್ ಶೇರಿಂಗ್ ರಾಜ್ಯದಲ್ಲಿ ಬೇರೆಯಿದೆ ಜಿಲ್ಲೆಯಲ್ಲಿ ಬೇರೆಯಿದೆ.

ಯಾರು ಮಾತು ಕೊಟ್ಟಿದ್ದಾರೆ, ಯಾರು ಹೇಳಿದ್ದಾರೆ ಅವರನ್ನೇ ಕೇಳಿ ಎಂದು ಹೇಳಿದರು.

ಸರ್ಕಾರದಲ್ಲಿ ಕೆಲಸ ಕಾರ್ಯದ ಬಗ್ಗೆ ಸುರ್ಜೆವಾಲಾ ಕೇಳಿದರು. ನಾವು ವಾಸ್ತವಿಕತೆಯನ್ನು ಹೇಳಿದ್ದೇವೆ. ನಮ್ಮದು ಮೊದಲು ಅಭಿವೃದ್ದಿಗೆ ಒತ್ತು ನೀಡುವ ಜಾಯಮಾನ ನಂತರ ಅಧಿಕಾರದ ವಿಚಾರ. ನಾವೇನು ಸನ್ಯಾಸಿಗಳಲ್ಲ. ಸಚಿವನನ್ನಾಗಿ ಮಾಡುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟದ್ದು. ಚುನಾವಣೆ ವೇಳೆ ಏನೆಲ್ಲಾ ಚರ್ಚೆಗಳಾಗಿವೆ ಎಂಬುದನ್ನು ರಾಜ್ಯ ಉಸ್ತುವಾರಿಗಳಿಗೆ ನೆನಪಿಸಿದ್ದೇವೆ. ಜಿಲ್ಲೆಯಲ್ಲಿ ಅಧಿಕಾರ ಹಂಚಿಕೆ ಕುರಿತು ಚುನಾವಣಾ ಪೂರ್ವ ಮಾತನಾಡಿದ್ದನ್ನು ಹೇಳಿದ್ದೇವೆ. ಯಾವ ಅಳತೆಗೋಲಿನ ಮೇಲೆ ಸಚಿವರನ್ನಾಗಿ ಮಾಡುತ್ತಾರೆ ಗೊತ್ತಿಲ್ಲ.

- ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ

PREV
Read more Articles on

Latest Stories

ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ರಾತ್ರೋ ರಾತ್ರಿ ಬೀಗ - ಭಕ್ತರಲ್ಲಿ ಸಂಚಲನ
ಕಾರ್ಕಳ ಪರಶುರಾಮನ ವಿಗ್ರಹ ಕಂಚಲ್ಲ, ಹಿತ್ತಾಳೆ: ಚಾರ್ಜ್‌ಶೀಟ್‌!
ಡ್ರಗ್ಸ್‌ ಸಾಗಣೆ ಕೇಸಲ್ಲಿ ಕಲಬುರಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಂಧನ